ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಗಾರಪೇಟೆ ರಸ್ತೆ ವಿಸ್ತರಣೆ: ಅಧಿಕಾರಿಗಳ ಜತೆ ಸ್ಥಳೀಯರ ವಾಗ್ವಾದ

ದೇವಾಲಯ ತೆರವಿಗೆ ವಿರೋಧ
Last Updated 7 ಸೆಪ್ಟೆಂಬರ್ 2020, 15:18 IST
ಅಕ್ಷರ ಗಾತ್ರ

ಕೋಲಾರ: ನಗರದ ಬಂಗಾರಪೇಟೆ ರಸ್ತೆ ವಿಸ್ತರಣೆಗಾಗಿ ರಸ್ತೆ ಬದಿಯ ಆಂಜನೇಯಸ್ವಾಮಿ ದೇವಾಲಯ ತೆರವುಗೊಳಿಸಲು ಮುಂದಾದ ಅಧಿಕಾರಿಗಳ ಜತೆ ಸ್ಥಳೀಯರು ಸೋಮವಾರ ವಾಗ್ವಾದ ನಡೆಸಿದರು.

ನಗರದ ಹಳೇ ಬಸ್ ನಿಲ್ದಾಣದಿಂದ ಬಂಗಾರಪೇಟೆ ವೃತ್ತದವರೆಗಿನ ರಸ್ತೆಯ ವಿಸ್ತರಣೆ ಕಾಮಗಾರಿ ನಡೆಯುತ್ತಿದ್ದು, ಲೋಕೋಪಯೋಗಿ ಇಲಾಖೆ ಕಾರ್ಯ ನಿರ್ವಾಹಕ ಎಂಜಿನಿಯರ್‌ ಚಂದ್ರಶೇಖರ್‌ ಮತ್ತು ಸಿಬ್ಬಂದಿಯು ಬೆಳಿಗ್ಗೆ ಕುರುಬರಪೇಟೆಯಲ್ಲಿನ ಆಂಜನೇಯಸ್ವಾಮಿ ದೇವಾಲಯ ತೆರವುಗೊಳಿಸಲು ಮುಂದಾದರು.

ಆಗ ದೇವಸ್ಥಾನ ತೆರವು ಮಾಡದಂತೆ ಆಗ್ರಹಿಸಿದ ಸ್ಥಳೀಯರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಇದರಿಂದ ಅಧಿಕಾರಿಗಳು ಮತ್ತು ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಸ್ಥಳದಲ್ಲಿದ್ದ ದೇವಾಲಯ ಟ್ರಸ್ಟ್‌ ಸದಸ್ಯರು, ‘ಸದ್ಯ ಪಿತೃಪಕ್ಷ ಇರುವ ಕಾರಣ ಈಗ ದೇವಾಲಯ ತೆರವು ಮಾಡಬಾರದು. ದೇವಾಲಯಕ್ಕೆ ಪರಿಹಾರ ಘೋಷಿಸಿ ನಂತರ ತೆರವು ಮಾಡಿ’ ಎಂದು ಪಟ್ಟು ಹಿಡಿದರು.

ಅಧಿಕಾರಿಗಳು ಸ್ಥಳೀಯರ ಹಾಗೂ ದೇವಾಲಯ ಟ್ರಸ್ಟ್‌ನ ಪದಾಧಿಕಾರಿಗಳ ಮನವೊಲಿಕೆಗೆ ನಡೆಸಿದ ಪ್ರಯತ್ನ ವಿಫಲವಾಯಿತು. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಸ್ಥಳೀಯರ ಗುಂಪು ಚದುರಿಸಲು ಮುಂದಾದರು. ಆಗ ಸ್ಥಳೀಯರು ಪೊಲೀಸರ ಜತೆ ವಾಗ್ವಾದ ನಡೆಸಿದರು.

ಪರಿಹಾರ ಸಾಧ್ಯವಿಲ್ಲ: ಸ್ಥಳಕ್ಕೆ ಬಂದ ಉಪ ವಿಭಾಗಾಧಿಕಾರಿ ಸೋಮಶೇಖರ್‌ ಮತ್ತು ತಹಶೀಲ್ದಾರ್ ಶೋಭಿತಾ, ‘ದೇವಸ್ಥಾನಕ್ಕೆ ಪರಿಹಾರ ನೀಡಲು ಸಾಧ್ಯವಿಲ್ಲ. ಸ್ಥಳಾಂತರದ ಬಳಿಕ ಸಾಧ್ಯವಾದರೆ ಬೇರೆಡೆ ದೇವಸ್ಥಾನ ನಿರ್ಮಾಣಕ್ಕೆ ವ್ಯವಸ್ಥೆ ಮಾಡಿ ಕೊಡುತ್ತೇವೆ’ ಎಂದು ಸ್ಥಳೀಯರಿಗೆ ಭರವಸೆ ನೀಡಿದರು.

‘ಈ ದೇವಾಲಯ ಸುಮಾರು 200 ವರ್ಷಗಳದು. ಪರಿಹಾರ ನೀಡದೆ ತೆರವು ಮಾಡುವುದು ಸರಿಯಲ್ಲ. ಇದಕ್ಕೆ ನಾವು ಒಪ್ಪುವುದಿಲ್ಲ. ತಡೆಯಾಜ್ಞೆ ತರುತ್ತೇವೆ. ಆದರೂ ದೇವಸ್ಥಾನ ತೆರವು ಮಾಡಿದರೆ ಸರಿಯಾಗಿ ಅನುಭವಿಸುತ್ತೀರಿ’ ಎಂದು ಟ್ರಸ್ಟ್‌ನ ಸದಸ್ಯರು ದೇವಾಲಯಕ್ಕೆ ಬೀಗ ಹಾಕಿ ಕಿಡಿಕಾರಿದರು.

ಡಿ.ಸಿ ಸೂಚನೆ: ದೇವಸ್ಥಾನ ತೆರವಿಗೆ ಸ್ಥಳೀಯರು ಅಡ್ಡಿಪಡಿಸುತ್ತಿರುವ ಸಂಗತಿಯನ್ನು ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್‌ ಅವರು ಜಿಲ್ಲಾಧಿಕಾರಿಯ ಗಮನಕ್ಕೆ ತಂದರು. ಬಳಿಕ ಜಿಲ್ಲಾಧಿಕಾರಿ ಸಿ.ಸತ್ಯಭಾಮ, ‘ಯಾವುದೇ ಕಾರಣಕ್ಕೂ ದೇವಸ್ಥಾನದ ತೆರವು ಕಾರ್ಯಾಚರಣೆ ನಿಲ್ಲಿಸಬಾರದು’ ಎಂದು ಸೂಚಿಸಿದರು.

ಬಳಿಕ ಹೆಚ್ಚು ಪೊಲೀಸರನ್ನು ಸ್ಥಳಕ್ಕೆ ಕರೆಸಿಕೊಂಡು ಬಿಗಿ ಬಂದೋಬಸ್ತ್‌ನಲ್ಲಿ ಅಧಿಕಾರಿಗಳೇ ದೇವಸ್ಥಾನದ ಬೀಗ ಹೊಡೆದು ಪುರೋಹಿತರನ್ನು ಕರೆಯಿಸಿ ಪ್ರಾಣ ಪ್ರತಿಷ್ಠಾಪನೆ ಮಾಡಿಸಿ, ದೇವಾಲಯ ಮಹಜರು ಮಾಡಿದರು. ನಂತರ ದೇವರ ಮೂರ್ತಿಯನ್ನು ಕೊಠಡಿಯಲ್ಲಿಟ್ಟು, ಅಮೂಲ್ಯ ವಸ್ತುಗಳನ್ನು ಖಜಾನೆಗೆ ರವಾನಿಸಿದರು. ಬಳಿಕ ದೇವಸ್ಥಾನ ತೆರವು ಮಾಡಲಾಯಿತು.

‘ಆಂಜನೇಯಸ್ವಾಮಿ ಮೂರ್ತಿಯನ್ನು ಸುರಕ್ಷಿತವಾಗಿ ಕೊಠಡಿಯಲ್ಲಿ ಹಾಗೂ ದೇವಸ್ಥಾನದ ಸಾಮಗ್ರಿಗಳನ್ನು ಖಜಾನೆಯಲ್ಲಿ ಇಟ್ಟಿದ್ದೇವೆ. ಮುಂದೆ ಚರ್ಚಿಸಿ ಮೂರ್ತಿ ಮರು ಪ್ರತಿಷ್ಠಾಪನೆ ಮಾಡಲಾಗುವುದು. ಗೊಂದಲವೆಲ್ಲಾ ಅಂತಿಮಗೊಂಡಿದ್ದು, ರಸ್ತೆ ವಿಸ್ತರಣೆ ಕಾಮಗಾರಿ ಮುಂದುವರಿಸಲಾಗಿದೆ’ ಎಂದು ಉಪ ವಿಭಾಗಾಧಿಕಾರಿ ಸೋಮಶೇಖರ್‌ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT