ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವೇಮಗಲ್: ಬಾಗಿಲು ತೆರೆಯದ ಆರೋಗ್ಯ ಉಪಕೇಂದ್ರ

ಎಸ್.ಎಂ.ಅಮರ್
Published 9 ಜೂನ್ 2024, 7:34 IST
Last Updated 9 ಜೂನ್ 2024, 7:34 IST
ಅಕ್ಷರ ಗಾತ್ರ

ವೇಮಗಲ್: ಹೋಬಳಿಯ ರಾಜಕಲ್ಲಹಳ್ಳಿ ಗ್ರಾಮದಲ್ಲಿ ಕಳೆದ ಮೂರು ತಿಂಗಳಿನಿಂದ ಆರೋಗ್ಯ ಉಪ ಕೇಂದ್ರ ಬಾಗಿಲು ತೆರೆಯದ ಕಾರಣ ಈ ಭಾಗದ ಹಿರಿಯರು, ಗರ್ಭಿಣಿಯರಿಗೆ ತೊಂದರೆ ಉಂಟಾಗಿದೆ.

ಗ್ರಾಮೀಣ ಭಾಗದ ಜನರ ಅನುಕೂಲಕ್ಕಾಗಿ ಪ್ರಾರಂಭವಾಗಿರುವ ಆರೋಗ್ಯ ಉ‍ಪ ಕೇಂದ್ರದ ಬಾಗಿಲು ಮುಚ್ಚಲಾಗಿದೆ. ಐಪಿಎಚ್‌ಎಸ್‌ ಪ್ರಕಾರ ಒಂದು ಆರೋಗ್ಯ ಉಪ ಕೇಂದ್ರ ನಿರ್ವಹಿಸಲು ಇಬ್ಬರು ಆರೋಗ್ಯ ಕಾರ್ಯಕರ್ತರು ಬೇಕಾಗುತ್ತದೆ. ಇವರು ಗ್ರಾಮದ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಜವಾಬ್ದಾರರಾಗಿರುತ್ತಾರೆ.

ಮಹಿಳಾ ಶೂಶ್ರೂಕರು ಗ್ರಾಮದ ಗರ್ಭಿಣಿಯರನ್ನು ನೋಂದಾಯಿಸುವ ಹಾಗೂ ಪ್ರಸವಪೂರ್ವ ಹಾರೈಕೆ, ಗರ್ಭಿಣಿಯರಿಗೆ ಅಗತ್ಯವಿರುವ ಮಾತ್ರೆ ವಿತರಣೆ, ಆರೋಗ್ಯ ವಿಚಾರಣೆ ಮಾಡಬೇಕಾಗುತ್ತದೆ. ಆದರೆ ಆರೋಗ್ಯ ಕೇಂದ್ರ ಮೂರು ತಿಂಗಳಿಂದ ಬಾಗಿಲು ಹಾಕಿದ್ದು, ಜನತೆಗೆ ಸೌಲಭ್ಯವಿಲ್ಲದೆ ತೊಂದರೆ ಅನುಭವಿಸುವಂತಾಗಿದೆ.

ಬಿಪಿ, ಸಕ್ಕರೆ ಕಾಯಿಲೆ ಇರುವವರು ಈ ಆರೋಗ್ಯ ಕೇಂದ್ರದಿಂದಲೇ ಮಾತ್ರೆ ಪಡೆಯುತ್ತಿದ್ದು, ಈಗ ಮದ್ದೇರಿ ಅಥವಾ ವೇಮಗಲ್ ಆಸ್ಪತ್ರೆಗೆ ಮಾತ್ರೆಗಾಗಿ ಹೋಗಬೇಕಾಗಿದೆ.

ಇನ್ನು ಆರೋಗ್ಯ ಉಪ ಕೇಂದ್ರ ಮತ್ತು ಪಶು ಆಸ್ಪತ್ರೆ ಮಧ್ಯದಲ್ಲಿ ಕಲುಷಿತ ನೀರಿನಿಂದ ತುಂಬಿರುವ ಕುಂಟೆ ಇದ್ದು, ಊರಿನ ಚರಂಡಿ ನೀರು ಈ ಕುಂಟೆಗೆ ಸೇರಿಕೊಳ್ಳುತ್ತದೆ. ಜತೆಗೆ ಗ್ರಾಮದ ಕಸವನ್ನು ಇಲ್ಲೇ ಎಸೆಯುವುದರಿಂದ ದುರ್ನಾತ ಬೀರುತ್ತಿದೆ. ಸಂಜೆಯಾಗುತ್ತಲೇ ಇದರ ಸುತ್ತಾಮುತ್ತ ಸೊಳ್ಳೆಗಳ ಸಾಮ್ರಾಜ್ಯವೇ ಸೃಷ್ಟಿಯಾಗಿರುತ್ತದೆ. ಇದರಿಂದ ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಜನ ಬದುಕಬೇಕಾಗಿದೆ. ಒಂದು ಕಡೆ ಸಾಂಕ್ರಾಮಿಕ ರೋಗದ ಭೀತಿಯಾದರೆ, ಇನ್ನೊಂದು ಕಡೆ ಆರೋಗ್ಯ ಕೇಂದ್ರ ಬಾಗಿಲು ತೆರೆದಿಲ್ಲ. ಇದರಿಂದ ರಾಜಕಲ್ಲಹಳ್ಳಿ ಗ್ರಾಮಸ್ಥರ ಆರೋಗ್ಯ ಸ್ಥಿತಿ ಕೇಳುವವರಿಲ್ಲವಂತಾಗಿದೆ. ಹಾಗಾಗಿ ಆರೋಗ್ಯ ಇಲಾಖೆಯವರು ಈ ಬಗ್ಗೆ ಗಮನಹರಿಸಿ ಕೂಡಲೇ ಆರೋಗ್ಯ ಕೇಂದ್ರದ ಬಾಗಿಲು ತೆರೆಯಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಶೀಘ್ರ ಸಮಸ್ಯೆ ಪರಿಹಾರಕ್ಕೆ ಕ್ರಮ

ರಾಜಕಲ್ಲಹಳ್ಳಿಯ ಆರೋಗ್ಯ ಉಪ ಕೇಂದ್ರವನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರವಾಗಿ ಮೇಲ್ದರ್ಜೆಗೇರಿಸಲಾಗಿದೆ. ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಮುದಾಯ ಆರೋಗ್ಯಾಧಿಕಾರಿ ರಾಜೀನಾಮೆ ನೀಡಿದ್ದಾರೆ. ಹಾಗಾಗಿ ಇಲ್ಲಿಗೆ ಬೇರೆಯವರನ್ನು ಪ್ರಭಾರಿಯಾಗಿ ಕಾರ್ಯ ನಿರ್ವಹಿಸಲು ತಿಳಿಸಿದ್ದಾರೆ. ಈ ಬಗ್ಗೆ ಬಗ್ಗೆ ಗಮನ ಹರಿಸಿ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಲಾಗುವುದು - ಎ.ವಿ.ನಾರಾಯಣಸ್ವಾಮಿ, ತಾಲ್ಲೂಕು ಆರೋಗ್ಯಾಧಿಕಾರಿ, ಕೋಲಾರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT