ಬುಧವಾರ, ಅಕ್ಟೋಬರ್ 28, 2020
24 °C
ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಸತ್ಯಭಾಮ ಹೇಳಿಕೆ

ಹಿರಿಯರ ಅನುಭವ ಅತ್ಯಮೂಲ್ಯ ಆಸ್ತಿ: ಜಿಲ್ಲಾಧಿಕಾರಿ ಸತ್ಯಭಾಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಹಿರಿಯ ನಾಗರಿಕರು ಬದುಕಿದ ರೀತಿ ಮತ್ತು ಅವರ ಅನುಭವ ಸಮಾಜಕ್ಕೆ ಅತ್ಯಮೂಲ್ಯ ಆಸ್ತಿ’ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ಹೇಳಿದರು.

ಇಲ್ಲಿ ಗುರುವಾರ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಮಾತನಾಡಿ, ‘ಹಿರಿಯ ನಾಗರಿಕರು ಯೌವ್ವನದಲ್ಲಿ ದುಡಿದು, ಸಮಾಜಕ್ಕೆ ಕೊಡುಗೆ ನೀಡುವ ಮೂಲಕ ಮಾರ್ಗದರ್ಶಕರಾಗಿದ್ದಾರೆ. ಆದರೆ, ಯುವಕ ಯುವತಿಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಧಾವಂತದಲ್ಲಿ ಹಿರಿಯರನ್ನು ಮರೆಯುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಈ ಹಿಂದೆ ಅವಿಭಕ್ತ ಕುಟುಂಬಗಳು ಹೆಚ್ಚಿನ ಪ್ರಮಾಣದಲ್ಲಿದ್ದವು. ಆದರೆ, ಈಗ ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿವೆ. ಹಿರಿಯ ನಾಗರಿಕರನ್ನು ನೋಡಿಕೊಳ್ಳುವ ಮನಸ್ಥಿತಿ ಇಲ್ಲವಾಗಿದೆ. ವಯೋವೃದ್ಧರಿಗೆ ನೀಡುತ್ತಿದ್ದ ಗೌರವ ಕಡಿಮೆಯಾಗುತ್ತಿದ್ದು, ದೇಶದಲ್ಲಿ ವೃದ್ಧಾಶ್ರಮ ಸಂಸ್ಕೃತಿ ತಲೆಯೆತ್ತಿದೆ’ ಎಂದು ವಿಷಾದಿಸಿದರು.

‘ಮನೆಯಲ್ಲಿನ ಹಿರಿಯ ನಾಗರಿಕರು ದೇವರ ಸಮಾನ. ತಂದೆ ತಾಯಿಯು ಮಕ್ಕಳಿಗೆ ಸಂಸ್ಕಾರ ಕಲಿಸಿ, ವಿದ್ಯಾಭ್ಯಾಸ ಕೊಡಿಸಿ ಸಮಾಜದಲ್ಲಿ ಸತ್ಪ್ರಜೆಗಳಾಗಿ ಮಾಡುತ್ತಾರೆ. ಅಂತಹ ತಂದೆ ತಾಯಿಯನ್ನು ಜೀವನದ ಕೊನೆವರೆಗೂ ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ’ ಎಂದು ಕಿವಿಮಾತು ಹೇಳಿದರು.

ಮಗುವಿನಂತ ಹೃದಯ: ‘ಅವಿಭಕ್ತ ಕುಟುಂಬಗಳಲ್ಲಿ ಹಿರಿಯ ನಾಗರಿಕರನ್ನು ಹೆಚ್ಚಾಗಿ ಕಾಣಬಹುದು. ಹಿರಿಯ ನಾಗರಿಕರದು ಮಗುವಿನಂತ ಹೃದಯವಾಗಿದ್ದು, ಅವರನ್ನು ಮಗುವಿನಂತೆಯೆ ಪೋಷಿಸಬೇಕು. ಹಿರಿಯರು ಕಲಿಸಿದ ಜೀವನ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ಆರ್‌.ರವಿಕುಮಾರ್ ತಿಳಿಸಿದರು.

‘ಮಕ್ಕಳಿಗೆ ತಂದೆ ತಾಯಿ ಸಂಪಾದಿಸಿದ ಆಸ್ತಿ ಹಾಗೂ ಹಣ ಬೇಕು. ಆದರೆ, ವಯೋವೃದ್ಧ ಪೋಷಕರನ್ನು ಕೊನೆವರೆಗೂ ಪೋಷಿಸಲು ಹಿಂದೇಟು ಹಾಕುತ್ತಾರೆ. ಹಿರಿಯ ನಾಗರಿಕರ ಸಬಲೀಕರಣಕ್ಕಾಗಿ ಸರ್ಕಾರ ಅನೇಕ ಯೋಜನೆ ಜಾರಿಗೊಳಿಸಿದೆ. ಅಧಿಕಾರಿಗಳು ಈ ಯೋಜನೆಗಳನ್ನು ಅರ್ಹರಿಗೆ ತಲುಪಿಸಬೇಕು’ ಎಂದು ಸಲಹೆ ನೀಡಿದರು.

ಜಿಲ್ಲೆಗೊಂದು ವೃದ್ಧಾಶ್ರಮ: ‘ಹಿರಿಯ ನಾಗರಿಕರ ಆರೈಕೆಗಾಗಿ ಸರ್ಕಾರ ಜಿಲ್ಲೆಗೊಂದು ವೃದ್ಧಾಶ್ರಮ ತೆರೆದಿದೆ. 60 ವರ್ಷ ದಾಟಿದ ನಾಗರಿಕರಿಗೆ ಸರ್ಕಾರದಿಂದ ಪಿಂಚಣಿ ಸೌಲಭ್ಯ ಕಲ್ಪಿಸಲಾಗಿದೆ. 65 ವರ್ಷ ಮೀರಿದ ಹಿರಿಯ ನಾಗರಿಕರಿಗೆ ವೃದ್ಧಾಪ್ಯ ವೇತನ ನೀಡಲಾಗುತ್ತಿದೆ. ಬಸ್ ಪ್ರಯಾಣದಲ್ಲಿ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ ಹಾಗೂ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಚ್‌.ಗಂಗಾಧರ್‌ ವಿವರಿಸಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಂ.ಜೆ.ಪಾಲಿ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಜಿಲ್ಲಾ ಅಧಿಕಾರಿ ಮುನಿರಾಜಪ್ಪ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ರಘುಪತಿ ಪಾಲ್ಗೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.