ಭಾನುವಾರ, ಜೂನ್ 20, 2021
28 °C
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿಕೆ

‘ಕಾಯಕ’ ಯೋಜನೆಯಿಂದ ಉದ್ಯೋಗ ಕ್ರಾಂತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಮಹಿಳೆಯರು ಹಾಗೂ ಅಬಲರಿಗೆ ನೆರವಾಗುವ ಸಂಕಲ್ಪದೊಂದಿಗೆ ಪ್ರತಿ ಕುಟುಂಬಕ್ಕೂ ಕಾಯಕ ಯೋಜನೆ ತಲುಪಿಸಿ ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಉದ್ಯೋಗ ಕ್ರಾಂತಿ ಸೃಷ್ಟಿಸುತ್ತೇವೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಹೇಳಿದರು.

ಇಲ್ಲಿ ಬುಧವಾರ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸದಸ್ಯರಿಗೆ ಸಾಲದ ಚೆಕ್ ವಿತರಿಸಿ ಮಾತನಾಡಿ, ‘ಅಧಿಕಾರ ಶಾಶ್ವತವಲ್ಲ. ಆದರೆ, ಅವಕಾಶ ಸಿಕ್ಕಾಗ ಮಾಡಿದ ಜನಪರ ಮತ್ತು ಬಡವರ ಪರವಾದ ಕೆಲಸದಿಂದ ಸಾರ್ಥಕತೆ ಸಿಗುತ್ತದೆ ಎಂದು ಭಾವಿಸಿದ್ದೇನೆ. ಅಧಿಕಾರ ಮತ್ತು ಸ್ಥಾನದ ಗೌರವಕ್ಕೆ ಚ್ಯುತಿಯಾಗದಂತೆ ಜನ ಪರವಾಗಿ ಕೆಲಸ ಮಾಡುತ್ತೇವೆ’ ಎಂದರು.

‘ಕೆಲವರು ರಾಜಕೀಯ ದುರುದ್ದೇಶಕ್ಕೆ ಡಿಸಿಸಿ ಬ್ಯಾಂಕ್ ವಿರುದ್ಧ ಲಘುವಾಗಿ ಮಾತನಾಡುತ್ತಾರೆ. ಟೀಕೆ ಸಾಮಾನ್ಯ. ಪ್ರಾಮಾಣಿಕ ಕೆಲಸ ಹಾಗೂ ಅಬಲರಿಗೆ ನೆರವಾಗುವ ಮೂಲಕ ಟೀಕಾಕಾರರಿಗೆ ತಕ್ಕ ಉತ್ತರ ನೀಡುತ್ತೇವೆ’ ಎಂದು ಗುಡುಗಿದರು.

‘ಕೋವಿಡ್ ಹಾವಳಿಯಿಂದ ಸಾಕಷ್ಟು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಅವರಲ್ಲಿ ಅರ್ಹರಿಗೆ ಕಾಯಕ ಯೋಜನೆಯಲ್ಲಿ ಸಾಲ ವಿತರಿಸಿ ಸ್ವಾವಲಂಬಿ ಸ್ವಂತ ಉದ್ಯಮ ಸ್ಥಾಪನೆಗೆ ನೆರವಾಗುವ ಮೂಲಕ ಸಂಕಷ್ಟದಿಂದ ಪಾರು ಮಾಡುವ ಪ್ರಯತ್ನ ಬ್ಯಾಂಕ್‌ನದು’ ಎಂದು ತಿಳಿಸಿದರು.

ಉಳಿತಾಯ ಮಾಡಿ: ‘ಡಿಸಿಸಿ ಬ್ಯಾಂಕ್ ಸಾಲಕ್ಕೆ ಮಾತ್ರ ಸೀಮಿತ ಎಂಬ ಕಲ್ಪನೆ ಸರಿಯಲ್ಲ. ಜನರ ಮನಸ್ಥಿತಿ ಬದಲಾಗಬೇಕು. ಬಡ ಜನರಿಗೆ ಶೂನ್ಯ ಬಡ್ಡಿ ಸಾಲ ಸೌಲಭ್ಯ ಕಲ್ಪಿಸಿ ಗೌರವದಿಂದ ನಡೆಸಿಕೊಳ್ಳುವ ಡಿಸಿಸಿ ಬ್ಯಾಂಕ್‌ನಲ್ಲೇ ಹಣ ಉಳಿತಾಯ ಮಾಡಿ, ವಹಿವಾಟು ನಡೆಸಬೇಕು’ ಎಂದು ಮನವಿ ಮಾಡಿದರು.

‘ಸಾರ್ವಜನಿಕರು ಡಿಸಿಸಿ ಬ್ಯಾಂಕ್‌ನಲ್ಲಿ ಉಳಿತಾಯ ಮಾಡುವುದರಿಂದ ಬ್ಯಾಂಕ್‌ಗೆ ಮತ್ತಷ್ಟು ಶಕ್ತಿ ಬರಲಿದೆ. ಕಷ್ಟದಲ್ಲಿರುವ ಮತ್ತಷ್ಟು ಮಂದಿಗೆ ಸಾಲ ನೀಡಲು ಸಹಕಾರಿಯಾಗಲಿದೆ’ ಎಂದು ಕಿವಿಮಾತು ಹೇಳಿದರು.

ಲಕ್ಷ್ಮೀ ಬಾಂಡ್‌: ‘ಸಾಲಕ್ಕೆ ಮಾತ್ರ ಡಿಸಿಸಿ ಬ್ಯಾಂಕ್‌ ಬಳಿಸಿಕೊಳ್ಳದೆ ದೈನಂದಿನ ಆರ್ಥಿಕ ಚಟುವಟಿಕೆಗಳಿಗೂ ಸದ್ಬಳಕೆ ಮಾಡಿಕೊಳ್ಳಿ. ಉಳಿತಾಯದ ಹಣಕ್ಕೆ ಬೇರೆ ಬ್ಯಾಂಕ್‌ಗಳಿಗಿಂತ ಡಿಸಿಸಿ ಬ್ಯಾಂಕ್‌ನಲ್ಲಿ ಹೆಚ್ಚು ಬಡ್ಡಿ ನೀಡುತ್ತೇವೆ. ಬ್ಯಾಂಕ್‌ನಿಂದ ಕಿಸಾನ್ ಲಕ್ಷ್ಮೀ ಠೇವಣಿ ಬಾಂಡ್ ಯೋಜನೆ ಜಾರಿಗೆ ತಂದಿದ್ದು, ಇದರ ಪ್ರಯೋಜನ ಪಡೆಯಬೇಕು’ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮಣ್ಣ ಕೋರಿದರು.

‘ಬ್ಯಾಂಕ್‌ ಈ ಹಿಂದೆ ನಷ್ಟದಲ್ಲಿತ್ತು. ಬ್ಯಾಂಕ್‌ ಕಳೆದ 7 ವರ್ಷಗಳಲ್ಲಿ ಅವಳಿ ಜಿಲ್ಲೆಯ ರೈತರು ಮತ್ತು ಮಹಿಳೆಯರಿಗೆ ₹ 1,500 ಕೋಟಿಗೂ ಹೆಚ್ಚು ಸಾಲ ನೀಡಿದೆ. ವಾಣಿಜ್ಯ ಬ್ಯಾಂಕ್‌ನಲ್ಲಿ ಹಣ ಠೇವಣಿ ಇಡುವುದು ಯಾವ ನ್ಯಾಯ?’ ಎಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಲ್.ಅನಿಲ್‌ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.

ಬ್ಯಾಂಕ್‌ನ ವ್ಯವಸ್ಥಾಪಕ ಅಂಬರೀಶ್, ಮೇಲ್ವಿಚಾರಕ ಅಮೀನಾ, ಸಿಬ್ಬಂದಿ ಗೋಪಾಲ್ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು