ಸೋಮವಾರ, ಮೇ 17, 2021
31 °C
ಕಡತಕ್ಕೆ ಸೀಮಿತವಾದ ಸರ್ಕಾರದ ಆದೇಶ: ದಂಡದ ಅಸ್ತ್ರಕ್ಕೂ ಬಗ್ಗದ ಅಂಗಡಿ ಮಾಲೀಕರು

ನಿಷೇಧಿತ ಪ್ಲಾಸ್ಟಿಕ್‌ ಕವರ್‌ ಬಳಕೆ ಅವ್ಯಾಹತ

ಜೆ.ಆರ್‌.ಗಿರೀಶ್‌ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ನಗರದಲ್ಲಿ ಪ್ಲಾಸ್ಟಿಕ್‌ ಕವರ್‌ಗಳ (ಕ್ಯಾರಿ ಬ್ಯಾಗ್‌) ಬಳಕೆ ಎಗ್ಗಿಲ್ಲದೆ ಸಾಗಿದ್ದು, ಸರ್ಕಾರದ ಆದೇಶಕ್ಕೆ ಇಲ್ಲಿ ಕವಡೆ ಕಾಸಿನ ಬೆಲೆಯಿಲ್ಲ. ವರ್ತಕರು ಹಾಗೂ ಸಾರ್ವಜನಿಕರು ದಿನಬಳಕೆ ವಸ್ತುಗಳನ್ನು ಕೊಂಡೊಯ್ಯಲು ಪ್ಲಾಸ್ಟಿಕ್‌ ಕವರ್‌ಗಳನ್ನೇ ಬಳಸುತ್ತಿದ್ದು, ಸರ್ಕಾರಿ ಆದೇಶ ಕೇವಲ ಕಡತಕ್ಕೆ ಸೀಮಿತವಾಗಿದೆ.

ತಳ್ಳು ಗಾಡಿ, ಬೀದಿ ಬದಿ ವ್ಯಾಪಾರಿಗಳಿಂದ ಹಿಡಿದು ದೊಡ್ಡ ವಾಣಿಜ್ಯ ಮಳಿಗೆಗಳವರೆಗೆ ಪ್ಲಾಸ್ಟಿಕ್‌ ಕವರ್‌ಗಳನ್ನು ರಾಜಾರೋಷವಾಗಿ ಬಳಕೆ ಮಾಡಲಾಗುತ್ತಿದೆ. ತರಕಾರಿ ಮಾರುಕಟ್ಟೆಗಳು, ದೇವಾಲಯಗಳು, ವಾಣಿಜ್ಯ ಪ್ರದೇಶಗಳಲ್ಲಿ ಕಣ್ಣು ಹಾಯಿಸಿದಲ್ಲೆಲ್ಲಾ ಪ್ಲಾಸ್ಟಿಕ್‌ ಕವರ್‌ ಹಿಡಿದು ಸಾಗುವ ಜನರೇ ಎದುರಾಗುತ್ತಾರೆ.

ಪ್ಲಾಸ್ಟಿಕ್‌ ತ್ಯಾಜ್ಯ (ನಿರ್ವಹಣೆ ಮತ್ತು ವ್ಯವಸ್ಥಾಪನೆ) ಕಾಯ್ದೆ 2011ರ ಪ್ರಕಾರ ಸರ್ಕಾರ 2016ರ ಮಾರ್ಚ್‌ 3ರಿಂದ ಅನ್ವಯವಾಗುವಂತೆ ರಾಜ್ಯದೆಲ್ಲೆಡೆ ಎಲ್ಲಾ ಬಗೆಯ ಪ್ಲಾಸ್ಟಿಕ್‌ ಕವರ್‌ಗಳ ಬಳಕೆ ನಿರ್ಬಂಧಿಸಿ ಆದೇಶ ಹೊರಡಿಸಿದೆ. ಸ್ಥಳೀಯವಾಗಿ ಈ ಆದೇಶ ಪಾಲನೆಯ ಜವಾಬ್ದಾರಿ ನಗರಸಭೆ ಅಧಿಕಾರಿಗಳದು.

ಸರ್ಕಾರದ ಆದೇಶದ ಪ್ರಕಾರ ಯಾವುದೇ ವ್ಯಕ್ತಿ, ಚಿಲ್ಲರೆ ಅಥವಾ ಸಗಟು ವ್ಯಾಪಾರಿಗಳು, ಅಂಗಡಿ ಮಾಲೀಕರು, ಮಾರಾಟಗಾರರು ಪ್ಲಾಸ್ಟಿಕ್‌ನಿಂದ ತಯಾರಿಸಿದ ಕ್ಯಾರಿ ಬ್ಯಾಗ್‌, ಭಿತ್ತಿಪತ್ರ, ಬ್ಯಾನರ್‌, ಬಾವುಟ, ತಟ್ಟೆ, ಲೋಟ, ಚಮಚ, ಊಟದ ಮೇಜಿನ ಮೇಲೆ ಹಾಕುವ ಪ್ಲಾಸ್ಟಿಕ್‌ ಹಾಳೆ, ಥರ್ಮಕೋಲ್‌ ಬಳಸುವಂತಿಲ್ಲ. ಅದೇ ರೀತಿ ಕೈಗಾರಿಕೆಗಳು ಅಥವಾ ವ್ಯಕ್ತಿಗಳು ಈ ನಿಷೇಧಿತ ವಸ್ತುಗಳ ಉತ್ಪಾದನೆ, ಸರಬರಾಜು, ಸಂಗ್ರಹಣೆ, ಸಾಗಾಣಿಕೆ, ಮಾರಾಟ ಹಾಗೂ ವಿತರಣೆ ಮಾಡುವಂತಿಲ್ಲ.

ವಿಶೇಷ ಆರ್ಥಿಕ ವಲಯಕ್ಕೆ (ಎಸ್‌ಇಝಡ್‌), ರಫ್ತು ಉದ್ದೇಶಿತ ಘಟಕಗಳಿಗೆ (ಇಒಯು) ಹಾಗೂ ರಫ್ತು ಉದ್ದೇಶಕ್ಕಾಗಿ ಉತ್ಪಾದಿಸುವ ಪ್ಲಾಸ್ಟಿಕ್‌ ವಸ್ತುಗಳಿಗೆ ಈ ಆದೇಶದಿಂದ ವಿನಾಯಿತಿ ಇದೆ. ಜತೆಗೆ ಹಾಲು ಮತ್ತು ಹಾಲಿನ ಉತ್ಪನ್ನಗಳ ಪ್ಯಾಕಿಂಗ್‌ಗೆ ಬಳಸುವ ಪ್ಲಾಸ್ಟಿಕ್‌, ಅರಣ್ಯ ಮತ್ತು ತೋಟಗಾರಿಕೆ ನರ್ಸರಿಗಳಲ್ಲಿ ಪ್ಲಾಸ್ಟಿಕ್‌ ಚೀಲ ಹಾಗೂ ಹಾಳೆಗಳನ್ನು ಉಪಯೋಗಿಸಲು ಅವಕಾಶವಿದೆ.

ನಗರಸಭೆ ಕಣ್ಗಾವಲು: ಸರ್ಕಾರದಿಂದ ನಿಷೇಧಿತವಾದ ಇತರೆ ಯಾವುದೇ ರೀತಿಯ ಪ್ಲಾಸ್ಟಿಕ್‌ ಉತ್ಪನ್ನಗಳನ್ನು ಬಳಸುವುದು ನಿಯಮಬಾಹಿರವಾಗುತ್ತದೆ. ಇಂತಹ ಚಟುವಟಿಕೆಗಳ ಮೇಲೆ ನಗರಸಭೆ ಆರೋಗ್ಯ ವಿಭಾಗದ ಅಧಿಕಾರಿಗಳು ನಿರಂತರವಾಗಿ ಕಣ್ಗಾವಲು ಇಡಬೇಕು. ಸರ್ಕಾರದ ಆದೇಶದಂತೆ ನಗರಸಭೆ ಅಧಿಕಾರಿಗಳು ಪ್ಲಾಸ್ಟಿಕ್‌ ಕವರ್‌ ಬಳಸುವ ಅಂಗಡಿಗಳ ಮೇಲೆ ದಾಳಿ ನಡೆಸಿ ದಂಡ ವಿಧಿಸಬೇಕು.

ಆದರೆ, ನಗರಸಭೆ ಆರೋಗ್ಯ ವಿಭಾಗದಲ್ಲಿ ಸಿಬ್ಬಂದಿ ಕೊರತೆಯಿದೆ. ಹೀಗಾಗಿ ಪ್ಲಾಸ್ಟಿಕ್‌ ಉತ್ಪನ್ನಗಳ ಬಳಕೆ ನಿಷೇಧ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಮಸ್ಯೆಯಾಗುತ್ತಿದೆ. ಆರೋಗ್ಯ ವಿಭಾಗದಲ್ಲಿ ಹಿರಿಯ ಆರೋಗ್ಯ ನಿರೀಕ್ಷಕರ 3 ಹುದ್ದೆ, ಕಿರಿಯ ಆರೋಗ್ಯ ನಿರೀಕ್ಷಕರ 2 ಹುದ್ದೆ ಹಾಗೂ ಮೇಲ್ವಿಚಾರಕರ 5 ಹುದ್ದೆಗಳು ಹಲವು ವರ್ಷಗಳಿಂದ ಖಾಲಿ ಇವೆ. ಈ ವಿಭಾಗದಲ್ಲಿರುವ ಬೆರಳೆಣಿಕೆ ಸಿಬ್ಬಂದಿ ಆಗಾಗ್ಗೆ ಅಂಗಡಿಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್‌ ಕವರ್‌ಗಳನ್ನು ಜಪ್ತಿ ಮಾಡುತ್ತಿದ್ದಾರೆ.

ದಂಡ ವಿಧಿಸಬಹುದು: ನಿಷೇಧಿತ ಪ್ಲಾಸ್ಟಿಕ್‌ ಉತ್ಪನ್ನಗಳ ತಯಾರಿಕೆ, ಸರಬರಾಜು ಹಾಗೂ ಬಳಕೆ ಮಾಡುವವರ ವಿರುದ್ಧ ಪರಿಸರ ಸಂರಕ್ಷಣೆ ಕಾಯ್ದೆ 1986ರ ಸೆಕ್ಷನ್‌ 19ರ ಅನ್ವಯ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಬಹುದು ಅಥವಾ ₹ 10 ಸಾವಿರದವರೆಗೆ ದಂಡ ವಿಧಿಸಬಹುದು. ಆದರೆ, ನಗರಸಭೆ ಅಧಿಕಾರಿಗಳು ಈ ಕಠಿಣ ಕ್ರಮಕ್ಕೆ ಮುಂದಾಗುತ್ತಿಲ್ಲ.

ಅಧಿಕಾರಿಗಳು ಪ್ಲಾಸ್ಟಿಕ್‌ ಕವರ್‌ ಬಳಸುವ ಅಥವಾ ಮಾರಾಟ ಮಾಡುವ ಅಂಗಡಿಗಳ ಮಾಲೀಕರಿಗೆ ಗರಿಷ್ಠ ₹ 500ರವರೆಗೆ ದಂಡ ವಿಧಿಸುತ್ತಿದ್ದಾರೆ. ಆದರೆ, ದಂಡದ ಅಸ್ತ್ರಕ್ಕೂ ಬಗ್ಗದ ಅಂಗಡಿ ಮಾಲೀಕರು ಅಧಿಕಾರಿಗಳ ಕಣ್ತಪ್ಪಿಸಿ ಗ್ರಾಹಕರಿಗೆ ಪ್ಲಾಸ್ಟಿಕ್‌ ಕವರ್ ಕೊಡುತ್ತಿದ್ದಾರೆ. ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್‌ ಉತ್ಪನ್ನಗಳ ಬಳಕೆ ಅವ್ಯಾಹತವಾಗಿ ನಡೆಯುತ್ತಿದ್ದು, ಸುತ್ತಲಿನ ಪರಿಸರದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.