ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಂಗಾರಪೇಟೆ: ಅಂತರ್ಜಲ ಕುಸಿತ, ಕುಡಿವ ನೀರಿಗೆ ಹೈರಾಣ

ಅಂತರ್ಜಲ ಮರುಪೂರಣ * ಇಂಗುಗುಂಡಿ ನಿರ್ಮಾಣಕ್ಕೆ ರೈತರಿಗೆ ಸಲಹೆ
ಮಂಜುನಾಥ.ಎಸ್
Published 13 ಮೇ 2024, 5:59 IST
Last Updated 13 ಮೇ 2024, 5:59 IST
ಅಕ್ಷರ ಗಾತ್ರ

ಬಂಗಾರಪೇಟೆ: ಬಿಸಿಲಿನ ತಾಪಮಾನ ದಿನೇ ದಿನೇ ಏರಿಕೆಯಾಗುತ್ತಿದೆ. ಜನ ಹಾಗೂ ಜಾನುವಾರು ಕುಡಿಯುವ ನೀರಿಗೆ ಹಾಹಾಕಾರ ಹೆಚ್ಚುತ್ತಿದೆ. ಒಂದೊಂದು ಕೊಡ ನೀರಿಗಾಗಿ ಜನರು ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿತವಾಗುತ್ತಿದೆ. ಮುಂದಿನ ದಿನಗಳಲ್ಲಿ ನೀರಿನ ಬವಣೆ ಮತ್ತಷ್ಟು ಗಂಭೀರವಾಗಲಿದೆ ಎನ್ನುವ ಆತಂಕ ಕಾಡುತ್ತಿದೆ.

ಎರಡು ವರ್ಷಗಳ ಹಿಂದೆ ಕೆ.ಸಿ.ವ್ಯಾಲಿ ಯೋಜನೆಯಡಿ ಕೆರೆಗಳಿಗೆ ನೀರು ಹರಿಸಿದ್ದ ಸಮಯದಲ್ಲೇ ಉತ್ತಮವಾಗಿ ಮಳೆ ಸುರಿದು ಕೆರೆ, ಕೊಳವೆ ಬಾವಿಗಳ ನೀರಿನ ಇಳುವರಿಯಲ್ಲಿ ಏರಿಕೆ ಆಗಿತ್ತು. ಕಳೆದ ವರ್ಷದಲ್ಲಿ ನೀರಿನ ಬವಣೆ ಅಷ್ಟಾಗಿ ಕಂಡು ಬಂದಿರಲಿಲ್ಲ. ಈ ವರ್ಷ ಬಹುತೇಕ ಕೆರೆ, ಕುಂಟೆಗಳು ಬತ್ತಿ ಹೋಗಿವೆ. ಗ್ರಾಮೀಣ ಭಾಗದಲ್ಲಿ ಜನರಿಗೆ ಅಗತ್ಯ ನೀರು ಪೂರೈಕೆ ಮಾಡಲು ಪರದಾಡುವಂತಾಗಿದೆ.

ಕೆರೆಗಳಿಗೆ ಕೆ.ಸಿ.ವ್ಯಾಲಿ ಯೋಜನೆಯಡಿ ಹರಿಸಲಾಗಿದ್ದ ನೀರು ಕೆಲವು ಕೆರೆಗಳಲ್ಲಿ ಅಲ್ಪಸ್ವಲ್ಪ ಉಳಿದಿದೆ. ಆದರೆ, ಹಸಿರು ಬಣ್ಣಕ್ಕೆ ತಿರುಗಿರುವ ಕಾರಣ ದನ–ಕರು ಕುಡಿಯುವುದಕ್ಕೆ ಯೋಗ್ಯವಾಗಿಲ್ಲದಂತಾಗಿದೆ. ಅದೇ ನೀರು ಶೋಧಿಸಿ ದನ–ಕರುಗಳಿಗೆ ಕುಡಿಯುವುದಕ್ಕೆ ಉಪಯೋಗಿಸಲಾಗುತ್ತಿದೆ. ಬಿಸಿಲಿನ ತಾಪಮಾನ ಕನಿಷ್ಠ 22 ಡಿಗ್ರಿ, ಗರಿಷ್ಠ ಉಷ್ಣಾಂಶ 38 ದಾಖಲಾಗುತ್ತಿದೆ. ಜನರು ತಮ್ಮ ದಾಹ ನೀಗಿಸಿಕೊಂಡು ರಾಸುಗಳನ್ನು ಕಾಪಾಡಿಕೊಳ್ಳಲು ಹೆಣಗಾಡುತ್ತಿದ್ದಾರೆ.

ಅಂತರ್ಜಲ ಮಟ್ಟ ಪಾತಾಳಕ್ಕೆ ಇಳಿದಿದೆ. 1200 ರಿಂದ 1500 ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಇದಕ್ಕೆ ಮಳೆ ಕೊರತೆ ಕಾರಣವಾಗಿದೆ. ರೈತರು ಕೃಷಿ ಮಾಡಬೇಕು ಎನ್ನುವ ಉದ್ದೇಶದಿಂದ ಸಾಲಸೋಲ ಮಾಡಿ, ಕೊಳವೆ ಬಾವಿ ಕೊರೆಯಿಸಲು ಮುಂದಾಗುತ್ತಿದ್ದಾರೆ.

ಖರ್ಚು: 0ದಿಂದ 300 ಅಡಿ ಕೊಳವೆ ಬಾವಿ ಕೊರೆಯಲು ಒಂದು ಅಡಿಗೆ ₹110, 300ರಿಂದ 400 ಅಡಿಗೆ ₹115, 500ರಿಂದ 600 ಅಡಿಗೆ ₹120 ಹೀಗೆಯೇ ಅಡಿಗಳ ಆಳ ಹೆಚ್ಚಾದಂತೆ ಹಣ ಹೆಚ್ಚಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಒಂದು ಕೊಳವೆ ಬಾವಿ ಕೊರೆಯಿಸಲು ಕೆಸಿಂಗ್ ಖರ್ಚು ಸೇರಿ ₹1.5ಲಕ್ಷ ದಿಂದ ₹2ಲಕ್ಷ ಹಣ ವ್ಯಯವಾಗುತ್ತದೆ ಎನ್ನುತ್ತಾರೆ ರೈತರು.

ಕೊಳವೆ ಬಾವಿಗಳ ನೀರಿನ ಮಟ್ಟ ಪಾತಾಳಕ್ಕೆ ಕುಸಿದಿದೆ. ಕಳೆದ ಎರಡು ವರ್ಷಗಳಿಂದ 300 ರಿಂದ 400 ಅಡಿಗಳಲ್ಲಿ ಉತ್ತಮ ನೀರು ಇತ್ತು. ಆಗ 13 ರಿಂದ 15 ಪೈಪ್‌ಗಳು ಇದ್ದವು. ಈಗ ನೀರಿನ ಮಟ್ಟ 1200 ರಿಂದ 1500 ಅಡಿಗೆ ಕುಸಿತಗೊಂಡಿರುವ ಕಾರಣ 25 ರಿಂದ 30 ಪೈಪ್‌ ಬಿಡಲಾಗುತ್ತಿದೆ.

ಮಳೆ ನೀರು ಇಂಗಿಸಿದರೆ ಅಂತರ್ಜಲ ಮಟ್ಟ ಕುಸಿತ ತಡೆಯಬಹುದು ಎನ್ನುವುದು ಕೃಷಿ ಹೊಂಡ ಯೋಜನೆ ಉದ್ದೇಶ. ಸುತ್ತಲಿನ ಕೊಳವೆ ಬಾವಿಗಳು ಬತ್ತಬಾರದು ಎನ್ನುವ ಉದ್ದೇಶದಿಂದ ಇತ್ತೀಚೆಗೆ ಚೆಕ್ ಡ್ಯಾಂ, ಕೃಷಿ ಹೊಂಡ, ಬದುಗಳನ್ನು ನಿರ್ಮಿಸಲಾಗುತ್ತಿದೆ. ಇಂತಹ ಯೋಜನೆಗಳನ್ನು ಜಾರಿಗೊಳಿಸಿದರೂ ಜನರು ಸಮರ್ಪಕ ರೀತಿಯಲ್ಲಿ ಬಳಸಿಕೊಳ್ಳದಿರುವುದು ವಿಷಾದದ ಸಂಗತಿ ಎನ್ನುತ್ತಾರೆ ಕೆಲ ಅಧಿಕಾರಿಗಳು.

ಅಂತರ್ಜಲ ಮರುಪೂರಣ ಮಾಡಲು ಇಂಗುಗುಂಡಿ ಮೂಲಕ ನೀರು ಇಂಗಿಸುವುದು ಉತ್ತಮ ವಿಧಾನ. ನೀರು ಉಳಿಸುವ, ಗಿಡವನ್ನು ಬೆಳೆಸುವ, ನೀರು ಮರುಬಳಸುವ ವಿಧಾನವನ್ನು ಜನರು ಅರಿಯಬೇಕಾಗಿದೆ.

ಕೊಳವೆ ಬಾವಿ
ಕೊಳವೆ ಬಾವಿ
ಅಂತರ್ಜಲ ಮಟ್ಟ ಕುಸಿತಗೊಂಡಿರುವ ಕಾರಣ ಪೈಪ್‌ ಬಿಡುತ್ತಿರುವ ರೈತ
ಅಂತರ್ಜಲ ಮಟ್ಟ ಕುಸಿತಗೊಂಡಿರುವ ಕಾರಣ ಪೈಪ್‌ ಬಿಡುತ್ತಿರುವ ರೈತ

ಕೆರೆ ಕಟ್ಟೆ ಬಾವಿಗಳನ್ನು ರಕ್ಷಿಸಬೇಕು. ಮಳೆಯಾದಾಗ ಹರಿದು ವ್ಯರ್ಥವಾಗಿ ಹಳ್ಳ ಹೊಳೆ ಸೇರುವ ನೀರು ತಡೆದು ಇಂಗಿಸಬೇಕು

–ವರದರಾಜ ಪ್ರಗತಿಪರ ರೈತ ಮಿಟ್ಟಹಳ್ಳಿ ನಿರ್ದೇಶಕ

ಪ್ರತಿ ಕೊಳವೆ ಬಾವಿಗಳಿಗೂ ಮಳೆ ಬಂದ ವೇಳೆ ನೀರು ಇಂಗಿಸುವ ಗುಂಡಿಗಳನ್ನು ನಿರ್ಮಾಣ ಮಾಡಬೇಕು. ನೀರು ಇಂಗಿಸುವ ಕ್ರಮ ಅನುಷ್ಠಾನಕ್ಕೆ ತಂದರೆ ಮಾತ್ರ ಮುಂದಿನ ದಿನಗಳಲ್ಲಿ ಅಂತರ್ಜಲ ಮಟ್ಟ ಸುಧಾರಿಸುತ್ತದೆ

–ಕೆ.ಎಂ ಮಂಜುನಾಥ ಕಾರ್ಯದರ್ಶಿ ತಾಲ್ಲೂಕು ಕೃಷಿಕ ಸಮಾಜ

ಮಳೆಗಾಲ ಸಂದರ್ಭದಲ್ಲಿ ಇಂಗು ಗುಂಡಿ ಬದು ಕೃಷಿ ಹೊಂಡಗಳ ನಿರ್ಮಾಣ ಸೇರಿದಂತೆ ಹಲವು ವೈಜ್ಞಾನಿಕ ವಿಧಾನಗಳಿಂದ ಮಳೆ ನೀರು ಸಂರಕ್ಷಿಸಬಹುದು.

–ಆದಿನಾರಾಯಣ ಅಧ್ಯಕ್ಷ ಗ್ರಾಮ ಪಂಚಾಯಿತಿ ಕಾಮಸಮುದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT