ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲೂರು: ರೈತರ ಕೆಲಸಕ್ಕೆ ತೊಂದರೆ

ತಾಲ್ಲೂಕು ಆಡಳಿತದ ವಿರುದ್ಧ ಜೆಡಿಎಸ್ ಆರೋಪ
Last Updated 5 ಆಗಸ್ಟ್ 2021, 2:21 IST
ಅಕ್ಷರ ಗಾತ್ರ

ಮಾಲೂರು: ‘ತಾಲ್ಲೂಕಿನಲ್ಲಿ ವಿರೋಧ ಪಕ್ಷ ಇಲ್ಲದೆ ತಾಲ್ಲೂಕು ಆಡಳಿತ ಭ್ರಷ್ಟಾಚಾರದಿಂದ ಕೂಡಿದ್ದು, ರೈತರ ಮತ್ತು ಸಾರ್ವಜನಿಕರ ಸಮಸ್ಯೆ ಕೇಳುವವರು ಇಲ್ಲದಂತಾಗಿದೆ’ ಎಂದು ಜೆಡಿಎಸ್ ರಾಜ್ಯ ಕಾರ್ಯಕಾರಿಣಿ ಸದಸ್ಯ ಜಿ.ಇ. ರಾಮೇಗೌಡ ಟೀಕಿಸಿದರು.

ಪಟ್ಟಣದ ಜೆಡಿಎಸ್ ಕಚೇರಿ ಆವರಣದಲ್ಲಿ ಬುಧವಾರ ತಾಲ್ಲೂಕು ಜೆಡಿಎಸ್ ಹಾಗೂ ಜಿ.ಇ. ರಾಮೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಣೆ ಹಾಗೂ ತಾಲ್ಲೂಕು ಜೆಡಿಎಸ್ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸುಮಾರು 18 ವರ್ಷಗಳಿಂದ ಯಾವುದೇ ಫಲಾಪೇಕ್ಷೆ ಇಲ್ಲದೇ ಟ್ರಸ್ಟ್ ವತಿಯಿಂದ ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ನೀಡಲಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪಕ್ಷವನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿ ನೀಡಿದ್ದಾರೆ ಎಂದರು.

ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಕೆ.ವೈ. ನಂಜೇಗೌಡ ಶಾಸಕರಾಗಿ ಆಯ್ಕೆಯಾಗಿ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. ತಾಲ್ಲೂಕು ಕಚೇರಿಯಲ್ಲಿ ರೈತರು ಮತ್ತು ಸಾರ್ವಜನಿಕರ ಕೆಲಸ ಕಾರ್ಯ ನಡೆಯುತ್ತಿಲ್ಲ. ಗ್ರಾಮೀಣ ಪ್ರದೇಶಗಳಿಂದ ಬರುವ ರೈತರು ತಮ್ಮ ಕೆಲಸಗಳಿಗೆ ಅಧಿಕಾರಿಗಳ ಬಳಿ ತಿಂಗಳಾನುಗಟ್ಟಲೇ ಸುತ್ತುತ್ತಿದ್ದಾರೆ. ರೈತರು ಅಧಿಕಾರಿಗಳ ಬಳಿ ಹಣ ನೀಡಿ ಕೆಲಸ ಮಾಡಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ಜೆಡಿಎಸ್ ಬಗ್ಗೆ ತಾಲ್ಲೂಕಿನಲ್ಲಿ ಕೆಲವರು ಹಗುರವಾಗಿ ಮಾತನಾಡುತ್ತಾರೆ. ಮುಂದಿನ ತಾ.ಪಂ. ಮತ್ತು ಜಿ.ಪಂ. ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳನ್ನು ಗೆಲ್ಲುವ ಮೂಲಕ ನಮ್ಮ ಶಕ್ತಿ ತೋರಿಸುತ್ತೇವೆ ಎಂದು ಸವಾಲು ಹಾಕಿದರು.

ಪುರಸಭಾ ಸ್ಥಾಯಿಸಮಿತಿ ಅಧ್ಯಕ್ಷ ಪಿ.ಎನ್. ಪರಮೇಶ್, ಜಿ.ಪಂ.ಮಾಜಿ ಸದಸ್ಯರಾದ ಎಚ್.ವಿ. ಶ್ರೀನಿವಾಸ್, ರಾಮಸ್ವಾಮಿರೆಡ್ಡಿ, ಜೆಡಿಎಸ್ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಬಿ.ಕೆ. ನಾರಾಯಣಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ತಿಮ್ಮೇಗೌಡ, ತಾಲ್ಲೂಕು ಅಧ್ಯಕ್ಷ ಎಚ್.ವಿ. ಚಂದ್ರಶೇಖರ್ ಗೌಡ, ಪ್ರಧಾನ ಕಾರ್ಯದರ್ಶಿಗಳಾದ ದೇವರಾಜ್, ವರದರಾಜು, ಮುಖಂಡರಾದ ಎಂ.ಕೆ. ಆನಂದ್, ಆಂಜನೇಯರೆಡ್ಡಿ, ಕೆಂಪಣ್ಣ, ಗಿರಿಗೌಡ, ಮಂಜುನಾಥ್ ಗೌಡ, ಕೃಷ್ಣಮೂರ್ತಿ, ಡಿಎಂಸಿ ಚಂದ್ರಪ್ಪ, ಮೋಹನ್, ನವೀನ್ ಯಾದವ್, ಬಾಲಾಜಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT