ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣರಾಜ್ಯೋತ್ಸವ ಪರೇಡ್‌ಗೆ ವಿಶೇಷ ಅತಿಥಿಗಳಾಗಿ ಸ್ವಚ್ಛತಾ ವಾಹನ ಚಾಲಕಿಯರು ದೆಹಲಿಗೆ

ಜ. 26ರಂದು ಗಣರಾಜ್ಯೋತ್ಸವ ಪರೇಡ್‌ಗೆ ಮಂಜುಳಾ, ಶಶಿಕಲಾ ವಿಶೇಷ ಅತಿಥಿಗಳು
Published 20 ಜನವರಿ 2024, 21:51 IST
Last Updated 20 ಜನವರಿ 2024, 21:51 IST
ಅಕ್ಷರ ಗಾತ್ರ

ಕೋಲಾರ: ತಾಲ್ಲೂಕಿನ ಬೆಗ್ಲಿಹೊಸಹಳ್ಳಿ ಗ್ರಾಮ ಪಂಚಾಯಿತಿಯ ಸ್ವಚ್ಛ ವಾಹಿನಿ ವಾಹನದ ಚಾಲಕಿ ಮಂಜುಳಾ ಮತ್ತು ಸಹಾಯಕಿ ಶಶಿಕಲಾ ಅವರು ದೆಹಲಿ ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಲು ಜಿಲ್ಲೆಯಿಂದ ಆಯ್ಕೆಯಾಗಿದ್ದಾರೆ.

ಜ.26ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ಆನಂತರ ರಾಷ್ಟ್ರಪತಿ, ಪ್ರಧಾನಿ ಜೊತೆಗಿನ ಚಹಾಕೂಟದಲ್ಲಿ ಭಾಗವಹಿಸಲಿದ್ದಾರೆ.

ಸ್ವಚ್ಛ ಭಾರತ್ ಯೋಜನೆಯನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಸಮರ್ಪಕವಾಗಿ ಅನುಷ್ಠಾನಕ್ಕೆ ತಂದವರನ್ನು ಆಯ್ಕೆ ಮಾಡಲಾಗುತ್ತದೆ. ಮಾದರಿ 4 ಪಂಚಾಯಿತಿಗಳ ಪೈಕಿ ಬೆಗ್ಲಿಹೊಸಹಳ್ಳಿ ಪಂಚಾಯಿತಿ ಕೂಡ ಆಯ್ಕೆಯಾಗಿದೆ.

‘ಜ.25ಕ್ಕೆ ನವದೆಹಲಿಗೆ ತೆರಳಲಿದ್ದೇವೆ. ಗೃಹಿಣಿಯಾಗಿ ಕುಟುಂಬಕ್ಕೆ ಸೀಮಿತವಾಗಿದ್ದ ನನ್ನನ್ನು ಪಂಚಾಯಿತಿ ಅಧಿಕಾರಿಗಳು, ಸದಸ್ಯರು ಸಮಾಜದ ಮುಖ್ಯವಾಹಿನಿಗೆ ತಂದು ಚಾಲಕಿಯಾಗಿ ಮಾಡಿದ್ದಾರೆ. ಸಾಮಾನ್ಯ ಮಹಿಳೆಯಾಗಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದು ಖುಷಿ ತಂದಿದೆ. ಅಧ್ಯಕ್ಷೆ ದೀಪಿಕಾ ಲೋಕೇಶ್, ಪಿಡಿಓ ಮಧುಮತಿ ಹಾಗೂ ಎಲ್ಲಾ ಸದಸ್ಯರ ಮಾರ್ಗದರ್ಶನದಲ್ಲಿ ಸ್ವಚ್ಛತೆ ಕಾರ್ಯ ಇಡೀ ಜಿಲ್ಲೆಗೆ ಮಾದರಿಯಾಗಿ ನಡೆಯುತ್ತಿದೆ’ ಎಂದು ಚಾಲಕಿ ಮಂಜುಳಾ ಸಂತಸ ವ್ಯಕ್ತಪಡಿಸಿದ್ದಾರೆ.

ಬೆಗ್ಲಿಹೊಸಹಳ್ಳಿ ಗ್ರಾಮದ ಮಂಜುಳಾ ಎರಡೂವರೆ ವರ್ಷಗಳಿಂದ ಚಾಲಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತಿ ಲೋಕೇಶ್‌ ಖಾಸಗಿ ಕ್ಯಾಬ್‌ ಚಾಲಕರಾಗಿದ್ದು, ಪುತ್ರ ಮನಿಷ್‌ 4ನೇ ತರಗತಿ ಓದುತ್ತಿದ್ದಾರೆ. ಇದೇ ಗ್ರಾಮದ ಶಶಿಕಲಾ ಕೂಡ ಎರಡೂವರೆ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ.

‘ಸ್ವಚ್ಛ ಭಾರತ್ ಯೋಜನೆಯಡಿ ಸ್ವಚ್ಛವಾಹಿನಿ ಕಾರ್ಯಕ್ರಮವನ್ನು ಜಾರಿಗೆ ತರಲು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಿರ್ಣಯಕೈಗೊಂಡು ವಾಹನ ಖರೀದಿಸಲಾಯಿತು. ಅದಕ್ಕೆ ಚಾಲಕರನ್ನು ನೇಮಕ ಮಾಡಿಕೊಂಡು ಕಸ ಸಂಗ್ರಹಿಸುವ ಕುರಿತು ವ್ಯಾಪಕ ಪ್ರಚಾರ ಮಾಡಲಾಯಿತು’ ಎಂದು ಪಂಚಾಯಿತಿಯ ಮಾಜಿ ಅಧ್ಯಕ್ಷ ಕೂಟೇರಿ ಚರಣ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT