ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಮನೆ ಬಾಗಿಲಲ್ಲಿ ನಿಂತಿದ್ದಾರೆ: ಶಾಸಕ ಶ್ರೀನಿವಾಸಗೌಡ ಟೀಕೆ

ಮಾಜಿ ಶಾಸಕರ ವಿರುದ್ಧ ಹಾಲಿ ಶಾಸಕ ಶ್ರೀನಿವಾಸಗೌಡ ಟೀಕೆ
Last Updated 15 ಫೆಬ್ರುವರಿ 2021, 16:24 IST
ಅಕ್ಷರ ಗಾತ್ರ

ಕೋಲಾರ: ‘ಕ್ಷೇತ್ರದ ವ್ಯಾಪ್ತಿಯ ಬಹುತೇಕ ಗ್ರಾಮ ಪಂಚಾಯಿತಿಗಳು ಜೆಡಿಎಸ್ ಬೆಂಬಲಿತ ಸದಸ್ಯರು ಅಧ್ಯಕ್ಷ-ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಆದರೂ ರಾಜಕೀಯವಾಗಿ ನೆಲೆ ಗಟ್ಟಿಮಾಡಿಕೊಳ್ಳಲು ಮಾಜಿ ಶಾಸಕ ವರ್ತೂರು ಪ್ರಕಾಶ್ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ’ ಎಂದು ಶಾಸಕ ಕೆ. ಶ್ರೀನಿವಾಸಗೌಡ ಟೀಕಿಸಿದರು.

ತಾಲ್ಲೂಕಿನ ಪುರಹಳ್ಳಿ, ತಿಪ್ಪೇನಹಳ್ಳಿ ಹಾಗೂ ಜಂಭಪುರ ಗ್ರಾಮದಲ್ಲಿ ಸಿ.ಸಿ ರಸ್ತೆ ಕಾಮಗಾರಿಗೆ ಸೋಮವಾರ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ‘ಕ್ಷೇತ್ರದ ವ್ಯಾಪ್ತಿಯಲ್ಲಿ 18 ಗ್ರಾ.ಪಂಗಳಿದ್ದು, ಈ ಪೈಕಿ 14 ಕಡೆ ಜೆಡಿಎಸ್ ಬೆಂಬಲಿತ ಸದಸ್ಯರು ಅಧಿಕಾರ ಹಿಡಿದಿದ್ದಾರೆ. ಅವರಿಗೆ ಹೂವಿನ ಹಾರ ಹಾಕಿ ತಮ್ಮವರು ಎಂದು ಹೇಳಿಕೊಳ್ಳುತ್ತಿರುವ ವರ್ತೂರು ಪ್ರಕಾಶ್‌ಗೆ ನಾಚಿಕೆಯಾಗಬೇಕು’ ಎಂದು ವ್ಯಂಗ್ಯವಾಡಿದರು.

‘ವರ್ತೂರು ಪ್ರಕಾಶ್ ಎಲ್ಲಿಂದಲೋ ಕ್ಷೇತ್ರಕ್ಕೆ ಬಂದು ನೆಲೆಯೂರಲು ಯತ್ನಿಸಿದರು. ಎಲ್ಲಾ ಕಾಲಕ್ಕೂ ಅವರ ಆಟ ನಡೆಯಲ್ಲ. ಕ್ಷೇತ್ರದ ಜನ ತೀರ್ಮಾನ ಮಾಡಿ ಹಿಂದಿನ ಚುನಾವಣೆಯಲ್ಲಿ ಅವರನ್ನು ಸೋಲಿಸಿದ್ದಾರೆ. ಅವರಿಗೆ ಸೋಲಿನ ನೋವಿನಿಂದ ಹೊರ ಬರಲು ಸಾಧ್ಯವಾಗಿಲ್ಲ. ಅವರು ಹಗಲುಗನಸು ಕಾಣುವುದನ್ನು ಬಿಟ್ಟು, ಬೇರೆ ಕ್ಷೇತ್ರ ನೋಡಿಕೊಳ್ಳುವುದು ಒಳ್ಳೆಯದು’ ಎಂದು ಕುಟುಕಿದರು.

‘ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸಿದರೆ ಗೆಲ್ಲುವುದಿಲ್ಲ ಎಂದು ವರ್ತೂರು ಪ್ರಕಾಶ್‌ಗೆ ಮನವರಿಕೆ ಆಗಿದೆ. ಹೀಗಾಗಿ ಕಾಂಗ್ರೆಸ್ ಮನೆ ಬಾಗಿಲಲ್ಲಿ ನಿಂತು ಪಕ್ಷಕ್ಕೆ ಸೇರ್ಪಡೆಯಾಗಲು ದುಂಬಾಲು ಬೀಳುತ್ತಿದ್ದಾರೆ. ಕ್ಷೇತ್ರದ ಜನ 10 ವರ್ಷ ಅವರ ಆಟ ನೋಡಿ ಚುನಾವಣೆಯಲ್ಲಿ ಸೋಲಿಸಿದರೂ ಬುದ್ಧಿ ಕಲಿತಿಲ್ಲ’ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಶಾಪ ವಿಮೋಚನೆ: ‘ವರ್ತೂರು ಪ್ರಕಾಶ್‌ ಸೋಲಿನ ಬಳಿಕ ಕ್ಷೇತ್ರದ ಶಾಪ ವಿಮೋಚನೆಯಾಗಿದೆ. ಗ್ರಾಮಗಳಲ್ಲಿ ಜನ ಈಗ ನೆಮ್ಮದಿಯಿಂದ ಬದುಕುತ್ತಿದ್ದಾರೆ. ಕ್ಷೇತ್ರದ ಕೆರೆಗಳಿಗೆ ಕೆ.ಸಿ ವ್ಯಾಲಿ ಯೋಜನೆ ನೀರು ಹರಿದು ಬಂದ ಮೇಲೆ ಕೊಳವೆ ಬಾವಿಗಳು ಮರುಪೂರಣಗೊಂಡು ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿದೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರ ವಹಿಸಿದ್ದು, ನೀರಿನ ಸೌಕರ್ಯಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದರು.

‘ಕ್ಷೇತ್ರದ ಸರ್ವತ್ತೋಮುಖ ಅಭಿವೃದ್ಧಿಗೆ ಶಕ್ತಿಮೀರಿ ಪ್ರಯತ್ನ ಮಾಡುತ್ತೇನೆ. ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟ ಚೆನ್ನಾಗಿರಬೇಕು. ಕಾಮಗಾರಿ ಕಳಪೆ ಎಂದು ಕಂಡುಬಂದರೆ ಸುಮ್ಮನಿರುವುದಿಲ್ಲ’ ಎಂದು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಸೋಮಣ್ಣ, ದಯಾನಂದ್, ಜೆಡಿಎಸ್ ರಾಜ್ಯ ಯುವ ಸಂಘಟನಾ ಕಾರ್ಯದರ್ಶಿ ವೇಣು, ಚನ್ನಸಂದ್ರ ಗ್ರಾ.ಪಂ ಸದಸ್ಯ ಹರಿಪ್ರಸಾದ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT