ಗುರುವಾರ , ಮಾರ್ಚ್ 30, 2023
24 °C
ಪರಿಸರಕ್ಕೆ ಹಾನಿ: ಪರಿಸರ ಹಿತರಕ್ಷಣಾ ಸಮಿತಿ ಆರೋಪ

ಕೋಲಾರ: ವೃಷಭಾದ್ರಿ ಬೆಟ್ಟ- ಗಣಿಗಾರಿಕೆಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲಾರ: ‘ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ದೇವರಾಯಸಮುದ್ರದ ವೃಷಭಾದ್ರಿ ಬೆಟ್ಟದಲ್ಲಿ ನಡೆಯುತ್ತಿರುವ ಗಣಿಗಾರಿಕೆ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದು, ಜಿಲ್ಲಾಡಳಿತವು ಅಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದು’ ಎಂದು ಪರಿಸರ ಹಿತರಕ್ಷಣಾ ಸಮಿತಿ ಸದಸ್ಯ ತ್ಯಾಗರಾಜ್ ಒತ್ತಾಯಿಸಿದರು.

ಇಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ನದಿ ನಾಲೆಯಂತಹ ಮೇಲ್ಮೈ ನೀರಿನ ಮೂಲಗಳಿಲ್ಲ. ಹೀಗಾಗಿ ರೈತರು ಮಳೆ ಆಶ್ರಯದಲ್ಲಿ ಕೃಷಿ ಮಾಡುವ ಪರಿಸ್ಥಿತಿಯಿದೆ. ಜಿಲ್ಲೆಯಲ್ಲಿ ಬೆಟ್ಟಗಳ ಮೇಲೆ ಬೀಳುವ ಮಳೆ ನೀರು ಕೃಷಿಗೆ ಆಧಾರ. ಆದರೆ, ಬಹುತೇಕ ಬೆಟ್ಟಗಳಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದ ಪರಿಸರಕ್ಕೆ ಹಾನಿಯಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಸುಮಾರು 1,300 ಎಕರೆ ವಿಸ್ತಾರವಾಗಿರುವ ವೃಷಭಾದ್ರಿ ಬೆಟ್ಟವು ಏಕಶಿಲೆಯ ಬೆಟ್ಟವಾಗಿದೆ. ಬೆಟ್ಟದ ಅಕ್ಕಪಕ್ಕದ ಜಮೀನುಗಳಲ್ಲಿ ರೈತರು ಹೆಚ್ಚಾಗಿ ಭತ್ತ ಬೆಳೆಯುತ್ತಾರೆ. ಬೆಟ್ಟದ ಸುತ್ತಮುತ್ತ 20ಕ್ಕೂ ಹೆಚ್ಚು ಕೆರೆಗಳಿದ್ದು, ಈ ಕೆರೆಗಳಿಗೆ ಬೆಟ್ಟದ ನೀರು ಮೂಲವಾಗಿದೆ. 30ಕ್ಕೂ ಹೆಚ್ಚು ಹಳ್ಳಿಯ ಜನ ಬೆಟ್ಟ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಪಾಲಾರ್ ನದಿಗೆ ನೀರಿನ ಸಂಪರ್ಕ ಕಲ್‍ಪಿಸುವ ಏಕೈಕ ಬೆಟ್ಟ ಇದಾಗಿದೆ’ ಎಂದು ಮಾಹಿತಿ ನೀಡಿದರು.

‘ಪ್ರಪಂಚದಲ್ಲೇ ಅತಿ ಅಪರೂಪವಾದ ಎಲೆಮೂತಿ ಬಾವಲಿಗಳು ವೃಷಭಾದ್ರಿ ಬೆಟ್ಟದಲ್ಲಿವೆ. ಬೆಟ್ಟದ ತಪ್ಪಲಲ್ಲಿ ಶಿವರುದ್ರ ಬಾಲಯೋಗಿ ಮಠ ಹಾಗೂ ವನ್ಯಜೀವಿಗಳಿದ್ದು, ಬೆಟ್ಟದ ಸಂರಕ್ಷಣೆಯಲ್ಲಿ ಸಮಿತಿ ನಿರ್ಣಾಯಕ ಪಾತ್ರ ವಹಿಸಿದೆ’ ಎಂದು ತಿಳಿಸಿದರು.

‘ವೃಷಭಾದ್ರಿ ಬೆಟ್ಟದಲ್ಲಿ ಕ್ರಷರ್, ಎಂ–ಸ್ಯಾಂಡ್ ಗಣಿಗಾರಿಕೆ ನಡೆಯುತ್ತಿರುವುದರ ವಿರುದ್ಧ ಸಮಿತಿಯು ಹಸಿರು ಪೀಠ ಮತ್ತು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ. ಹೀಗಾಗಿ ಅಕ್ರಮ ಗಣಿಗಾರಿಕೆ ಸ್ಥಗಿತಗೊಂಡಿದೆ. ನ್ಯಾಯಾಲಯದಲ್ಲಿ ಆ.6 ಮತ್ತು 9ರಂದು ಅರ್ಜಿಯ ವಿಚಾರಣೆ ನಡೆಯಲಿದೆ’ ಎಂದು ವಿವರಿಸಿದರು.

ಅನುಮತಿ ನೀಡಬಾರದು: ‘ವೃಷಭಾದ್ರಿ ಬೆಟ್ಟ ಸೇರಿದಂತೆ ಜಿಲ್ಲೆಯ ಬೆಟ್ಟ ಪ್ರದೇಶದಲ್ಲಿ ಕ್ರಷರ್, ಎಂ–ಸ್ಯಾಂಡ್ ಘಟಕಗಳಿಗೆ ಅನುಮತಿ ನೀಡಬಾರದು. ಬಂಡೆ ಸಿಡಿಸಲು ಭಾರಿ ಸ್ಫೋಟಕಗಳನ್ನು ಬಳಸುವುದರಿಂದ ಪರಿಸರಕ್ಕೆ, ವನ್ಯ ಜೀವಿಗಳಿಗೆ ಸಮಸ್ಯೆಯಾಗುತ್ತದೆ. ಪರಿಸರಕ್ಕೆ ಹಾನಿಯಾಗುವ ಚಟುವಟಿಕೆಗಳನ್ನು ಸಮಿತಿ ವಿರೋಧಿಸುತ್ತದೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ನಿರಾತಂಕವಾಗಿ ನಡೆಯುತ್ತಿದೆ. ಬೆಂಗಳೂರಿನ ಅನೇಕ ಉದ್ಯಮಿಗಳು ಜಿಲ್ಲೆಯಲ್ಲಿ ಗಣಿಗಾರಿಕೆ ನಡೆಸುತ್ತಿದ್ದಾರೆ. ಅಧಿಕಾರಿಗಳು ಹಣದಾಸೆಗೆ ಕದ್ದುಮುಚ್ಚಿ ಗಣಿಗಾರಿಕೆಗೆ ಅವಕಾಶ ನೀಡುತ್ತಿದ್ದಾರೆ. ಇದರಿಂದ ಜಿಲ್ಲೆಯ ಬೆಟ್ಟಗಳ ಸೌಂದರ್ಯ ಹಾಳಾಗುತ್ತಿದೆ. ಪ್ರಕೃತಿ ಸೌಂದರ್ಯ ಕಾಪಾಡುವ ನಿಟ್ಟಿನಲ್ಲಿ ದೊಡ್ಡ ಹೋರಾಟ ನಡೆಸಬೇಕಿದೆ’ ಎಂದು ಸಲಹೆ ನೀಡಿದರು.

ಸಮಿತಿ ಅಧ್ಯಕ್ಷ ಎಸ್.ವಿನಯ್‌ಕುಮಾರ್, ಉಪಾಧ್ಯಕ್ಷೆ ಪಾಪಮ್ಮ, ಪ್ರಧಾನ ಕಾರ್ಯದರ್ಶಿ ಕೆ.ರಮೇಶ್‌ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು