ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾನೂನು ಅಸ್ತ್ರ ಪ್ರಯೋಗ ಸರಿಯಲ್ಲ’

ಸಾರಿಗೆ ನೌಕರರ ಮುಷ್ಕರ: ಸರ್ಕಾರದ ನಡೆಗೆ ಶಾಸಕ ರಮೇಶ್‌ಕುಮಾರ್‌ ಟೀಕೆ
Last Updated 10 ಏಪ್ರಿಲ್ 2021, 12:04 IST
ಅಕ್ಷರ ಗಾತ್ರ

ಕೋಲಾರ: ‘ಸಾರಿಗೆ ನೌಕರರ ಮುಷ್ಕರ ಹತ್ತಿಕ್ಕುವುದರಲ್ಲೇ ಮಗ್ನವಾಗಿರುವ ರಾಜ್ಯ ಸರ್ಕಾರ ಮುಷ್ಕರದಿಂದ ಜನರಿಗೆ ಆಗುತ್ತಿರುವ ಸಂಕಷ್ಟ ಪರಿಹರಿಸುವತ್ತ ಗಮನ ಹರಿಸುತ್ತಿಲ್ಲ’ ಎಂದು ಕಾಂಗ್ರೆಸ್‌ ಶಾಸಕ ಕೆ.ಆರ್‌.ರಮೇಶ್‌ಕುಮಾರ್‌ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯ ಶ್ರೀನಿವಾಸಪುರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಮುಷ್ಕರನಿರತ ಸಾರಿಗೆ ನೌಕರರು ಮನುಷ್ಯರೇ. ಸರ್ಕಾರ ಅವರನ್ನು ಶತ್ರುಗಳಂತೆ ನೋಡುತ್ತಿರುವುದು ಸಾಧುವಲ್ಲ. ಸರ್ಕಾರ ನೌಕರರೊಂದಿಗೆ ಯುದ್ಧ ಸಾರುವುದನ್ನು ಬಿಟ್ಟು ಸೌಹಾರ್ದಯುತವಾಗಿ ಮಾತುಕತೆ ನಡೆಸಬೇಕು’ ಎಂದು ಸಲಹೆ ನೀಡಿದರು.

‘ಸಾರಿಗೆ ನೌಕರರು ಕೆಳ ಆರ್ಥಿಕ ವರ್ಗದವರು. ಬಸ್‌ ಇಲ್ಲದೆ ತೊಂದರೆ ಅನುಭವಿಸುತ್ತಿರುವ ಜನ ಸಹ ಇದೇ ವರ್ಗಕ್ಕೆ ಸೇರಿದವರು. ಈ ಎರಡೂ ವರ್ಗದ ಜನರ ಹಿತ ಮುಖ್ಯ. ಜನರಿಗೆ ತೊಂದರೆ ಕೊಡುವ ಉದ್ದೇಶ ನೌಕರರಿಗಿಲ್ಲ. ಪರಿಸ್ಥಿತಿ ವಿಕೋಪಕ್ಕೆ ಹೊಗುವವರೆಗೆ ಬಿಟ್ಟು ಈಗ ನೌಕರರ ವಿರುದ್ಧ ಕಾನೂನು ಅಸ್ತ್ರ ಪ್ರಯೋಗ ಮಾಡುತ್ತಿರುವ ಸರ್ಕಾರದ ನಡೆ ಸರಿಯಲ್ಲ’ ಎಂದು ಟೀಕಿಸಿದರು.

‘ಸರ್ಕಾರ ಮುಷ್ಕರನಿರತ ನೌಕರರನ್ನು ಮನಸೋಇಚ್ಛೆ ವರ್ಗಾವಣೆ ಮಾಡುತ್ತಿದೆ. ನೌಕರರ ವೇತನ ತಡೆ ಹಿಡಿದಿದೆ. ದುಡಿಮೆ ವರ್ಗದ ಮೇಲೆ ಶಿಸ್ತು ಏರುತ್ತಿದೆ. ಈ ದಬ್ಬಾಳಿಕೆ ಖಂಡಿಸುತ್ತೇವೆ. ಖಾಸಗಿ ಬಸ್‌ಗಳನ್ನು ರಸ್ತೆಗಿಳಿಸಿ ಸಾರಿಗೆ ನೌಕರರನ್ನು ಬೆದರಿಸುವ ತಂತ್ರ ಸರಿಯಲ್ಲ. ಬೆದರಿಕೆ ಕಡೆಯ ಅಸ್ತ್ರವಾಗಬೇಕು. ಸರ್ಕಾರ ಪ್ರತಿಷ್ಠೆ ಬಿಟ್ಟು ಸಮಸ್ಯೆ ಬಗೆಹರಿಸಬೇಕು. ಸರ್ಕಾರ ಬಯಸಿದರೆ ಸಲಹೆ ಸಹಕಾರ ನೀಡುತ್ತೇವೆ’ ಎಂದರು.

‘ಜನರ ಅನುಕೂಲಕ್ಕೆ ಶಾಸನ ರೂಪಿಸಲಾಗಿದೆ. ಶಾಸನಗಳ ಉದ್ದೇಶ ಜನರನ್ನು ಹೆದರಿಸುವುದಲ್ಲ. ಮುಷ್ಕರನಿರತ ನೌಕರರು ಧೃತಿಗೆಡಬಾರದು. ದುಡಿಯುವ ವರ್ಗಕ್ಕೆ ಸದಾ ನಮ್ಮ ಬೆಂಬಲವಿದೆ. ನೌಕರರು ಹತಾಶರಾಗದೆ ಮತ್ತು ಹಟಕ್ಕೆ ಬೀಳದೆ ತಮ್ಮ ಬೇಡಿಕೆ ಈಡೇರಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT