ಬುಧವಾರ, ಜನವರಿ 22, 2020
23 °C

ವಚನಾನಂದ ಸ್ವಾಮೀಜಿ ಬೇಡಿಕೆ ಸಮಂಜಸವಲ್ಲ: ಸಚಿವ ನಾಗೇಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಎಲ್ಲಾ ಧರ್ಮದ ಸ್ವಾಮೀಜಿಗಳು ಯಾವುದೇ ವಿಚಾರವಾಗಿ ಮುಖ್ಯಮಂತ್ರಿಗಳಿಗೆ ಹಾಗೂ ಸರ್ಕಾರಕ್ಕೆ ಸಲಹೆ ನೀಡಲಿ. ಅದನ್ನು ಬಿಟ್ಟು ಸಾರ್ವಜನಿಕ ವೇದಿಕೆಯಲ್ಲಿ ಬೆದರಿಕೆ ಹಾಕುವುದು ಸರಿಯಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್ ಹೇಳಿದರು.

ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯದ ವಚನಾನಂದ ಸ್ವಾಮೀಜಿಯು ಶಾಸಕ ಮುರುಗೇಶ ನಿರಾಣಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪರ ಮೇಲೆ ಒತ್ತಡ ಹಾಕಿದ ಬಗ್ಗೆ ಇಲ್ಲಿ ಗುರುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ‘ಸ್ವಾಮೀಜಿಗಳು ಆ ರೀತಿ ಕೇಳಿರುವುದು ಸಮಂಜಸವಲ್ಲ’ ಎಂದರು.

‘ಸ್ವಾಮೀಜಿಗಳು ನಿರಾಣಿ ಅವರಿಗೆ ಸಚಿವ ಸ್ಥಾನ ಕೊಡುವಂತೆ ಮುಖ್ಯಮಂತ್ರಿಗಳಿಗೆ ಸಾರ್ವಜನಿಕವಾಗಿ ಬೆದರಿಕೆ ಹಾಕಿರುವುದು, ಖಡಾಖಂಡಿತವಾಗಿ ಹೇಳಿರುವುದು ಸರಿಯಲ್ಲ. ಸ್ವಾಮೀಜಿಗಳು ವೈಯಕ್ತಿಕವಾಗಿ ಭೇಟಿಯಾಗಿ ಸಲಹೆ ನೀಡಿದರೆ ಮುಖ್ಯಮಂತ್ರಿಗಳು ಅದನ್ನು ಪರಿಗಣಿಸುತ್ತಾರೆ. ಸ್ವಾಮೀಜಿಗಳು ವೇದಿಕೆಯಲ್ಲಿ ಆ ರೀತಿ ವರ್ತಿಸಿದರೆ ಮುಖ್ಯಮಂತ್ರಿಗಳ ಘನತೆ ಏನಾಗಬೇಕು?’ ಎಂದು ಪ್ರಶ್ನಿಸಿದರು.

‘ಎಲ್ಲಾ ಸಮುದಾಯಗಳಲ್ಲೂ ಸ್ವಾಮೀಜಿಗಳಿದ್ದಾರೆ. ನಮ್ಮ ಸಮುದಾಯಕ್ಕೆ ಛಲವಾದಿ ಸ್ವಾಮೀಜಿಯಿದ್ದಾರೆ. ಆದರೆ, ಅವರು ಎಂದಿಗೂ ಯಾವುದೇ ಬೇಡಿಕೆ ಮುಂದಿಟ್ಟಿಲ್ಲ. ಪ್ರಜಾಪ್ರಭುತ್ವದಲ್ಲಿ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳನ್ನು ಬೇರೆಯವರು ಸೋಲಿಸಲು ಸಾಧ್ಯವಿಲ್ಲ. ಸೋಲು ಗೆಲುವು ಜನರೇ ನಿರ್ಧರಿಸಬೇಕು’ ಎಂದರು.

‘ಕೋಲಾರದ ಜಿಲ್ಲಾಸ್ಪತ್ರೆ ಆವರಣದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಉದ್ಘಾಟನೆ ಸಮಾರಂಭವನ್ನು ಕಾರಣಾಂತರದಿಂದ ಮುಂದೂಡಲಾಗಿದೆ. ಜನರಿಗೆ ಅನುಕೂಲವಾಗಲೆಂದು ಸದ್ಯಕ್ಕೆ ಉದ್ಘಾಟನೆ ಇಲ್ಲದೆಯೇ ಆಸ್ಪತ್ರೆ ಬಳಸಲು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಮುಂದೊಂದು ದಿನ ಆಸ್ಪತ್ರೆ ಉದ್ಘಾಟನೆ ಮಾಡಿದರೂ ನಡೆಯುತ್ತದೆ. ಈ ಸಂಗತಿಯನ್ನು ಆರೋಗ್ಯ ಸಚಿವರ ಗಮನಕ್ಕೂ ತರಲಾಗಿದೆ’ ಎಂದು ವಿವರಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು