ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

15ಕ್ಕೆ ವಿಧಾನಸೌಧ ಚಲೋ ಹೋರಾಟ: ಎಸ್.ಮುನಿಸ್ವಾಮಿ

ಕಾಂಗ್ರೆಸ್‌ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ, ಸಿಎಂ ರಾಜೀನಾಮೆಗೆ ಆಗ್ರಹ
Published 7 ಜುಲೈ 2024, 15:24 IST
Last Updated 7 ಜುಲೈ 2024, 15:24 IST
ಅಕ್ಷರ ಗಾತ್ರ

ಪ್ರಜಾವಾಣ ವಾರ್ತೆ

ಕೋಲಾರ: ‘ರಾಜ್ಯ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ, ದಲಿತ ವಿರೋಧಿ ವೈಫಲ್ಯ ಖಂಡಿಸಿ ಹಾಗೂ ಭ್ರಷ್ಟಾಚಾರದಲ್ಲಿ ತೊಡಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಜುಲೈ 15 ರಂದು ಬಿಜೆಪಿ ಹಾಗೂ ವಿವಿಧ ಜನಪರ ಸಂಘಟನೆಗಳ ನೇತೃತ್ವದಲ್ಲಿ ವಿಧಾನಸೌಧ ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ’ ಎಂದು ಬಿಜೆಪಿ ಮುಖಂಡ, ಮಾಜಿ ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರೈತಪರ ಎಂದವರು ಹಾಲಿನ ಉತ್ಪಾದನೆ ಹೆಚ್ಚಿರುವುದರಿಂದ ಪ್ಯಾಕೇಟ್‌ಗೆ 50 ಎಂಎಲ್ ಹೆಚ್ಚು ಹಾಲು ನೀಡುವುದಾಗಿ ಹೇಳಿ ₹ 2 ಹೆಚ್ಚಿಸಿ ಗ್ರಾಹಕರಿಗೆ ಹೊರೆ ಹೇರಿದರು. ಇದೀಗ ಕೋಲಾರ ಹಾಲು ಒಕ್ಕೂಟದಲ್ಲಿ ರೈತರಿಂದ ಖರೀದಿಸುವ ಹಾಲಿನ ದರ ₹ 2 ಕಡಿಮೆ ಮಾಡಿ ರೈತರಿಗೆ ದ್ರೋಹ ಬಗೆದಿದ್ದಾರೆ’ ಎಂದು ಹರಿಹಾಯ್ದರು.

‘ಖಾಲಿಯಾಗಿರುವ ರಾಜ್ಯದ ಖಜಾನೆ ತುಂಬಿಸಿಕೊಳ್ಳಲು ಏನು ಮಾಡಬೇಕೆಂಬುದೇ ತಿಳಿಯದೇ ಜನರ ತಲೆ ಮೇಲೆ ಬೆಲೆ ಏರಿಕೆಯ ಹೊರೆ ಹಾಕುತ್ತಿದ್ದಾರೆ’ ಎಂದು ಟೀಕಿಸಿದರು.

ಹೋರಾಟಕ್ಕೆ ಬನ್ನಿ: ‘ದಲಿತರ ಎಸ್‌ಸಿಪಿ, ಎಸ್‌ಟಿಪಿ ₹ 14,280 ಕೋಟಿ ಅನುದಾನವನ್ನು ಗ್ಯಾರಂಟಿಗಳಿಗೆ ಬಳಸಿಕೊಂಡು ಪರಿಶಿಷ್ಟರಿಗೆ ಅನ್ಯಾಯ ಮಾಡಿದ್ದಾರೆ. ಇದನ್ನು ನೋಡಿಕೊಂಡು ದಲಿತ ಸಂಘಟನೆಗಳ ಮುಖಂಡರು ಸುಮ್ಮನಿರುವುದು ಅನುಮಾನಕ್ಕೆಡೆ ಮಾಡಿಕೊಟ್ಟಿದೆ. ಸಂಘಟನೆಗಳ ಮುಖಂಡರಿಗೆ ನಿಜಕ್ಕೂ ಸಮುದಾಯದ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಹೋರಾಟಕ್ಕಿಳಿಯಬೇಕು’ ಎಂದು ಆಗ್ರಹಿಸಿದರು.

‘ಸಂವಿಧಾನ ಉಳಿಸಲು ಬಂದವರು ಪರಿಶಿಷ್ಟರ ಹಣ ನುಂಗಿದ್ದಾರೆ, ವಾಲ್ಮೀಕಿ ನಿಗಮದ ₹ 187 ಕೋಟಿಯನ್ನು ತೆಲಂಗಾಣ ಚುನಾವಣೆಗಾಗಿ ವಿವಿಧ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಇಷ್ಟಾದರೂ ದಲಿತ ಸಂಘಟನೆಗಳು ಮನೆ ಬಿಟ್ಟು ಹೊರಗೆ ಏಕೆ ಬರುತ್ತಿಲ್ಲ’ ಎಂದು ಪ್ರಶ್ನಿಸಿದರು.

‘ಈ ಸರ್ಕಾರದಿಂದ 1 ಕಿ.ಮೀ ರಸ್ತೆ ಅಭಿವೃದ್ಧಿಪಡಿಸಲು ಸಾಧ್ಯವಾಗಿಲ್ಲ. ಮೂಡಾ ಹಗರಣದಲ್ಲಿ ಮುಖ್ಯಮಂತ್ರಿ ಕುಟುಂಬದವರೇ 14 ನಿವೇಶನ ಪಡೆದಿದ್ದಾರೆ, ಸತ್ಯ ಬಹಿರಂಗಪಡಿಸಿದ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ನೈತಿಕತೆ ಇದ್ದರೆ ಕೂಡಲೇ ರಾಜೀನಾಮೆ ನೀಡಬೇಕು ಮತ್ತು ವಿಧಾನಸಭೆ ವಿಸರ್ಜಿಸಬೇಕು’ ಎಂದು ಆಗ್ರಹಿಸಿದರು.

ನಂತರ ಅವರು ಬಿಜೆಪಿ ಮುಖಂಡರು, ಕಾರ್ಯಕರ್ತರ ಸಭೆ ನಡೆಸಿ ಜುಲೈ 15ರಂದು ನಡೆಯಲಿರುವ ಹೋರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕೆಂದು ಕರೆ ನೀಡಿದರು.

ವಿಧಾನ ಪರಿಷತ್ ಮಾಜಿ ಸಚೇತಕ ವೈ.ಎ.ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಓಂಶಕ್ತಿ ಚಲಪತಿ, ಮುಖಂಡರಾದ ಪ್ರವೀಣ್‍ ಗೌಡ, ಮಾಗೇರಿ ನಾರಾಯಣಸ್ವಾಮಿ, ಕೆಂಬೋಡಿ ನಾರಾಯಣಸ್ವಾಮಿ, ಹೇಮಾರೆಡ್ಡಿ ಇದ್ದರು.

Quote - ದಲಿತರು ರೈತರು ಜನಸಾಮಾನ್ಯರಿಗೆ ದ್ರೋಹ ಬಗೆದು ಭ್ರಷ್ಟಾಚಾರದಲ್ಲಿ ಮುಳುಗಿರುವ ಈ ಸರ್ಕಾರಕ್ಕೆ ಗ್ಯಾರಂಟಿಯೂ ಇಲ್ಲ ವಾರೆಂಟಿಯೂ ಇಲ್ಲ. ರಾಜ್ಯದ ಖಜಾನೆ ಖಾಲಿಯಾಗಿದೆ ಎಸ್‌.ಮುನಿಸ್ವಾಮಿ ಮಾಜಿ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT