ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಮಿಕರ ದಾಂದಲೆಗೆ ಆಡಳಿತ ಮಂಡಳಿ ದಿಗ್ರ್ಭಮೆ

ಏಜೆನ್ಸಿ– ಕಾರ್ಮಿಕರ ತಿಕ್ಕಾಟ: ‘ವಿಸ್ಟ್ರಾನ್‌’ ಜಿಲ್ಲೆಯಿಂದ ಹೊರ ಹೋಗುವ ಆತಂಕ
Last Updated 12 ಡಿಸೆಂಬರ್ 2020, 14:49 IST
ಅಕ್ಷರ ಗಾತ್ರ

ಕೋಲಾರ: ತಾಲ್ಲೂಕಿನ ವಿಸ್ಟ್ರಾನ್‌ ಇನ್ಫೋಕಾಮ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯಲ್ಲಿ ಶನಿವಾರ ನಡೆದ ಕಾರ್ಮಿಕರ ದಾಂದಲೆ ಘಟನೆಯಿಂದ ಆಡಳಿತ ಮಂಡಳಿ ದಿಗ್ರ್ಭಮೆಗೊಂಡಿದ್ದು, ಕಂಪನಿಯು ಜಿಲ್ಲೆಯಿಂದ ಹೊರ ಹೋಗುವ ಮಾತು ಕೇಳಿ ಬರುತ್ತಿದೆ.

ವಿಸ್ಟ್ರಾನ್‌ ಕಂಪನಿಗೆ ಕಾರ್ಮಿಕರನ್ನು ಪೂರೈಸಿದ್ದ ಖಾಸಗಿ ಏಜೆನ್ಸಿಗಳು ಮತ್ತು ಕಾರ್ಮಿಕರ ನಡುವಿನ ತಿಕ್ಕಾಟದಿಂದ ಜಾಗತಿಕವಾಗಿ ಕಂಪನಿ ಘನತೆಗೆ ದಕ್ಕೆಯಾಗಿದ್ದು, ಆಡಳಿತ ಮಂಡಳಿಯು ಘಟನೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ ಎಂದು ಗೊತ್ತಾಗಿದೆ.

43 ಎಕರೆ ವಿಸ್ತಾರವಾಗಿರುವ ಕಂಪನಿಯು ಜಿಲ್ಲೆ ಸೇರಿದಂತೆ ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಸಾವಿರಾರು ಮಂದಿಗೆ ಉದ್ಯೋಗಾವಕಾಶ ಕಲ್ಪಿಸಿತ್ತು. ನೀಡ್ಸ್‌, ಇನ್ನೋವಾ, ಅಡ್ಯಾಕ್‌, ಐ–ಕ್ಯೂ, ಕ್ರಿಯೇಟೀವ್ಸ್‌, ರ್‌್ಯಾನ್‌ಸ್ಟ್ಯಾಡ್‌ ಸೇರಿದಂತೆ 7 ಖಾಸಗಿ ಏಜೆನ್ಸಿಗಳಿಂದ ಕಾರ್ಮಿಕರನ್ನು ಗುತ್ತಿಗೆ ಆಧಾರದಲ್ಲಿ ಕೆಲಸಕ್ಕೆ ನೇಮಿಸಿಕೊಂಡಿತ್ತು. 2ನೇ ಹಂತದಲ್ಲಿ ಕಂಪನಿಯ ವಿಸ್ತರಣೆಗೆ ಪ್ರಯತ್ನಗಳು ನಡೆದಿದ್ದವು.

ಈ ನಡುವೆ ಕಂಪನಿಯ ಮಾನವ ಸಂಪನ್ಮೂಲ ವಿಭಾಗದಲ್ಲಿನ ಕೆಲ ಸಿಬ್ಬಂದಿ ಖಾಸಗಿ ಏಜೆನ್ಸಿಗಳ ಜತೆ ಶಾಮೀಲಾಗಿ ಕಾರ್ಮಿಕರಿಗೆ ಕಡಿಮೆ ಸಂಬಳ ನಿಗದಿಪಡಿಸಿ ಶೋಷಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೇ, ಮಾನವ ಸಂಪನ್ಮೂಲ ವಿಭಾಗದಲ್ಲಿನ ಕೆಲ ಪ್ರಮುಖರು ಬೇನಾಮಿ ಹೆಸರಿನಲ್ಲಿ ಏಜೆನ್ಸಿ ತೆರೆದು ಕಂಪನಿಗೆ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಂಡಿದ್ದರು ಎಂದು ಗೊತ್ತಾಗಿದೆ.

ಕಡಿಮೆ ಸಂಬಳ: ‘ಕನಿಷ್ಠ ವೇತನ ಕಾನೂನು ಧಿಕ್ಕರಿಸಿ ಖಾಸಗಿ ಏಜೆನ್ಸಿಯವರು ಕಡಿಮೆ ಸಂಬಳ ನಿಗದಿಪಡಿಸಿದ್ದರು. ಕ್ಯಾಂಟೀನ್‌, ಬಸ್‌ ಸೌಲಭ್ಯಕ್ಕಾಗಿ ವೇತನದಲ್ಲಿ ಹೆಚ್ಚಿನ ಹಣ ಕಡಿತಗೊಳಿಸುತ್ತಿದ್ದರು. ಅಲ್ಲದೇ, ಹೆಚ್ಚುವರಿ ಅವಧಿವರೆಗೆ ಕೆಲಸ ಮಾಡಿಸುತ್ತಿದ್ದರು. ವಾರಾಂತ್ಯದ ರಜೆ ಸಹ ಕೊಡುತ್ತಿರಲಿಲ್ಲ’ ಎಂದು ಕಾರ್ಮಿಕರು ದೂರಿದರು.

‘ನಾಲ್ಕೈದು ತಿಂಗಳ ವೇತನ ಬಾಕಿ ಉಳಿಸಿಕೊಳ್ಳಲಾಗಿತ್ತು. ಈ ಬಗ್ಗೆ ಪ್ರಶ್ನೆ ಮಾಡಿದರೆ ಮಾನವ ಸಂಪನ್ಮೂಲ ವಿಭಾಗದ ಸಿಬ್ಬಂದಿಯು ಏಜೆನ್ಸಿಗಳತ್ತ ಬೆಟ್ಟು ತೋರಿಸುತ್ತಿದ್ದರು. ಏಜೆನ್ಸಿಯವರು ಕಂಪನಿಯು ವೇತನಕ್ಕೆ ಹಣ ಬಿಡುಗಡೆ ಮಾಡಿಲ್ಲ ಎಂದು ಸಬೂಬು ಹೇಳುತ್ತಿದ್ದರು’ ಎಂದು ಕಾರ್ಮಿಕರು ಆರೋಪಿಸಿದರು.

ವಜಾ ಬೆದರಿಕೆ

ವೇತನದ ವಿಚಾರವಾಗಿ ಶುಕ್ರವಾರ (ನ.11) ಕೆಲ ಕಾರ್ಮಿಕರು ಮಾನವ ಸಂಪನ್ಮೂಲ ವಿಭಾಗದ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದರು. ಈ ಸಂಬಂಧ ಮಾನವ ಸಂಪನ್ಮೂಲ ವಿಭಾಗದ ಸಿಬ್ಬಂದಿಯು ವೇಮಗಲ್‌ ಠಾಣೆಗೆ ಮಾಹಿತಿ ನೀಡಿ ಪೊಲೀಸ್‌ ಭದ್ರತೆ ಕೋರಿದ್ದರು.

ರಾತ್ರಿ ಪಾಳಿಯ ಕೆಲಸಕ್ಕೆ ಹಾಜರಾದ ಕಾರ್ಮಿಕರು ವೇತನ ನೀಡುವಂತೆ ಆಗ್ರಹಿಸಿ ಕಂಪನಿ ಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಆಗ ಕಂಪನಿ ಪ್ರತಿನಿಧಿಗಳು 100ಕ್ಕೂ ಹೆಚ್ಚು ಕಾರ್ಮಿಕರ ಗುರುತಿನ ಚೀಟಿ ಕಸಿದುಕೊಂಡು ಕೆಲಸದಿಂದ ವಜಾಗೊಳಿಸುವುದಾಗಿ ಬೆದರಿಸಿದ್ದರು. ಅಲ್ಲದೇ, ಮಹಿಳಾ ಕಾರ್ಮಿಕರೊಬ್ಬರನ್ನು ಅವಾಚ್ಯವಾಗಿ ನಿಂದಿಸಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಹೊರಗಿನವರ ಪಾತ್ರ

ಕಂಪನಿ ಮಾನವ ಸಂಪನ್ಮೂಲ ವಿಭಾಗವು ಕಾರ್ಮಿಕರ ವೇತನ ಬೇಡಿಕೆಯನ್ನು ಲಘುವಾಗಿ ಪರಿಗಣಿಸಿ ನಿರ್ಲಕ್ಷ್ಯ ತೋರಿದ್ದೇ ದಾಂದಲೆಗೆ ಪ್ರಮುಖ ಕಾರಣ. ಶನಿವಾರ ಬೆಳಗಿನ ಪಾಳಿ ಆರಂಭಕ್ಕೂ ಕೆಲ ತಾಸು ಮುನ್ನ ಕಾರ್ಮಿಕರು ದಾಂದಲೆ ನಡೆಸಿದ್ದಾರೆ. ಕಂಪನಿಗೆ ಸಂಬಂಧಪಡದ ಹೊರಗಿನ ವ್ಯಕ್ತಿಗಳು ಕಾರ್ಮಿಕರ ಜತೆ ಕಂಪನಿಯ ಬಸ್‌ಗಳಲ್ಲಿ ಬಂದು ಕೃತ್ಯಕ್ಕೆ ಪ್ರಚೋದನೆ ನೀಡಿದ್ದಾರೆ. ಅಲ್ಲದೇ, ಕೃತ್ಯದಲ್ಲೂ ಭಾಗಿಯಾಗಿದ್ದಾರೆ. ಘಟನೆ ಹಿಂದೆ ಕೆಲ ಸಂಘಟನೆಗಳ ಪಾತ್ರವಿದೆ ಎಂದು ಗುಪ್ತಚರ ಇಲಾಖೆ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT