ಭಾನುವಾರ, ಆಗಸ್ಟ್ 14, 2022
27 °C
ಅರಾಭಿಕೊತ್ತನೂರು ಶಾಲೆಯಲ್ಲಿ ಶಿಕ್ಷಣಾಧಿಕಾರಿ ಅಶೋಕ್ ಹೇಳಿಕೆ

ಕೋಲಾರ: ಶಾಲೆಯಲ್ಲಿ ಚಿಣ್ಣರ ಕಲರವ ಸನ್ನಿಹಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಕೋವಿಡ್‌ನಿಂದ ಜನ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಲು ಉತ್ಸುಕರಾಗಿದ್ದಾರೆ. ಕೊರೊನಾ ಸೋಂಕು ಕಡಿಮೆಯಾಗುತ್ತಿರುವುದರಿಂದ ಮತ್ತೆ ಶಾಲೆಗಳಲ್ಲಿ ಮಕ್ಕಳ ಕಲರವ ಕಂಡುಬರುವ ಕಾಲ ಸನ್ನಿಹಿತವಾಗುತ್ತಿದೆ’ ಎಂದು ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್ ತಿಳಿಸಿದರು.

ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಾರ ಮಕ್ಕಳ ದಾಖಲಾತಿ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿ, ‘ಕೋವಿಡ್‌ ಕಾರಣಕ್ಕೆ ಮಕ್ಕಳ ಕಲಿಕೆಗೆ ಹಿನ್ನಡೆಯಾಗಿದೆ. ಕೊರೊನಾ ಸೋಂಕಿನ ಭಯದಿಂದ ಅನೇಕ ಪರೀಕ್ಷೆಗಳು ರದ್ದಾಗಿವೆ. ಶಿಕ್ಷಣದಿಂದ ದೂರವಿದ್ದ ಮಕ್ಕಳನ್ನು ಮತ್ತೆ ಕಲಿಕಾ ಹಾದಿಗೆ ತರಲು ಶಿಕ್ಷಕರು ಬದ್ಧತೆಯಿಂದ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

‘ಆನ್‌ಲೈನ್‌ ಶಿಕ್ಷಣವು ಮಕ್ಕಳ ಕಲಿಕೆ ನಿರಂತರತೆ ಉಳಿಯಲು ಸಹಕಾರಿಯಾಗಿದೆ. ಆದರೆ, ಇದು ಶಾಲಾ ಶಿಕ್ಷಣಕ್ಕೆ ಪೂರಕವಲ್ಲ. ಕೋವಿಡ್ ಸಂಪೂರ್ಣ ನಿಯಂತ್ರಣಕ್ಕೆ ಬಂದು ಮತ್ತೆ ಶಾಲೆಗಳಲ್ಲಿ ಮಕ್ಕಳ ಕಲರವ ಕಾಣುವಂತಾಗಬೇಕು’ ಎಂದು ಆಶಿಸಿದರು.

‘ಸರ್ಕಾರಿ ಶಾಲೆಗಳಲ್ಲೂ ಇಂದು ಆಂಗ್ಲ ಮಾಧ್ಯಮದ ಶಿಕ್ಷಣವಿದ್ದು, ಶೇ 100ರ ಫಲಿತಾಂಶ ಸಾಧನೆ ಕಾಣುತ್ತಿದ್ದೇವೆ. ಆಧುನಿಕತೆಗೆ ತಕ್ಕಂತೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶಿಕ್ಷಕರು ಸಮುದಾಯದ ಸಹಕಾರ ಪಡೆಯಬೇಕು. ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರಿಗೆ ಕೀಳರಿಮೆ ಬೇಡ. ಜನ ಮತ್ತೆ ಸರ್ಕಾರಿ ಶಾಲೆಗಳತ್ತ ಬರುವ ವಾತಾವರಣ ಸೃಷ್ಟಿಯಾಗುತ್ತಿದೆ. ಸರ್ಕಾರಿ ಶಾಲೆಗಳು ಉಳಿದರೆ ಮಾತ್ರ ಸಮಾನ ಶಿಕ್ಷಣಕ್ಕೆ ಅರ್ಥ ಬರುತ್ತದೆ’ ಎಂದರು.

‘ತರಗತಿ ಆರಂಭಕ್ಕೂ ಮುನ್ನ ಶಾಲಾ ಕೊಠಡಿಗಳನ್ನು ಸ್ವಚ್ಛಗೊಳಿಸಿ ಮತ್ತು ಆವರಣ ಸುಂದರಗೊಳಿಸಿ. ಶಾಲೆ ಜುಲೈ 1ರಿಂದ ಆರಂಭವಾಗುವ ಸಾಧ್ಯತೆಯಿದ್ದು, ಮಕ್ಕಳನ್ನು ಸ್ವಾಗತಿಸಲು ಸಿದ್ಧತೆ ನಡೆಸಿ. ಶಾಲೆ ಆರಂಭದ ಬಳಿಕ ಕಡ್ಡಾಯವಾಗಿ ಕೋವಿಡ್‌ ಮಾರ್ಗಸೂಚಿ ಪಾಲಿಸಿ. ಮಕ್ಕಳ ಸುರಕ್ಷತೆಗೆ ಹೆಚ್ಚಿನ ಕಾಳಜಿ ವಹಿಸಿ’ ಎಂದು ಕಿವಿಮಾತು ಹೇಳಿದರು.

ಆನ್‌ಲೈನ್‌ ಶಿಕ್ಷಣ: ‘ಶಾಲೆಯಲ್ಲಿ ಆಧುನಿಕತೆ ಹಾಗೂ ತಂತ್ರಜ್ಞಾನದ ಅಭಿವೃದ್ಧಿಗೆ ತಕ್ಕಂತೆ 3 ಸ್ಮಾರ್ಟ್ ಕ್ಲಾಸ್‌ ರೂಂ ಇವೆ. ಅತ್ಯುತ್ತಮ ವಿಜ್ಞಾನ ಪ್ರಯೋಗಾಲಯವಿದೆ. ಮಕ್ಕಳಿಗೆ ಆನ್‌ಲೈನ್ ಮೂಲಕ ಶಿಕ್ಷಣ ಕೊಡಿಸಲಾಗುತ್ತಿದೆ. ಆಂಗ್ಲ ಮತ್ತು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿದ್ದೇವೆ’ ಎಂದು ಶಾಲೆಯ ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್‌ಕುಮಾರ್‌ ವಿವರಿಸಿದರು.

ಶಿಕ್ಷಕರಾದ ಸಚ್ಚಿದಾನಂದಮೂರ್ತಿ, ಭವಾನಿ, ವೆಂಕಟರೆಡ್ಡಿ, ಶ್ವೇತಾ, ಸುಗುಣಾ, ಲೀಲಾ, ಫರೀದಾ, ಶ್ರೀನಿವಾಸಲು, ಡಿ.ಚಂದ್ರಶೇಖರ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು