ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಕಿತ ಉಗ್ರ ಮೆಹಬೂಬ್‌ ಪಾಷಾ ಜತೆ ನಂಟು: ಕೋಲಾರದಲ್ಲಿ ಇಬ್ಬರ ಬಂಧನ

Last Updated 13 ಜನವರಿ 2020, 13:45 IST
ಅಕ್ಷರ ಗಾತ್ರ

ಕೋಲಾರ: ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಭಯೋತ್ಪಾದನೆ ಸಂಘಟನೆಯ ಶಂಕಿತ ಉಗ್ರ ಮೆಹಬೂಬ್‌ ಪಾಷಾ ಜತೆ ನಂಟು ಹೊಂದಿದ್ದ ಆರೋಪದ ಮೇಲೆ ನಗರದ ಮಹಮ್ಮದ್‌ ಜಹೀರ್‌ ಮತ್ತು ಸಲೀಂ ಖಾನ್‌ ಎಂಬುವರನ್ನು ತಮಿಳುನಾಡು ಹಾಗೂ ಬೆಂಗಳೂರಿನ ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಮೆಹಬೂಬ್‌ ಪಾಷಾನ ಪತ್ನಿಯು ನಗರದ ನಿವಾಸಿಯಾಗಿದ್ದು, ಆತನ ಜತೆ ಜಹೀರ್‌ ಮತ್ತು ಸಲೀಂ ನಿರಂತರ ಸಂಪರ್ಕದಲ್ಲಿದ್ದ ಸಂಗತಿ ಪೊಲೀಸರ ತನಿಖೆಯಿಂದ ಬಯಲಾಗಿದೆ. ಬಂಧಿತ ಸಲೀಂ, ಮೊಹಬೂಬ್‌ ಪಾಷಾನ ಪತ್ನಿಯ ಸಂಬಂಧಿ. ಜಹೀರ್‌ ಮತ್ತು ಸಲೀಂ ಸ್ನೇಹಿತರು.

ಮೆಹಬೂಬ್‌ ಪಾಷಾ, ಸಲೀಂನ ಮೂಲಕ ಜಹೀರ್‌ನನ್ನು ಪರಿಚಯ ಮಾಡಿಕೊಂಡಿದ್ದ. ಬಿ.ಇ ಪದವೀಧರನಾದ ಜಹೀರ್‌, ಬೆಂಗಳೂರಿನಲ್ಲಿ ಇದ್ದುಕೊಂಡು ಮೆಹಬೂಬ್‌ ಪಾಷಾಗೆ ಭಯೋತ್ಪಾದನಾ ಚಟುವಟಿಕೆಗಳಿಗೆ ತಾಂತ್ರಿಕ ನೆರವು ನೀಡುತ್ತಿದ್ದ ಎಂದು ಉನ್ನತ ಪೊಲೀಸ್ ಮೂಲಗಳು ತಿಳಿಸಿವೆ.

ಹಲವು ಬಾರಿ ಕೋಲಾರಕ್ಕೆ ಬಂದಿದ್ದ ಮೆಹಬೂಬ್‌ ಪಾಷಾಗೆ ಸಲೀಂ ಆಶ್ರಯ ಕೊಟ್ಟಿದ್ದ. ಅಲ್ಲದೇ, ಸಲೀಂ ಅನೇಕ ಬಾರಿ ಮೆಹಬೂಬ್‌ ಪಾಷಾನ ಮೊಬೈಲ್‌ಗೆ ಕರೆ ಮಾಡಿ ಮಾತನಾಡಿದ್ದಾನೆ. ಮೊಬೈಲ್‌ ಕರೆಗಳ ಜಾಡು ಹಿಡಿದು ಸಲೀಂನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಸಿಸಿಬಿ ಮತ್ತು ತಮಿಳುನಾಡಿನ ಪೊಲೀಸ್‌ ಅಧಿಕಾರಿಗಳು ಜ.3ರಂದೇ ಜಹೀರ್‌ ಹಾಗೂ ಸಲೀಂನನ್ನು ಬಂಧಿಸಿ ಕರೆದೊಯ್ದಿದ್ದರು. ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ಇರಲಿಲ್ಲ. ನಗರದ ಖಾದ್ರಿಪುರದಲ್ಲಿ ವಾಸವಾಗಿದ್ದ ಸಲೀಂನ ಮನೆಯಲ್ಲಿ ಮೆಹಬೂಬ್‌ ಪಾಷಾನ ಲ್ಯಾಪ್‌ಟಾಪ್‌ ಮತ್ತು ಪೆನ್‌ಡ್ರೈವ್‌ ಪತ್ತೆಯಾಗಿದ್ದು, ಅವುಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT