ಮಂಗಳವಾರ, ಸೆಪ್ಟೆಂಬರ್ 29, 2020
23 °C
ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಜಿ.ಪಂ ಅಧ್ಯಕ್ಷ ವೆಂಕಟೇಶ್‌ ಅಸಮಾಧಾನ

ಸೋಂಕಿತರ ಬವಣೆ: ಕನಿಷ್ಠ ಸೌಲಭ್ಯವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿ ನಿರ್ವಹಣೆಗೆ ₹ 2 ಕೋಟಿ ಖರ್ಚು ಮಾಡಲಾಗಿದೆ. ಆದರೆ, ಆಸ್ಪತ್ರೆಗಳಲ್ಲಿ ಕನಿಷ್ಠ ಸೌಲಭ್ಯಗಳಿಲ್ಲದೆ ಸೋಂಕಿತರು ಬವಣೆ ಪಡುವಂತಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್‌ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿ ಬುಧವಾರ ನಡೆದ ಜಿ.ಪಂ ಹಣಕಾಸು ಲೆಕ್ಕ ಪರಿಶೋಧನೆ ಮತ್ತು ಯೋಜನಾ ಸ್ಥಾಯಿ ಸಮಿತಿ ಸಭೆಯಲ್ಲಿ ಮಾತನಾಡಿ, ‘ಕೋವಿಡ್‌ ಆಸ್ಪತ್ರೆಗಳಲ್ಲಿ ಸೋಂಕಿತರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಇಚ್ಛಾನುಸಾರ ಲೆಕ್ಕ ತೋರಿಸುವುದು ಸರಿಯಲ್ಲ. ಆರೋಗ್ಯ ಇಲಾಖೆಯಲ್ಲಿ ಆಗಿರುವ ಖರ್ಚು ವೆಚ್ಚದ ಮಾಹಿತಿ ಕೊಡಿ’ ಎಂದು ಸೂಚಿಸಿದರು.

‘ಆರೋಗ್ಯ ಇಲಾಖೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಾಕಷ್ಟು ಅನುದಾನ ಬರುತ್ತದೆ. ಆದರೆ, ಅನುದಾನ ಬಳಕೆಯಾದ ಬಗ್ಗೆ ಮಾಹಿತಿ ಇಲ್ಲ. ಕೋವಿಡ್ ನಿರ್ವಹಣೆಗಾಗಿ ಎಸ್‌ಎನ್‌ಆರ್‌ ಆಸ್ಪತ್ರೆ ಒಂದಕ್ಕೆ ₹ 1.20 ಕೋಟಿ ನೀಡಿದರೂ ಸೋಂಕಿತರಿಗೆ ಸರಿಯಾಗಿ ಊಟ ಕೊಡುತ್ತಿಲ್ಲ. ಆಸ್ಪತ್ರೆಯಲ್ಲಿ ಸ್ವಚ್ಛತೆಯಿಲ್ಲ. ಅನುದಾನ ಎಲ್ಲಿಗೆ ಹೋಗುತ್ತಿದೆ ಗೊತ್ತಾಗುತ್ತಿಲ್ಲ’ ಎಂದು ಅನುಮಾನ ವ್ಯಕ್ತಪಡಿಸಿದರು.

ಕಾಮಗಾರಿ ನಡೆದಿಲ್ಲ: ‘ಕಟ್ಟಡ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳಿಗಾಗಿ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಆರ್‌ಐಡಿಎಲ್‌) ಕೋಟ್ಯಂತರ ರೂಪಾಯಿ ಅನುದಾನ ಬಂದಿದೆ. ಆದರೆ, ಕಾಮಗಾರಿಗಳೇ ನಡೆದಿಲ್ಲ. ಅನುದಾನ ಬಳಕೆಯಾಗದೆ ಸರ್ಕಾರಕ್ಕೆ ವಾಪಸ್‌ ಹೋಗುತ್ತಿದ್ದರೆ ಹಣಕ್ಕೆ ಬಡ್ಡಿ ಎಷ್ಟಾಗುತ್ತದೆ ಗೊತ್ತಾ?’ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಸಮಾಜ ಕಲ್ಯಾಣ ಇಲಾಖೆಯು 79 ಅಂಬೇಡ್ಕರ್ ಭವನ ಮಂಜೂರು ಮಾಡಿದೆ. ಜಾಗವಿದ್ದರೂ ಕೆಲಸ ಆರಂಭಿಸಿಲ್ಲ. ಕೆಆರ್‌ಐಡಿಎಲ್‌ನಲ್ಲಿ 2014ರಿಂದ ನಡೆದಿರುವ ಕಾಮಗಾರಿಗಳು ಮತ್ತು ಅನುದಾನ ಬಳಕೆಯಾಗದೆ ವಾಪಸ್‌ ಹೋಗಿರುವ ಬಗ್ಗೆ ಕೂಡಲೇ ಮಾಹಿತಿ ಕೊಡಿ’ ಎಂದು ತಾಕೀತು ಮಾಡಿದರು.

ದೂರು ಬರುತ್ತಿವೆ: ‘ಕೇಂದ್ರ ಮತ್ತು ರಾಜ್ಯ ಸರ್ಕಾರವು ಬಡ ರೈತರು ಅನುಕೂಲಕ್ಕಾಗಿ ಜಿಲ್ಲೆಯ 28 ಹೋಬಳಿ ಕೇಂದ್ರಗಳಲ್ಲಿ ಕೃಷಿ ಯಂತ್ರಧಾರೆ ಕೇಂದ್ರ ಸ್ಥಾಪಿಸಿದೆ. ಆದರೆ, ಈ ಕೇಂದ್ರಗಳಿಂದ ರೈತರಿಗೆ ಅನುಕೂಲವಾಗುತ್ತಿಲ್ಲ. ಕೇಂದ್ರಗಳಲ್ಲಿನ ಸಮಸ್ಯೆ ಸಂಬಂಧ ಸಾಕಷ್ಟು ದೂರು ಬರುತ್ತಿವೆ. ಸಮಸ್ಯೆ ಪರಿಹಾರಕ್ಕೆ ಶೀಘ್ರವೇ ಸಭೆ ಕರೆದು ಕ್ರಮ ಕೈಗೊಳ್ಳಿ’ ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

‘ಇಲಾಖೆಗಳಿಗೆ ಜಿಲ್ಲಾ ಪಂಚಾಯಿತಿಯಿಂದ ಅನುದಾನ ಮತ್ತು ಅನುಮೋದನೆ ಮಾತ್ರ ಬೇಕು. ಆದರೆ, ಸದಸ್ಯರಿಗೆ ಮಾಹಿತಿ ಕೊಡಲ್ಲ. ಕಾರ್ಯಕ್ರಮಗಳು, ಕ್ರಿಯಾ ಯೋಜನೆ, ಅನುದಾನ ಎಷ್ಟು ಬಂದಿದೆ, ಎಷ್ಟು ವಾಪಸ್‌ ಹೋಗಿದೆ ಎಂಬುದನ್ನು ಆಯಾ ಭಾಗದ ಸದಸ್ಯರ ಗಮನಕ್ಕೆ ತರಬೇಕು. ಮುಂದಿನ ಸಾಮಾನ್ಯ ಸಭೆಯೊಳಗೆ ಮಾಹಿತಿ ನೀಡಬೇಕು’ ಎಂದು ಸೂಚಿಸಿದರು.

ಉತ್ತೇಜನ ನೀಡಿ: ‘ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳು ಬಂದ್ ಆಗಿರುವುದರಿಂದ ಖಾಸಗಿ ಶಾಲೆಗಳು ಆನ್‌ಲೈನ್‌ ಶಿಕ್ಷಣದ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಸೆಳೆಯುವ ಪ್ರಯತ್ನ ಮಾಡುತ್ತಿವೆ. ಸರ್ಕಾರಿ ಶಾಲೆಗಳಲ್ಲಿ ಪರ್ಯಾಯ ಕಾರ್ಯಕ್ರಮ ಹಮ್ಮಿಕೊಂಡು ಮಕ್ಕಳಿಗೆ ಶಿಕ್ಷಣದ ಜತೆಗೆ ಉತ್ತೇಜನ ನೀಡಬೇಕು. ಹೊರ ಗುತ್ತಿಗೆ ಆಧಾರದ ನೌಕರರಿಗೆ ಕೂಡಲೇ ಸಂಬಳ ನೀಡಬೇಕು’ ಎಂದರು.

ಜಿ.ಪಂ ಸದಸ್ಯರಾದ ಆರ್.ನಾರಾಯಣಸ್ವಾಮಿ, ಮುನಿಲಕ್ಷ್ಮಮ್ಮ, ಸಿ.ನಿರ್ಮಲಾ, ಹಣಕಾಸು ಅಧಿಕಾರಿ ಕೃಷ್ಣಮೂರ್ತಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು