ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿ: ಆರ್‌ಡಿಪಿಆರ್‌ ಅಧಿಕಾರಿಗಳ ಮೆಚ್ಚುಗೆ

ತಾಲ್ಲೂಕಿನ ವಕ್ಕಲೇರಿ ಗ್ರಾ.ಪಂ ವ್ಯಾಪ್ತಿಯಲ್ಲಿ ಕಾಮಗಾರಿಗಳ ಪರಿಶೀಲನೆ
Last Updated 4 ಮೇ 2019, 15:29 IST
ಅಕ್ಷರ ಗಾತ್ರ

ಕೋಲಾರ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ (ಆರ್‌ಡಿಪಿಆರ್‌) ಅಧಿಕಾರಿಗಳು ತಾಲ್ಲೂಕಿನ ವಕ್ಕಲೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಶನಿವಾರ ಭೇಟಿ ನೀಡಿ ವಿವಿಧ ಯೋಜನೆಗಳಡಿ ನಡೆಸಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಉಮೇಶ್ ಮಿರ್ಜಿ ಮತ್ತು ಉಪ ನಿರ್ದೇಶಕ ನಾಗರಾಜ್‌ ನೇತೃತ್ವದ ಅಧಿಕಾರಿಗಳ ತಂಡವು ಆಲಹಳ್ಳಿ, ಬಣಕನಹಳ್ಳಿಯಲ್ಲಿ ರಾಜಕಾಲುವೆ, ಚರಂಡಿ, ರಸ್ತೆ ಕಾಮಗಾರಿ ವೀಕ್ಷಿಸಿ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿತು.

‘ಜಿಲ್ಲೆಯಲ್ಲಿ ತೀವ್ರ ಬರಗಾಲ ಎದುರಾಗಿದ್ದು, ರೈತರು ಕೆಲಸವಿಲ್ಲದೆ ಬೇರೆಡೆಗೆ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ತಪ್ಪಿಸಲು ನರೇಗಾ ಅಡಿ ಮಾನವ ದಿನ ಸೃಷ್ಟಿಸಿ ಕೆಲಸ ನೀಡಲಾಗುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ತಿಳಿಸಿದರು.

‘ಜಿಲ್ಲೆಯ ರೈತರ ಅನುಕೂಲಕ್ಕಾಗಿ ನರೇಗಾದಲ್ಲಿ 40 ಲಕ್ಷ ಮಾನವ ದಿನ ಸೃಜಿಸುವ ಗುರಿ ಹೊಂದಲಾಗಿದೆ. ಯೋಜನೆಯಡಿ ಉತ್ತಮ ಕಾರ್ಯ ನಡೆಯುತ್ತಿದ್ದು, ಪ್ರತಿ ಕುಟುಂಬಕ್ಕೆ ಉದ್ಯೋಗ ಚೀಟಿ ನೀಡಲಾಗಿದೆ. ನರೇಗಾ ಯೋಜನೆಯಡಿ ಕೆಲಸ ಮಾಡಿದವರಿಗೆ ದಿನಕ್ಕೆ ₹ 249 ಕೂಲಿ ನೀಡಲಾಗುತ್ತಿದ್ದು, ರೈತರು ಆಸಕ್ತಿಯಿಂದ ಕೆಲಸ ಮಾಡುತ್ತಿದ್ದಾರೆ’ ಎಂದು ವಿವರಿಸಿದರು.

‘ನರೇಗಾ ಅನುದಾನದಲ್ಲಿ 1 ಸಾವಿರ ಚೆಕ್‌ಡ್ಯಾಂ ಹಾಗೂ ಕೊಳವೆ ಬಾವಿಗಳಿಗೆ ಜಲ ಮರುಪೂರಣ ಘಟಕ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಕೆಲವೆಡೆ ಚೆಕ್‌ಡ್ಯಾಂ ಕಾಮಗಾರಿ ಪೂರ್ಣಗೊಂಡಿದ್ದು, ಇತ್ತೀಚೆಗೆ ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಆ ಚೆಕ್‌ಡ್ಯಾಂಗಳಲ್ಲಿ ನೀರು ಸಂಗ್ರಹವಾಗಿದೆ. ನರೇಗಾ ಅಡಿ ಜಲ ಸಂರಕ್ಷಣೆಗೆ ಹೆಚ್ಚು ನೀಡಲಾಗುತ್ತಿದೆ’ ಎಂದು ಹೇಳಿದರು.

ನಿರೀಕ್ಷೆಗೂ ಮೀರಿ ಕೆಲಸ: ‘ಜಿಲ್ಲೆಯ ಪ್ರತಿ ಗ್ರಾಮದ ಕೆರೆಯಲ್ಲಿ ಹೊಂಡ ನಿರ್ಮಿಸಲು ಉದ್ದೇಶಿಸಲಾಗಿದ್ದು, ಈಗಾಗಲೇ ಕಾಮಗಾರಿ ಆರಂಭಿಸಲಾಗಿದೆ. ಒಬ್ಬ ರೈತ ದಿನಕ್ಕೆ ಎಷ್ಟು ಆಳ ಗುಂಡಿ ತೆಗೆಯಬೇಕೆಂದು ಗುರುತು ಮಾಡಿ ಕೊಡಲಾಗುತ್ತದೆ. ಅವರು ನಿರೀಕ್ಷೆಗೂ ಮೀರಿ ಕೆಲಸ ಮಾಡುತ್ತಿದ್ದಾರೆ. ಇದರಿಂದ ರೈತರ ಆರ್ಥಿಕ ಸಮಸ್ಯೆಯೂ ಬಗೆಹರಿಯಲಿದೆ’ ಎಂದರು.

ಜಿ.ಪಂ ಉಪ ಕಾರ್ಯದರ್ಶಿ ಲಕ್ಷ್ಮೀನಾರಾಯಣ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ನಾರಾಯಣಸ್ವಾಮಿ, ಸಹಾಯಕ ಕಾರ್ಯ ನಿರ್ವಹಣಾಧಿಕಾರಿ ಚಂದ್ರಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT