ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ಗೆ ಜಿಲ್ಲೆ ಸಂಪೂರ್ಣ ಸ್ತಬ್ಧ

ರಸ್ತೆಗಿಳಿಯದ ಕೆಎಸ್‌ಆರ್‌ಟಿಸಿ ಬಸ್‌, ನಡೆಯದ ವಹಿವಾಟು
Last Updated 24 ಮೇ 2020, 13:18 IST
ಅಕ್ಷರ ಗಾತ್ರ

ಕೋಲಾರ: ಕೊರೊನಾ ಸೋಂಕು ತಡೆಗಾಗಿ ರಾಜ್ಯ ಸರ್ಕಾರ ಲಾಕ್‌ಡೌನ್‌ ಘೋಷಿಸಿದ ಹಿನ್ನೆಲೆಯಲ್ಲಿ ಭಾನುವಾರ ಇಡೀ ಜಿಲ್ಲೆ ಸಂಪೂರ್ಣ ಸ್ತಬ್ಧವಾಯಿತು.

ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶ ಸೇರಿದಂತೆ ಜಿಲ್ಲೆಯಾದ್ಯಂತ ಜನರು ಮನೆಗಳಲ್ಲೇ ಉಳಿದು ಲಾಕ್‌ಡೌನ್‌ಗೆ ಬೆಂಬಲ ಸೂಚಿಸಿದರು. ವಾಣಿಜ್ಯ ವಹಿವಾಟು, ಬಸ್‌ ಸೇವೆ ಸಂಪೂರ್ಣ ಸ್ಥಗಿತಗೊಂಡಿತು. ವರ್ತಕರು ಸ್ವಇಚ್ಛೆಯಿಂದ ಅಂಗಡಿಗಳನ್ನು ಮುಚ್ಚಿ ಕೋವಿಡ್‌–19 ವಿರುದ್ಧದ ಹೋರಾಟಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದರು.

ಕೆಎಸ್‌ಆರ್‌ಟಿಸಿ ಬಸ್‌ಗಳು, ಆಟೊಗಳು ಹಾಗೂ ಸರಕು ಸಾಗಣೆ ವಾಹನಗಳು ರಸ್ತೆಗೆ ಇಳಿಯಲೇ ಇಲ್ಲ. ಸದಾ ಜನಜಂಗುಳಿ ಹಾಗೂ ವಾಹನ ದಟ್ಟಣೆಯಿಂದ ಗಿಜಿಗುಡುತ್ತಿದ್ದ ಮಾರುಕಟ್ಟೆಗಳು, ವಾಣಿಜ್ಯ ಪ್ರದೇಶಗಳು ಹಾಗೂ ರಸ್ತೆಗಳು ಭಣಗುಡುತ್ತಿದ್ದವು. ಎಪಿಎಂಸಿಗಳು ಹಾಗೂ ರೇಷ್ಮೆ ಗೂಡು ಮಾರುಕಟ್ಟೆಗಳನ್ನು ಬಂದ್‌ ಮಾಡಲಾಯಿತು.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮುಂಚಿತವಾಗಿ ಶನಿವಾರವೇ ದಿನಸಿ, ತರಕಾರಿ ಸೇರಿದಂತೆ ದಿನಬಳಕೆ ವಸ್ತುಗಳನ್ನು ಖರೀದಿಸಿದ್ದ ಸಾರ್ವಜನಿಕರು ಅಂಗಡಿಗಳತ್ತ ಮುಖ ಮಾಡಲಿಲ್ಲ. ಕೋಳಿ ಹಾಗೂ ಕುರಿ ಮಾಂಸ ಮತ್ತು ಮೀನಿನ ಮಾರಾಟಕ್ಕೆ ಸರ್ಕಾರ ವಿನಾಯಿತಿ ನೀಡಿದ್ದರಿಂದ ಮಾಲೀಕರು ಅಂಗಡಿ ತೆರೆದು ವಹಿವಾಟು ನಡೆಸಿದರು. ಮಾಂಸ ಮತ್ತು ಮೀನಿನ ಅಂಗಡಿಗಳು ಗ್ರಾಹಕರಿಂದ ತುಂಬಿ ಹೋಗಿದ್ದವು.

ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಗಳು ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿದ್ದವು. ಬಾರ್‌, ರೆಸ್ಟೋರೆಂಟ್‌, ಬೇಕರಿ, ತಂಪು ಪಾನೀಯ ಅಂಗಡಿಗಳು, ಐಸ್‌ಕ್ರೀಮ್‌, ಚಾಟ್ಸ್‌ ಮಾರಾಟ ಮಳಿಗೆಗಳನ್ನು ಬಂದ್‌ ಮಾಡಲಾಗಿತ್ತು. ಪೆಟ್ರೋಲ್‌ ಬಂಕ್‌ಗಳು ತೆರೆದಿದ್ದರೂ ಗ್ರಾಹಕರ ಸಂಖ್ಯೆ ತೀರಾ ಕಡಿಮೆಯಿತ್ತು.

ಹಾಲಿನ ಬೂತ್‌ಗಳು ಹಾಗೂ ಔಷಧ ಮಾರಾಟ ಮಳಿಗೆಗಳು ಎಂದಿನಂತೆ ತೆರೆದಿದ್ದವು. ಲಾಕ್‌ಡೌನ್‌ ಕಾರಣಕ್ಕೆ ವಹಿವಾಟು ಕುಸಿಯುವ ಆತಂಕದಲ್ಲಿ ಹಾಲಿನ ಬೂತ್‌ಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಹಾಲು ಮತ್ತು ಮೊಸರು ತರಿಸಲಾಗಿತ್ತು. ಆದರೆ, ಹಾಲು ಮತ್ತು ಹಾಲಿನ ಉತ್ಪನ್ನಗಳು ಕ್ಷಣ ಮಾತ್ರದಲ್ಲಿ ಮಾರಾಟವಾದವು.

ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಪ್ರತಿನಿತ್ಯದಂತೆ ಸೇವೆ ಒದಗಿಸಿದವು. ಆದರೆ, ಹೊರ ರೋಗಿಗಳ ವಿಭಾಗವನ್ನು ಬಂದ್‌ ಮಾಡಲಾಗಿತ್ತು. ಆಸ್ಪತ್ರೆಗಳಲ್ಲಿ ತುರ್ತು ವೈದ್ಯಕೀಯ ಸೇವೆ ಮಾತ್ರ ನೀಡಲಾಯಿತು. ಬಹುತೇಕ ಆಸ್‍ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಕಡಿಮೆಯಿತ್ತು.

ಊಟಕ್ಕೆ ಅಲೆದಾಟ: ಹೋಟೆಲ್‌ಗಳನ್ನು ಸಂಪೂರ್ಣವಾಗಿ ಬಂದ್‌ ಮಾಡಿದ್ದರಿಂದ ಜನ ಜೀವನಕ್ಕೆ ತೀವ್ರ ತೊಂದರೆಯಾಯಿತು. ಹೋಟೆಲ್‌ಗಳ ಮೇಲೆ ಅವಲಂಬಿತರಾದ ಕೂಲಿ ಕಾರ್ಮಿಕರು ಹಾಗೂ ಗ್ರಾಹಕರು ಊಟ, ತಿಂಡಿಗಾಗಿ ಅಲೆದಾಡುತ್ತಿದ್ದ ದೃಶ್ಯ ಕಂಡುಬಂತು. ಹೋಟೆಲ್‌ಗಳಲ್ಲಿ ಆಹಾರ ಪದಾರ್ಥಗಳ ಪಾರ್ಸಲ್‌ಗೆ ಸರ್ಕಾರ ಅವಕಾಶ ನೀಡಿದ್ದರೂ ಮಾಲೀಕರು ಹೋಟೆಲ್‌ ತೆರೆಯುವ ಮನಸ್ಸು ಮಾಡಲಿಲ್ಲ.

ಪೊಲೀಸ್‌ ಬಂದೋಬಸ್ತ್‌: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರ ಸೇರಿದಂತೆ ಎಲ್ಲೆಡೆ ಪೊಲೀಸ್ ಗಸ್ತು ಹೆಚ್ಚಿಸಲಾಗಿತ್ತು. ಆಯಕಟ್ಟಿನ ಸ್ಥಳಗಳು, ವಾಣಿಜ್ಯ ಪ್ರದೇಶಗಳು, ಧಾರ್ಮಿಕ ಕೇಂದ್ರಗಳ ಸುತ್ತಮುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಹಿರಿಯ ಪೊಲೀಸ್‌ ಅಧಿಕಾರಿಗಳು ನಿಯಮಿತವಾಗಿ ಗಸ್ತು ನಡೆಸಿದರು. ಲಾಕ್‌ಡೌನ್‌ ನಿಯಮ ಉಲ್ಲಂಘಿಸಿ ರಸ್ತೆಗೆ ಬಂದ ವಾಹನ ಸವಾರರನ್ನು ಪೊಲೀಸರು ತಡೆದು ಮನೆಗೆ ವಾಪಸ್‌ ಕಳುಹಿಸುತ್ತಿದ್ದ ದೃಶ್ಯ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT