ಮಂಗಳವಾರ, ಮೇ 11, 2021
26 °C

ಕೋಲಾರ: ‘ಮೇಲ್ವರ್ಗದವರ ಮೀಸಲಾತಿ ಬೇಡಿಕೆ ಹಾಸ್ಯಾಸ್ಪದ’-ಸಿದ್ದಲಿಂಗಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ‘ಶೋಷಿತ ಸಮಾಜಗಳು ಅಭಿವೃದ್ಧಿಗೆ ಮೀಸಲಾತಿ ಕೇಳುವುದರಲ್ಲಿ ಅರ್ಥವಿದೆ. ಆದರೆ, ಮೇಲ್ವರ್ಗದವರೂ ಮೀಸಲಾತಿ ಕೇಳುತ್ತಿರುವುದು ಹಾಸ್ಯಾಸ್ಪದ’ ಎಂದು ಕವಿ ಸಿದ್ದಲಿಂಗಯ್ಯ ಟೀಕಿಸಿದರು.

ಇಲ್ಲಿ ಸೋಮವಾರ ಲಂಕೇಶ್‌ ಸಾಹಿತ್ಯ ಸಪ್ತಾಹದಲ್ಲಿ ಮಾತನಾಡಿ, ‘ಇಂದು ಮೇಲ್ಜಾತಿಯವರು ಮೀಸಲಾತಿಗೆ ಹೋರಾಡುತ್ತಿರುವುದನ್ನು ಗಮನಿಸಿದರೆ ಮಂಟೇಸ್ವಾಮಿ ಹೇಳಿದಂತೆ ಮೇಲು ಕೆಳಗೆ ಹೋಗುತ್ತದೆ, ಕೀಳು ಮೇಲೆ ಬರುತ್ತದೆ ಎಂಬುದು ನಿಜವಾಗಿದೆ’ ಎಂದರು.

‘ನಮ್ಮ ಪೂರ್ವಜರು ಮಂಟೇಸ್ವಾಮಿ ದೇವರೆಂದು ಭಾವಿಸಿ ಪೂಜಿಸುತ್ತಿದ್ದರು. ಆದರೆ, ನಾನು ನಾಸ್ತಿಕನಾದ ಕಾರಣ ಅದನ್ನು ವಿರೋಧಿಸುತ್ತಾ ಬಂದೆ. ಆದರೆ, ಮಂಟೇಸ್ವಾಮಿ ಬಗ್ಗೆ ತಿಳಿದಾಗ ಆತ ಕ್ರಾಂತಿಕಾರಿ ಪುರುಷನೆಂದು ಅರ್ಥವಾಗಿ ಪೂಜಿಸಲು ಆರಂಭಿಸಿದೆ. ಇಂತಹ ಸಾಕಷ್ಟು ವಿಚಾರಗಳು ನಮ್ಮಿಂದ ದೂರವಾಗಿವೆ’ ಎಂದು ಹೇಳಿದರು.

‘ತಳ ಸಮುದಾಯಗಳ ಸಂಸ್ಕೃತಿ ಬಗ್ಗೆ ಹೆಚ್ಚಿನ ಅಧ್ಯಯನ ನಡೆಯಬೇಕು. ದೇಶದ ಮೂಲ ಸಂಸ್ಕೃತಿಯ ಇತಿಹಾಸವನ್ನು ತಿರುಚಲಾಗಿದೆ. ದಲಿತರಿಗೆ ಅವಮಾನ ಮಾಡುವ ರೀತಿಯಲ್ಲಿ ಇತಿಹಾಸ ತಿರುಚಿ ಬರೆಯಲಾಗಿದೆ. ಮೂಲ ಸಂಸ್ಕೃತಿಯ ಮೇಲೆ ನಿರಂತರವಾಗಿ ದಾಳಿ ನಡೆಯುತ್ತಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಎಲ್ಲಾ ಊರಿನಲ್ಲಿ ರಾಮ ಮಂದಿರಗಳಿವೆ. ಆ ಮಂದಿರಗಳಲ್ಲಿ ಸಂಜೆ ವೇಳೆ ಎಲ್ಲರೂ ಭಜನೆ ಮಾಡುತ್ತಿದ್ದು, ಇದರಿಂದ ಯುವಕರು ದುರಾಭ್ಯಾಸಗಳಿಂದ ದೂರವಾಗಿದರು. ಇಷ್ಟು ಸಾಕು. ನಾಸ್ತಿಕನಾಗಿದ್ದ ನನಗೆ ಭಜನೆ, ದೇವರುಗಳ ಮಹತ್ವ ಈಗ ಅರಿವಾಗುತ್ತಿದೆ’ ಎಂದು ತಿಳಿಸಿದರು.

ಮಾರ್ಗದರ್ಶಕರು: ‘ಲಂಕೇಶ್‌ ರಾಜ್ಯ ಕಂಡ ಅತ್ಯುತ್ತಮ ಲೇಖಕರು. ಆಡು ಭಾಷೆಯಲ್ಲಿ ಲೇಖನ ಬರೆದು ಗ್ರಾಮೀಣ ಭಾಗದ ಬಡವರು, ಯುವಕರಲ್ಲಿ ಆತ್ಮವಿಶ್ವಾಸ ತುಂಬಿದರು. ಅಂತಹ ವ್ಯಕ್ತಿಯ ಸ್ಮರಣೆ, ಸಪ್ತಾಹ ಮಾಡುತ್ತಿರುವುದು ಶ್ಲಾಘನೀಯ. ಲಂಕೇಶ್‌ ತಮ್ಮ ಸಾಹಿತ್ಯ ಕೃತಿಗಳ ಮೂಲಕ ಅನೇಕರಿಗೆ ಮಾರ್ಗದರ್ಶಕರಾಗಿದ್ದಾರೆ’ ಎಂದು ಸ್ಮರಿಸಿದರು.

‘ಲಂಕೇಶ್ ಸಪ್ತಾಹದ ಜತೆಗೆ ರಾಗಿ ಲಕ್ಷ್ಮಣಯ್ಯರ ಸ್ಮರಣೆ ಅಗತ್ಯವಾಗಿದ್ದು, ಈ ಅಂಗಳದಲ್ಲಿ ಅವರ ಸ್ಮಾರಕ ನಿರ್ಮಾಣ ಮಾಡಬೇಕು. ಲಕ್ಷ್ಮಣಯ್ಯ ಅದ್ಭುತ ಬರಹಗಾರರಾಗಿದ್ದು, ಚಿಲುಮೆ ನೀರು ಕುಡಿದಷ್ಟೇ ಸಂತಸ ಅವರ ಬರವಣಿಗೆಯಲ್ಲಿತ್ತು’ ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯಪಟ್ಟರು.

ಆದಿಮ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಎನ್.ಮುನಿಸ್ವಾಮಿ, ಖಜಾಂಚಿ ಹ.ಮಾ.ರಾಮಚಂದ್ರ ಪಾಲ್ಗೊಂಡರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು