ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಕೇಂದ್ರದ ಅಭಿವೃದ್ಧಿಗೆ ಶಕ್ತಿ ಮೀರಿ ಕೆಲಸ

ವರ್ತುಲ ರಸ್ತೆಗೆ ಅನುದಾನ: ಕುಡಾ ನೂತನ ಅಧ್ಯಕ್ಷ ವಿಜಯ್‌ಕುಮಾರ್‌ ಭರವಸೆ
Last Updated 16 ಮೇ 2022, 13:28 IST
ಅಕ್ಷರ ಗಾತ್ರ

ಕೋಲಾರ: ‘ಪ್ರಾಧಿಕಾರದ ಕಚೇರಿ ಇರುವ ಟಮಕ ವಾರ್ಡ್‍ನಲ್ಲೇ ಅಭಿವೃದ್ಧಿ ಕಾರ್ಯಗಳು ಬಾಕಿಯಿವೆ. ಟಮಕ ಬಡಾವಣೆಗೆ ನೀರು, ರಸ್ತೆ ಸೇರಿದಂತೆ ಮೌಲಸೌಕರ್ಯ ಕಲ್ಪಿಸುವ ಕೆಲಸ ಪೂರ್ಣಗೊಳಿಸಲು ಮೊದಲ ಆದ್ಯತೆ ನೀಡುತ್ತೇನೆ’ ಎಂದು ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ (ಕುಡಾ) ನೂತನ ಅಧ್ಯಕ್ಷ ವಿಜಯ್‌ಕುಮಾರ್‌ ಹೇಳಿದರು.

ಕುಡಾ ಅಧ್ಯಕ್ಷರಾಗಿ ಇಲ್ಲಿ ಸೋಮವಾರ ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ಟಮಕ ವಾರ್ಡ್‌ನ ಸಮಗ್ರ ಅಭಿವೃದ್ಧಿಯ ಬಳಿಕ ಪ್ರಾಧಿಕಾರದ ವ್ಯಾಪ್ತಿಯಲ್ಲಿ ‌ಆಗಬೇಕಿರುವ ಕೆಲಸ ಕಾರ್ಯಗಳಿಗೆ ಒತ್ತು ಕೊಟ್ಟು ನಗರದ ಅಭಿವೃದ್ಧಿಗೆ ಶಕ್ತಿ ಮೀರಿ ಕೆಲಸ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

‘ಜಿಲ್ಲಾ ಕೇಂದ್ರದಲ್ಲಿ ವರ್ತುಲ ರಸ್ತೆ ನಿರ್ಮಾಣದ ವಿಚಾರವು ಹಲವು ವರ್ಷಗಳಿಂದ ಚರ್ಚೆಯಲ್ಲಿದೆ. ಈ ಸಂಬಂಧ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಮುಂದಿನ ಬಜೆಟ್‍ನಲ್ಲಿ ಅನುದಾನ ಸಿಗುವಂತೆ ಮಾಡುತ್ತೇವೆ. ‍ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಓಂಶಕ್ತಿ ಚಲಪತಿ ಅವರ ಅವಧಿಯಲ್ಲಿ ಬಾಕಿ ಉಳಿದ ಕೆಲಸಗಳನ್ನು ಪೂರ್ಣಗೊಳಿಸುತ್ತೇವೆ’ ಎಂದು ತಿಳಿಸಿದರು.

‘ಕೋವಿಡ್‌ ಕಾರಣಕ್ಕೆ 2 ವರ್ಷಗಳಿಂದ ನಗರದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ರಾಜ್ಯದಲ್ಲಿ ನಮ್ಮದೇ ಪಕ್ಷದ ಸರ್ಕಾರ ಇರುವುದರಿಂದ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡುತ್ತೇವೆ. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಸೇರಿದಂತೆ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ನಗರದ ಅಭಿವೃದ್ಧಿಗೆ ಮತ್ತಷ್ಟು ಆದ್ಯತೆ ನೀಡುತ್ತೇವೆ. ಜನರು ಯಾವುದೇ ಕೆಲಸವಿದ್ದರೂ ಕಚೇರಿಗೆ ಬಂದು ಮಾಡಿಕೊಳ್ಳಲು ಮುಕ್ತವಾಗಿ ಅವಕಾಶ ಕಲ್ಪಿಸುತ್ತೇವೆ’ ಎಂದರು.

ನೋಟಿಸ್‌ ಜಾರಿ: ‘ನಗರದಲ್ಲಿ ನಿರ್ಮಾಣಗೊಂಡಿರುವ ಮತ್ತು ನಿರ್ಮಾಣ ಹಂತದಲ್ಲಿರುವ ಅನಧಿಕೃತ ಬಹು ಅಂತಸ್ತಿನ ಕಟ್ಟಡಗಳಿಗೆ ಸಂಬಂಧಿಸಿದಂತೆ ಪ್ರಾಧಿಕಾರದಿಂದ ನೋಟಿಸ್‌ ಜಾರಿ ಮಾಡುತ್ತೇವೆ. ಕಾನೂನು ಪಾಲನೆ ವಿಚಾರದಲ್ಲಿ ರಾಜಿ ಪ್ರಶ್ನೆಯಿಲ್ಲ’ ಎಂದು ಸ್ಪಷ್ಟಪಡಿಸಿದರು.

ಮಾಜಿ ಸಚಿವ ವರ್ತೂರು ಪ್ರಕಾಶ್, ಪ್ರಾಧಿಕಾರದ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ ಹಾಗೂ ಬಿಜೆಪಿಯ ಹಲವು ಮುಖಂಡರು ನೂತನ ಅಧ್ಯಕ್ಷರಿಗೆ ಶುಭ ಕೋರಿದರು. ‍ಪಕ್ಷದ ಕಾರ್ಯಕರ್ತರು ಹಾಗೂ ವಿಜಯ್‌ಕುಮಾರ್‌ರ ಬೆಂಬಲಿಗರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಪ್ರಾಧಿಕಾರದ ನೂತನ ಸದಸ್ಯರಾದ ರಮೇಶ್, ಲಕ್ಷ್ಮಣಗೌಡ, ವೆಂಕಟರಮಣ, ಕೆ.ರಾಧಿಕಾ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಬಾಲಾಜಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT