ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರು ಸ್ವಾವಲಂಬಿ ಜೀವನ ನಡೆಸಿ: ಕೋಚಿಮುಲ್‌ ನಿರ್ದೇಶಕ ಡಿ.ವಿ.ಹರೀಶ್‌ ಸಲಹೆ

Last Updated 24 ಜನವರಿ 2020, 11:04 IST
ಅಕ್ಷರ ಗಾತ್ರ

ಕೋಲಾರ: ‘ಮಹಿಳೆಯರು ಹೈನುಗಾರಿಕೆ ಜತೆಗೆ ಆದಾಯೋತ್ಪನ್ನ ಚಟುವಟಿಕೆ ಮೂಲಕ ಸಮಾಜದ ಮುಖ್ಯವಾಹಿನಿಗೆ ಬಂದು ಸ್ವಾವಲಂಬಿ ಜೀವನ ನಡೆಸಬೇಕು’ ಎಂದು ಕೋಚಿಮುಲ್‌ ನಿರ್ದೇಶಕ ಡಿ.ವಿ.ಹರೀಶ್‌ ಸಲಹೆ ನೀಡಿದರು.

ತಾಲ್ಲೂಕು ಚುಂಚದೇನಹಳ್ಳಿಯಲ್ಲಿ ಶುಕ್ರವಾರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ‘ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ವಿಶೇಷವಾಗಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಎನ್‌ಆರ್‌ಎಲ್‍ಎಂ) ಮತ್ತು ಸ್ಟೆಪ್ ಯೋಜನೆಯಿಂದ ಸೌಲಭ್ಯ ಕಲ್ಪಿಸುತ್ತೇವೆ’ ಎಂದರು.

‘ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ನಿರ್ಮಾಣಕ್ಕೆ ಕೋಚಿಮುಲ್‌ ಹಾಗೂ ಕೆಎಂಎಫ್‌ನಿಂದ ತಲಾ ₹ 3 ಲಕ್ಷ ನೀಡಲಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ₹ 1 ಲಕ್ಷ ನೆರವು ಕೇಳಲಾಗಿದೆ. ಸಂಘಗಳಲ್ಲಿ ಹಾಲು ಶೇಖರಣೆ, ಹಾಲಿನ ಗುಣಮಟ್ಟ ಮತ್ತು ಶುದ್ಧ ಹಾಲು ಉತ್ಪಾದನೆಗೆ ಒತ್ತು ಕೊಡಬೇಕು’ ಎಂದು ಹೇಳಿದರು.

‘ಸಹಕಾರಿ ಸಂಘಗಳ ಹುಟ್ಟು ಮತ್ತು ಬೆಳವಣಿಗೆ ಕಾರಣಕರ್ತರಾದ ವರ್ಗಿಸ್ ಕುರಿಯನ್, ಕರ್ನಾಟಕದ ಕ್ಷೀರ ಬ್ರಹ್ಮ ಎಂ.ವಿ.ಕೃಷ್ಣಪ್ಪ ಮತ್ತು ಮಾಜಿ ಸಚಿವ ದಿವಂಗತ ಸಿ.ಬೈರೇಗೌಡರನ್ನು ರೈತರು ಸ್ಮರಿಸಬೇಕು. ಹೈನುಗಾರಿಕೆಯು ಜಿಲ್ಲೆಯ ರೈತರಿಗೆ ವರದಾನವಾಗಿದೆ’ ಎಂದು ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸೋಮಣ್ಣ ಅಭಿಪ್ರಾಯಪಟ್ಟರು.

ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಸುರೇಶ್‌, ಕೋಚಿಮುಲ್‌ ಶಿಬಿರದ ಉಪ ವ್ಯವಸ್ಥಾಪಕ ಡಾ.ಎ.ಸಿ.ಶ್ರೀನಿವಾಸಗೌಡ, ಚುಂಚದೇನಹಳ್ಳಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಪದ್ಮಮ್ಮ, ಶಿಬಿರದ ವಿಸ್ತಾರಣಾಧಿಕಾರಿಗಳಾದ ಶ್ರೀನಿವಾಸ್, ರಾಮಾಂಜಿನಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT