ಗುರುವಾರ , ಜೂನ್ 24, 2021
29 °C
ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ ಐ–ಫೋನ್‌ ಉತ್ಪಾದನಾ ಕಂಪನಿ

ನಿರುದ್ಯೋಗಿಗಳ ಪಾಲಿನ ಆಶಾಕಿರಣ ‘ವಿಸ್ಟ್ರಾನ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೋಲಾರ: ತಾಲ್ಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಕಾರ್ಯಾರಂಭ ಮಾಡಿರುವ ತೈವಾನ್‌ ಮೂಲದ ವಿಸ್ಟ್ರಾನ್‌ ಇನ್ಫೋಕಾಮ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯು ಜಿಲ್ಲೆಯ ನಿರುದ್ಯೋಗಿಗಳ ಪಾಲಿಗೆ ಆಶಾಕಿರಣವಾಗಿದೆ.

ದೇಶದಲ್ಲಿ ಕೋವಿಡ್‌ ಕಾರಣಕ್ಕೆ ಸಂಕಷ್ಟಕ್ಕೆ ಸಿಲುಕಿರುವ ಸಾಕಷ್ಟು ಕಂಪನಿಗಳು ನಷ್ಟ ತಪ್ಪಿಸಲು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿ ಮನೆಗೆ ಕಳುಹಿಸುತ್ತಿವೆ. ಕೆಲ ಕಂಪನಿಗಳು ವೆಚ್ಚ ಕಡಿತದ ನೆಪದಲ್ಲಿ ಸಿಬ್ಬಂದಿ ನೇಮಕಾತಿ ಸ್ಥಗಿತಗೊಳಿಸಿವೆ. ಕಾರ್ಮಿಕರನ್ನು ಕಡ್ಡಾಯ ರಜೆ ಮೇಲೆ ಕಳುಹಿಸುತ್ತಿವೆ.

ಆದರೆ, ವಿಸ್ಟ್ರಾನ್‌ ಕಂಪನಿಯು ಕೋವಿಡ್‌ ಸಂಕಷ್ಟದ ನಡುವೆಯೂ ನಿರುದ್ಯೋಗಿಗಳ ಬದುಕು ರೂಪಿಸಲು ಮುಂದಾಗಿದೆ. ಜಿಲ್ಲೆ ಸೇರಿದಂತೆ ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಸಾವಿರಾರು ನಿರುದ್ಯೋಗಿಗಳಿಗೆ ಕಂಪನಿಯು ಉದ್ಯೋಗಾವಕಾಶ ಕಲ್ಪಿಸುತ್ತಿದೆ.

ವಿಸ್ಟ್ರಾನ್‌ ಕಂಪನಿಯು ಬೆಂಗಳೂರಿನ ಪೀಣ್ಯದಲ್ಲಿ ಐ–ಪೋನ್ ಜೋಡಣೆ ಘಟಕ ಹೊಂದಿದೆ. ಇದೀಗ ಸಂಸ್ಥೆಯು ಪ್ರತಿಷ್ಠಿತ ಆಪಲ್ ಕಂಪನಿಯ ಐ–ಫೋನ್‌ ಮತ್ತು ಮೊಬೈಲ್‌ ಬಿಡಿ ಭಾಗಗಳನ್ನು ಉತ್ಪಾದನೆ ಆರಂಭಿಸಿದೆ. ಕಂಪನಿಯು ಈ ಘಟಕದಲ್ಲಿ ದಿನಕ್ಕೆ 15 ಸಾವಿರ ಐ–ಫೋನ್ ಉತ್ಪಾದಿಸಲು ಉದ್ದೇಶಿಸಿದೆ.

₹ 3 ಸಾವಿರ ಕೋಟಿ: ಎಲೆಕ್ಟ್ರಾನಿಕ್‌ ಉಪಕರಣಗಳ ಉತ್ಪಾದನೆಯ ದೈತ್ಯ ಕಂಪನಿ ವಿಸ್ಟ್ರಾನ್‌ ದೇಶದಲ್ಲಿ ಬಂಡವಾಳ ಹೂಡಿಕೆ ಮಾಡಿದ ತೈವಾನ್‌ ಮೂಲದ ಮೊದಲ ಕಂಪನಿಯಾಗಿದೆ. ಕಂಪನಿಯು ಸದ್ಯ ಸುಮಾರು ₹ 3 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿದೆ.

ನರಸಾಪುರ ಕೈಗಾರಿಕಾ ಪ್ರದೇಶದಲ್ಲಿನ 43 ಎಕರೆ ಪ್ರದೇಶದಲ್ಲಿ ಕಾರ್ಯಾರಂಭ ಮಾಡಿರುವ ಕಂಪನಿಯಿಂದ 15 ಸಾವಿರ ಮಂದಿಗೆ ಉದ್ಯೋಗಾವಕಾಶ ಸಿಗುವ ನಿರೀಕ್ಷೆಯಿದೆ. ಈಗಾಗಲೇ 3 ಸಾವಿರ ಮಂದಿಯ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದೆ. ಮುಖ್ಯವಾಗಿ ಐಟಿಐ, ಡಿಪ್ಲೊಮಾ ಮತ್ತು ಬಿ.ಇ ಪದವೀಧರರಿಗೆ ಉದ್ಯೋಗ ನೀಡಲಾಗಿದೆ.

ಕಂಪನಿಯಲ್ಲಿ ನೇಮಕಾತಿ ಪ್ರಕ್ರಿಯೆ ಮುಂದುವರಿದಿದ್ದು, ಪ್ರತಿನಿತ್ಯ ಸಾವಿರಾರು ಯುವಕ ಯುವತಿಯರು ಸಂದರ್ಶನಕ್ಕೆ ಹಾಜರಾಗುತ್ತಿದ್ದಾರೆ. ವಿದ್ಯಾರ್ಹತೆ ಮತ್ತು ವಯಸ್ಸಿನ ಆಧಾರದಲ್ಲಿ ಉದ್ಯೋಗ ನೀಡಲಾಗುತ್ತಿದೆ.

ಬೇಡಿಕೆ ಹೆಚ್ಚುವ ನಿರೀಕ್ಷೆ: ಕೋವಿಡ್‌ ಆತಂಕದ ಬಳಿಕ ತೈವಾನ್‌ ಮೂಲದ ಕಂಪನಿಗಳು ಚೀನಾದಲ್ಲಿ ಬಂಡವಾಳ ಹೂಡಿಕೆ ಮಾಡಲು ಹಿಂದೇಟು ಹಾಕುತ್ತಿವೆ. ಜತೆಗೆ ಚೀನಾದಲ್ಲಿನ ಕಂಪನಿಗಳ ಮೊಬೈಲ್‌ ಮತ್ತು ಬಿಡಿ ಭಾಗಗಳಿಗೆ ಬೇಡಿಕೆ ಕುಸಿದಿದ್ದು, ನರಸಾಪುರದಲ್ಲಿನ ವಿಸ್ಟ್ರಾನ್‌್ ಕಂಪನಿಯ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುವ ನಿರೀಕ್ಷೆಯಿದೆ.

ಈಗಾಗಲೇ ಪ್ರಾಯೋಗಿಕವಾಗಿ ಮೊಬೈಲ್‌ ಉತ್ಪಾದನೆ ಆರಂಭವಾಗಿದ್ದು, ಸಿಬ್ಬಂದಿ 3 ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಕ್ಟೋಬರ್‌ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಕೆಲಸ ನಡೆಯಲಿದೆ. ಕಂಪನಿಯು ಭವಿಷ್ಯದಲ್ಲಿ ಐ–ಫೋನ್‌ ಜತೆಗೆ ವೈದ್ಯಕೀಯ ಉಪಕರಣ, ಗೃಹೋಪಯೋಗಿ ಎಲೆಕ್ಟ್ರಾನಿಕ್ ಉಪಕರಣ ಉತ್ಪಾದಿಸುವ ಯೋಜನೆ ಹೊಂದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.