ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಚ್ಛಾಶಕ್ತಿ– ಶ್ರದ್ಧೆಯಿಂದ ಯಶಸ್ಸು ಸಾಧ್ಯ

Last Updated 4 ಸೆಪ್ಟೆಂಬರ್ 2020, 15:59 IST
ಅಕ್ಷರ ಗಾತ್ರ

ಕೋಲಾರ: ‘ದಿಢೀರ್ ಶ್ರೀಮಂತಿಕೆಯ ಆಸೆ ಬೇಡ. ಇಚ್ಛಾಶಕ್ತಿ, ಶ್ರದ್ಧೆಯಿಂದ ಕುರಿ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡರೆ ಖಂಡಿತ ಯಶಸ್ಸು ಗಳಿಸಬಹುದು’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಹೇಳಿದರು.

ತಾಲ್ಲೂಕಿನ ಹೊನ್ನೇನಹಳ್ಳಿಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಕುರಿ ಸಾಕಾಣಿಕೆ ತರಬೇತಿ ಪೂರೈಸಿದ ಶಿಕ್ಷಣಾರ್ಥಿಗಳಿಗೆ ಶುಕ್ರವಾರ ಪ್ರಮಾಣಪತ್ರ ವಿತರಿಸಿ ಮಾತನಾಡಿ, ‘ಕುರಿ ಸಾಕಾಣಿಕೆ ಆರಂಭಿಸಲು ಡಿಸಿಸಿ ಬ್ಯಾಂಕ್ ಶೇ 3ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಿದೆ’ ಎಂದರು.

‘ಸಾಲದ ಹಣ ಸದ್ಬಳಕೆ ಮಾಡಿಕೊಂಡು ದುಡಿಮೆ ಆರಂಭಿಸಿದರೆ ಮಾತ್ರ ಸಾಧನೆ ಸಾಧ್ಯ. ಬಡ ಕುಟುಂಬದಿಂದ ಬಂದವರಿಂದಲೇ ಸಾಧನೆ ಸಾಧ್ಯ. ಸಾಲ ಮರುಪಾವತಿ ಮೂಲಕ ಬ್ಯಾಂಕ್‌ನ ನಂಬಿಕೆ ಉಳಿಸಿಕೊಂಡರೆ ಮತ್ತಷ್ಟು ಸಾಲ ಸಿಗುತ್ತದೆ. ಇದರಿಂದ ಆರ್ಥಿಕಾಭಿವೃದ್ಧಿಗೆ ದಾರಿಯಾಗುತ್ತದೆ’ ಎಂದು ಕಿವಿಮಾತು ಹೇಳಿದರು.

‘ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ನಂಬಿಕೆಯೇ ಜೀವಾಳ. ಪಡೆದ ಸಾಲ ಸರಿಯಾಗಿ ಮರುಪಾವತಿ ಮಾಡದಿದ್ದರೆ ಬ್ಯಾಂಕ್‌ಗಳು ಸಂಕಷ್ಟಕ್ಕೆ ಸಿಲುಕುತ್ತವೆ. ಇದರಿಂದ ಬಡ್ಡಿ ದಂಧೆಕೋರರು ಮತ್ತೆ ಬೀದಿಗೆ ಬಂದು ಜನರ ಬದುಕು ನರಕ ಮಾಡುತ್ತಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಶೋಕಿಗಾಗಿ ದುಡಿಮೆ ಆರಂಭಿಸಿದರೆ ಯಶಸ್ಸು ಗಳಿಸಲು ಸಾಧ್ಯವಿಲ್ಲ. ಜೀವನಕ್ಕಾಗಿ ದುಡಿಮೆ ಆರಂಭಿಸಿದರೆ ಶ್ರಮ, ಬದ್ಧತೆಯು ಯಶಸ್ಸಿನೆಡೆಗೆ ಕೊಂಡೊಯ್ಯುತ್ತದೆ. ಕುರಿ ಸಾಕಾಣಿಕೆ ಆರಂಭಕ್ಕೂ ಮುನ್ನ ಮೇವಿಗೆ ಅಗತ್ಯ ಮೂಲ ಕಂಡುಕೊಳ್ಳಿ. ಮೇವಿಗಾಗಿ ಜಮೀನು ಮೀಸಲಿರಿಸಿ. ದುಡಿಮೆಯು ಬದುಕಲು ದಾರಿ ತೋರುತ್ತದೆ’ ಎಂದು ಸಲಹೆ ನೀಡಿದರು.

‘ನಾನು 1995ರಲ್ಲಿ ಇದೇ ಸಂಸ್ಥೆಯಲ್ಲಿ ತರಬೇತಿಗೆ ಬಂದಿದ್ದೆ. ಆಗ ನಾನು ಬ್ಯಾಂಕ್‌ನಿಂದ ₹ 6 ಸಾವಿರ ಸಾಲ ಪಡೆಯಲು ಕಷ್ಟವಾಗಿತ್ತು. ಆದರೆ, ಇಂದು ಬ್ಯಾಂಕ್‌ನಿಂದ ₹ 3 ಕೋಟಿ ಸಾಲ ಪಡೆಯುವಷ್ಟು ನಂಬಿಕೆ ವೃದ್ಧಿಸಿಕೊಂಡಿದ್ದೇನೆ’ ಎಂದು ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ರಮೇಶ್ ತಿಳಿಸಿದರು.

ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ಎನ್‌.ಜಗದೀಶ್‌ಕುಮಾರ್‌, ಕುರಿ ಅಭಿವೃದ್ಧಿ ಮಂಡಳಿ ಅಧಿಕಾರಿ ವಿಶ್ವನಾಥ್, ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ ನಿರ್ದೇಶಕ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT