ಗುರುವಾರ , ಅಕ್ಟೋಬರ್ 1, 2020
27 °C
ಟ್ಯಾಂಕರ್‌ ನೀರು ಪೂರೈಕೆ ಸ್ಥಗಿತ: ಅಧಿಕಾರಿಗಳ ವಿರುದ್ಧ ಆಕ್ರೋಶ

ಕುಡಿಯುವ ನೀರಿನ ಸಮಸ್ಯೆ: ನಗರಸಭೆ ಸದಸ್ಯರ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ನೀರಿನ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿ ನಗರಸಭೆಯ ವಿವಿಧ ವಾರ್ಡ್‌ಗಳ ಸದಸ್ಯರು ಇಲ್ಲಿ ಶುಕ್ರವಾರ ನಗರಸಭೆ ಎದುರು ಧರಣಿ ನಡೆಸಿದರು.

‘ನಗರದಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿದೆ. ನಲ್ಲಿಗಳಲ್ಲಿ ನೀರು ಬಂದು ವರ್ಷವೇ ಕಳೆದಿದೆ. ಮತ್ತೊಂದೆಡೆ ಟ್ಯಾಂಕರ್‌ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ. ಈ ಸಂಬಂಧ ನಗರಸಭೆ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದರೂ ಸಮಸ್ಯೆ ಬಗೆಹರಿದಿಲ್ಲ’ ಎಂದು ಧರಣಿನಿರತ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

‘ನೀರಿನ ಸಮಸ್ಯೆ ತೀವ್ರಗೊಂಡಿದ್ದರೂ ನಗರಸಭೆ ಅಧಿಕಾರಿಗಳು ಕುಣ್ಮುಚ್ಚಿ ಕುಳಿತಿದ್ದಾರೆ. ದಪ್ಪ ಚರ್ಮದ ಅಧಿಕಾರಶಾಹಿಗೆ ಜನರ ಸಮಸ್ಯೆ ಅರ್ಥವಾಗುತ್ತಿಲ್ಲ. ನೀರಿನ ಸಮಸ್ಯೆ ವಿಷಯವಾಗಿ ನಗರಸಭೆಗೆ ಅಲೆದು ಚಪ್ಪಲಿ ಸವೆದವೆ ಹೊರತು ಸಮಸ್ಯೆ ಮಾತ್ರ ಬಗೆಹರಿದಿಲ್ಲ’ ಎಂದು 14ನೇ ವಾರ್ಡ್‌ ಸದಸ್ಯ ಎಸ್.ಆರ್.ಮುರಳಿಗೌಡ ಅಸಮಾಧಾನ ವ್ಯಕ್ತಪಡಿಸಿದರು.

‘ಸರ್ಕಾರ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯೆಂದು ಘೋಷಿಸಿದೆ. ಬರ ಪರಿಹಾರ ನಿಧಿ ಅನುದಾನದಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿತ್ತು. ಆ.1ರಿಂದ ಅನ್ವಯವಾಗುವಂತೆ ಟ್ಯಾಂಕರ್‌ ನೀರು ಸರಬರಾಜಿಗೆ ಬರ ಪರಿಹಾರ ನಿಧಿ ಸ್ಥಗಿತಗೊಳಿಸಲಾಗಿದೆ. ನಗರಸಭೆ ನಿಧಿ ಹಣವನ್ನು ಟ್ಯಾಂಕರ್‌ ನೀರು ಪೂರೈಕೆಗೆ ಬಳಕೆ ಮಾಡಬೇಕು’ ಎಂದು ಹೇಳಿದರು.

ನೀರು ಬತ್ತಿದೆ: ‘ಜಿಲ್ಲೆಯಲ್ಲಿ ನದಿ, ನಾಲೆಯಂತಹ ಮೇಲ್ಮೈ ನೀರಿನ ಮೂಲಗಳಿಲ್ಲ. ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದ್ದು, ಕೊಳವೆ ಬಾವಿಗಳಲ್ಲಿ ನೀರು ಬತ್ತಿದೆ. ನೀರಿನ ಸಮಸ್ಯೆ ಹೇಳಲು ನಗರಸಭೆಗೆ ಬಂದರೆ ಅಧಿಕಾರಿಗಳೇ ಇರುವುದಿಲ್ಲ. ಅಧಿಕಾರಿಗಳ ಬೇಜವಾಬ್ದಾರಿಯಿಂದ ವಾರ್ಡ್‌ನಲ್ಲಿ ಜನರ ನಿಂದನೆಗೆ ಗುರಿಯಾಗಿದ್ದೇವೆ’ ಎಂದು 2ನೇ ವಾರ್ಡ್‌ ಸದಸ್ಯ ಎನ್‌.ಎಸ್‌.ಪ್ರವೀಣ್‌ ಅಸಮಾಧಾನ ವ್ಯಕ್ತಪಡಿಸಿದರು.

‘ಸರ್ಕಾರ ಜಿಲ್ಲಾಧಿಕಾರಿಯನ್ನು ನಗರಸಭೆಗೆ ಆಡಳಿತಾಧಿಕಾರಿಯಾಗಿ ನೇಮಿಸಿದೆ. ಕೊರೊನಾ ಸೋಂಕಿನ ಕಾರ್ಯ ಒತ್ತಡದಲ್ಲಿರುವ ಜಿಲ್ಲಾಧಿಕಾರಿ ಅವರಿಗೆ ನಗರದ ನೀರಿನ ಸಮಸ್ಯೆ ಬಗ್ಗೆ ಗಮನಹರಿಸಲು ಕಾಲಾವಕಾಶ ಇಲ್ಲವಾಗಿದೆ. ನಗರಸಭೆ ಅಧಿಕಾರಿಗಳು ನೀರಿನ ವಿಚಾರವಾಗಿ ಜಿಲ್ಲಾಧಿಕಾರಿಗೆ ಸುಳ್ಳು ಮಾಹಿತಿ ನೀಡಿ ಸಮಸ್ಯೆ ಮರೆಮಾಚುತ್ತಿದ್ದಾರೆ’ ಎಂದು ಧರಣಿನಿರತರು ದೂರಿದರು.

ಅನಿರ್ದಿಷ್ಟಾವಧಿ ಧರಣಿ: ‘ನಗರಸಭೆ ಆಡಳಿತ ಯಂತ್ರವು ನೀರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದ ನಂತರ ಟ್ಯಾಂಕರ್‌ ನೀರು ಪೂರೈಕೆ ಸ್ಥಗಿತಗೊಳಿಸಲಿ. ಆವರೆಗೆ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಬೇಕು. ನೀರು ಲಭ್ಯವಿರುವ ಕೊಳವೆ ಬಾವಿಗಳಿಗೆ ಶೀಘ್ರವೇ ಪಂಪ್‌, ಮೋಟರ್‌ ಅಳವಡಿಸಬೇಕು. ಕೆಟ್ಟಿರುವ ಪಂಪ್‌ ಮತ್ತು ಮೋಟರ್‌ಗಳನ್ನು ರಿಪೇರಿ ಮಾಡಬೇಕು. ಇಲ್ಲದಿದ್ದರೆ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ನಗರಸಭೆ ಸದಸ್ಯರಾದ ರಾಕೇಶ್‌, ಮಂಜುನಾಥ್‌ ಪಾಲ್ಗೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು