ಶನಿವಾರ, ಮಾರ್ಚ್ 6, 2021
25 °C
ಖಾಲಿ ಬಿಂದಿಗೆ ಪ್ರದರ್ಶಿಸಿ ರೈತ ಸಂಘ– ಹಸಿರು ಸೇನೆ ಸದಸ್ಯರ ಆಕ್ರೋಶ

ನೀರಿನ ಸಮಸ್ಯೆ: ತಾ.ಪಂ ಎದುರು ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ಗ್ರಾಮೀಣ ಭಾಗದಲ್ಲಿ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಪ್ರೊ.ನಂಜುಂಡಸ್ವಾಮಿ ಸ್ಥಾಪಿತ) ಸದಸ್ಯರು ಇಲ್ಲಿ ಮಂಗಳವಾರ ತಾಲ್ಲೂಕು ಪಂಚಾಯಿತಿ ಎದುರು ಖಾಲಿ ಬಿಂದಿಗೆಗಳೊಂದಿಗೆ ಧರಣಿ ನಡೆಸಿದರು.

‘ಜಿಲ್ಲೆಯ ಹಲವು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ಗ್ರಾಮ ಪಂಚಾಯಿತಿ ವತಿಯಿಂದ ಟ್ಯಾಂಕರ್‌ ನೀರು ಪೂರೈಸುತ್ತಿಲ್ಲ. ಗ್ರಾಮದ ಕೊಳವೆ ಬಾವಿಗಳಲ್ಲಿ ನೀರು ಬತ್ತಿದ್ದು, ನಲ್ಲಿಗಳಲ್ಲಿ ನೀರು ಬರುತ್ತಿಲ್ಲ. ಸ್ಥಳೀಯರು ಈ ಬಗ್ಗೆ ದೂರು ನೀಡಲು ಗ್ರಾ.ಪಂ ಅಧಿಕಾರಿಗಳಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುವುದಿಲ್ಲ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ಆಯಾ ಕ್ಷೇತ್ರದ ಶಾಸಕರು ಹಾಗೂ ಅಧಿಕಾರಿಗಳು ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆಯಿಲ್ಲ ಎಂದು ಹೇಳುತ್ತಾರೆ. ಸಮಸ್ಯಾತ್ಮಕ ಗ್ರಾಮಗಳಿಗೆ ಟ್ಯಾಂಕರ್‌ ನೀರು ಕೊಡುತ್ತಿರುವುದಾಗಿ ಸಭೆಗಳಲ್ಲಿ ಮಾಹಿತಿ ನೀಡುತ್ತಿದ್ದಾರೆ. ಆದರೆ, ವಾಸ್ತವದಲ್ಲಿ ಟ್ಯಾಂಕರ್ ನೀರು ಪೂರೈಕೆಯಾಗುತ್ತಿಲ್ಲ’ ಎಂದು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ರಾಮುಶಿವಣ್ಣ ದೂರಿದರು.

‘ಅಧಿಕಾರಿಗಳು ಗುತ್ತಿಗೆದಾರರ ಜತೆ ಶಾಮೀಲಾಗಿ ಟ್ಯಾಂಕರ್‌ ನೀರು ಸರಬರಾಜು ಮಾಡಿರುವುದಾಗಿ ಬಿಲ್‌ ಸೃಷ್ಟಿಸಿ ಸರ್ಕಾರದ ಹಣ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಟ್ಯಾಂಕರ್ ನೀರು ಪೂರೈಕೆ ಪ್ರಕ್ರಿಯೆಯು ಹಣ ಮಾಡುವ ದಂಧೆಯಾಗಿದೆ. ಗುತ್ತಿಗೆದಾರರು ನೀರು ಸರಬರಾಜು ಮಾಡದೆ ಜನರಿಗೆ ವಂಚಿಸುತ್ತಿದ್ದಾರೆ. ಮತ್ತೊಂದೆಡೆ ನಕಲಿ ಬಿಲ್‌ ಸೃಷ್ಟಿಸಿ ಸರ್ಕಾರಕ್ಕೆ ಮೋಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

ಪಿಡಿಒಗಳು ವಿಫಲ: ‘ರಾಜ್ಯ ಸರ್ಕಾರ ನೀರಿನ ಸೌಲಭ್ಯಕ್ಕಾಗಿ ಕೋಟ್ಯಂತರ ರೂಪಾಯಿ ಅನುದಾನ ಬಿಡುಗಡೆ ಮಾಡುತ್ತಿದೆ. ಆದರೆ, ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡುವಲ್ಲಿ ಪಿಡಿಒಗಳು ವಿಫಲರಾಗಿದ್ದಾರೆ. ಕೆಲ ಕೊಳವೆ ಬಾವಿಗಳಲ್ಲಿ ನೀರು ಲಭ್ಯವಿದ್ದರೂ ಪಂಪ್‌ ಮೋಟರ್‌ ಅಳವಡಿಸಿದೆ ಸಮಸ್ಯೆ ಸೃಷ್ಟಿಸಿದ್ದಾರೆ’ ಎಂದು ಧರಣಿನಿರತರು ಕಿಡಿಕಾರಿದರು.

‘ಗ್ರಾಮ ಠಾಣಾ ವ್ಯಾಪ್ತಿಗೆ ಬರುವ ಅಥವಾ ಸರ್ವೆ ನಂಬರ್‌ ವ್ಯಾಪ್ತಿಗೆ ಬರುವ ಇ-ಸ್ವತ್ತು ಅರ್ಜಿಗಳನ್ನು ಅಧಿಕಾರಿಗಳು ಶೀಘ್ರವಾಗಿ ವಿಲೇವಾರಿ ಮಾಡದೆ ಲಂಚಕ್ಕಾಗಿ ಜನರನ್ನು ತಿಂಗಳುಗಟ್ಟಲೇ ಅಲೆಸುತ್ತಿದ್ದಾರೆ. ಗ್ರಾ.ಪಂಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಸಾರ್ವಜನಿಕರು ಲಂಚ ಕೊಡದಿದ್ದರೆ ಅಧಿಕಾರಿಗಳು ಕೆಲಸ ಮಾಡುವುದೇ ಇಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಪ್ಪುಪಟ್ಟಿಗೆ ಸೇರಿಸಿ: ‘ನೀರು ಹಾಗೂ ಇ-ಸ್ವತ್ತು ಸಮಸ್ಯೆಗೆ ಆಯಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಹೊಣೆಗಾರರಾಗಿ ಮಾಡಿ ಶಿಸ್ತುಕ್ರಮ ಜರುಗಿಸಬೇಕು. ಟ್ಯಾಂಕರ್‌ ನೀರು ಪೂರೈಕೆಯಲ್ಲಿ ನಡೆಯುತ್ತಿರುವ ಅಕ್ರಮಕ್ಕೆ ಕಡಿವಾಣ ಹಾಕಬೇಕು. ಅಕ್ರಮದಲ್ಲಿ ಭಾಗಿಯಾಗಿರುವ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ ಕಪ್ಪುಪಟ್ಟಿಗೆ ಸೇರಿಸಬೇಕು’ ಎಂದು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ, ಸದಸ್ಯರಾದ ಕೆ.ಎನ್.ಶಂಕರಪ್ಪ, ಡಿ.ಕೆ.ಹರಿ, ಎಚ್.ಚೌಡಪ್ಪ, ನಂದಕುಮಾರ್ ಪಾಲ್ಗೊಂಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.