ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಸ್ಟ್ರಾನ್‌’ ಪುನರಾರಂಭ: ಹೆಜ್ಜೆ ಹೆಜ್ಜೆಗೂ ಭದ್ರತೆ

Last Updated 25 ಫೆಬ್ರುವರಿ 2021, 11:44 IST
ಅಕ್ಷರ ಗಾತ್ರ

ಕೋಲಾರ: ತಾಲ್ಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಆ್ಯಪಲ್‌ ಐ–ಫೋನ್‌ ಉತ್ಪಾದಿಸುವ ವಿಸ್ಟ್ರಾನ್‌ ಇನ್ಫೋಕಾಮ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯು ವಾರದ ಹಿಂದೆ ಪುನರಾರಂಭವಾಗಿದ್ದು, ಹೆಚ್ಚಿನ ಭದ್ರತೆಯೊಂದಿಗೆ ಉತ್ಪಾದನಾ ಚಟುವಟಿಕೆ ನಡೆಸಲಾಗುತ್ತಿದೆ.

ವಿಸ್ಟ್ರಾನ್‌ ಕಂಪನಿ ಕಾರ್ಮಿಕರು 2020ರ ಡಿ.12ರಂದು ಕಂಪನಿ ಮೇಲೆ ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಿದ್ದರು. ಕಂಪನಿಯು ಸಂಬಳ ನೀಡದ ಕಾರಣಕ್ಕೆ ಕಾರ್ಮಿಕರು ಆಕ್ರೋಶಗೊಂಡು ಈ ಕೃತ್ಯ ಎಸಗಿದ್ದರು. ಬಳಿಕ ಕಂಪನಿಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು.

ಕಾರ್ಮಿಕರ ದಾಳಿಯಲ್ಲಿ ಹಾನಿಗೊಂಡಿದ್ದ ಕಂಪನಿಯ ಉತ್ಪಾದನಾ ವಿಭಾಗದ ಯಂತ್ರೋಪಕರಣಗಳನ್ನು ಮರು ಜೋಡಣೆ ಮಾಡಲಾಗಿದ್ದು, ಮೊಬೈಲ್‌ ಮತ್ತು ಮೊಬೈಲ್‌ ಬಿಡಿ ಭಾಗಗಳ ಉತ್ಪಾದನೆ ಆರಂಭವಾಗಿದೆ. ಪ್ರತಿನಿತ್ಯ 3 ಪಾಳಿಯಲ್ಲಿ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ.

ಕಂಪನಿಗೆ ಈ ಹಿಂದೆ ಗುತ್ತಿಗೆ ಆಧಾರದಲ್ಲಿ ಕಾರ್ಮಿಕರನ್ನು ನಿಯೋಜಿಸಿದ್ದ ಕ್ರಿಯೇಟಿವ್ ಎಂಜಿನಿಯರ್ಸ್‌, ಕ್ಯೂಸ್‌ ಕಾರ್ಪ್‌, ಇನ್ನೋವಾ ಸೋರ್ಸ್‌, ಅಡೆಕ್ಕೊ ಗ್ರೂಪ್‌, ನೀಡ್ಸ್‌ ಮ್ಯಾನ್‌ ಪವರ್‌ ಸಪೋರ್ಟ್‌ ಸರ್ವಿಸಸ್‌, ರ್‌್ಯಾಂಡ್‌ಸ್ಯಾಂಡ್‌ ಏಜೆನ್ಸಿಗಳಿಂದಲೇ ಸಿಬ್ಬಂದಿಯನ್ನು ಕೆಲಸಕ್ಕೆ ನೇಮಿಸಿಕೊಳ್ಳಲಾಗಿದೆ. ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 6 ಸಾವಿರ ಮಂದಿಯನ್ನು ಕೆಲಸಕ್ಕೆ ತೆಗೆದುಕೊಳ್ಳಲಾಗಿದೆ. ಸ್ಥಳೀಯ ಪೊಲೀಸರು ಕಾರ್ಮಿಕರ ಪೂರ್ವಾಪರ ಪರಿಶೀಲಿಸಿ ನಡತೆ ಪ್ರಮಾಣಪತ್ರ ನೀಡಿದ ನಂತರ ನೇಮಕಾತಿ ಮಾಡಿಕೊಳ್ಳಲಾಗಿದೆ.

ಹೆಚ್ಚಿನ ಭದ್ರತೆ: 43 ಎಕರೆ ವಿಸ್ತಾರವಾಗಿರುವ ಕಂಪನಿಯಲ್ಲಿ ಹೆಜ್ಜೆ ಹೆಜ್ಜೆಗೂ ಖಾಸಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕಾರ್ಮಿಕರನ್ನು ಕರೆದೊಯ್ಯುವ ಕಂಪನಿಯ ಪ್ರತಿ ವಾಹನಕ್ಕೂ ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿದೆ. ಅಲ್ಲದೇ, ಕಂಪನಿ ಆವರಣದಲ್ಲಿ ಭದ್ರತಾ ಸಿಬ್ಬಂದಿಯ ಸಂಖ್ಯೆ ಹೆಚ್ಚಿಸಲಾಗಿದೆ.

ಕಾರ್ಮಿಕರ ವೇತನದಲ್ಲಿ ಸ್ವಲ್ಪ ಹೆಚ್ಚಳ ಮಾಡಿರುವ ಕಂಪನಿಯು ಕೆಲಸದ ಅವಧಿಯನ್ನು 12 ತಾಸಿನಿಂದ 8 ತಾಸಿಗೆ ಇಳಿಸಿದೆ. ಈ ಹಿಂದೆ ಕಂಪನಿಯಲ್ಲಿ ಗುತ್ತಿಗೆ ಮತ್ತು ಕಾಯಂ ಕಾರ್ಮಿಕರಿಗೆ ಒಂದೇ ಕ್ಯಾಂಟೀನ್‌ ಇತ್ತು. ಇದೀಗ ಗುತ್ತಿಗೆ ಮತ್ತು ಕಾಯಂ ಕಾರ್ಮಿಕರಿಗೆ ಪ್ರತ್ಯೇಕ ಕ್ಯಾಂಟೀನ್‌ ವ್ಯವಸ್ಥೆ ಮಾಡಲಾಗಿದೆ. ಜತೆಗೆ ವಾರದ ರಜೆ ಸೌಲಭ್ಯ ಕಲ್ಪಿಸಲಾಗಿದೆ.

‘ಕಂಪನಿ ಪುನರಾರಂಭದ ಬಳಿಕ ಕಾರ್ಯ ಸ್ಥಳದಲ್ಲಿ ಸಾಕಷ್ಟು ಸುಧಾರಣೆ ಆಗಿವೆ. ಸಂಬಳ ಹೆಚ್ಚಿಸಲಾಗಿದೆ. ಕೆಲಸದ ಅವಧಿ ಕಡಿಮೆ ಮಾಡಿರುವುದರಿಂದ ಕಾರ್ಯ ಒತ್ತಡವಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿರುವ ಭದ್ರತಾ ಸಿಬ್ಬಂದಿಯು ಹೆಜ್ಜೆ ಹೆಜ್ಜೆಗೂ ಹಿಂಬಾಲಿಸಿ ಬರುತ್ತಾರೆ’ ಎಂದು ಕಾರ್ಮಿಕರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT