ಆರ್ಥಿಕ ಸಬಲತೆಗೆ ಕಾರ್ಮಿಕರ ಕೊಡುಗೆ ಅಪಾರ

ಸೋಮವಾರ, ಮಾರ್ಚ್ 25, 2019
33 °C
ಕಾರ್ಮಿಕ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಮಂಜುನಾಥ್‌ ಸ್ಮರಣೆ

ಆರ್ಥಿಕ ಸಬಲತೆಗೆ ಕಾರ್ಮಿಕರ ಕೊಡುಗೆ ಅಪಾರ

Published:
Updated:
Prajavani

ಕೋಲಾರ: ‘ದೇಶದ ಆರ್ಥಿಕ ಸಬಲತೆಗೆ ಅಸಂಘಟಿತ ಕಾರ್ಮಿಕರ ಕೊಡುಗೆ ಅಪಾರ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸ್ಮರಿಸಿದರು.

ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಹಾಗೂ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಹಯೋಗದಲ್ಲಿ ಇಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಮಿಕ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

‘ದೇಶದಲ್ಲೇ ಪ್ರಪ್ರಥಮ ಬಾರಿಗೆ ಕರ್ನಾಟಕದಲ್ಲಿ ಅಸಂಘಟಿತ ಕಾರ್ಮಿಕ ವರ್ಗದ ಶ್ರಮಿಕ ಸಾಧಕರನ್ನು ಗುರುತಿಸಿ ಕಾರ್ಮಿಕ ಸಮ್ಮಾನ್ ಪ್ರಶಸ್ತಿ ನೀಡಲಾಗುತ್ತಿದೆ. ರಾಜ್ಯದಲ್ಲಿ 2007ರಲ್ಲಿ ಅಸಂಘಟಿತ ಕಾರ್ಮಿಕ ಮಂಡಳಿ ಸ್ಥಾಪನೆಯಾಗಿದ್ದು, ಜಿಲ್ಲೆಯಲ್ಲಿ ಈವರೆಗೂ 74,081 ಕಟ್ಟಡ ಕಾರ್ಮಿಕರು ಹೆಸರು ನೋಂದಣಿ ಮಾಡಿಸಿದ್ದಾರೆ’ ಎಂದು ತಿಳಿಸಿದರು.

‘ಕಾರ್ಮಿಕ ಮಂಡಳಿಯಲ್ಲಿ ನೋಂದಣಿಯಾದವರ ಪೈಕಿ 19,498 ಮಂದಿಗೆ ₹ 16.41 ಕೋಟಿ ಮೊತ್ತದ ವಿವಿಧ ಸವಲತ್ತು ನೀಡಲಾಗಿದೆ. ಈಗಾಗಲೇ ಹೆಸರು ನೋಂದಾಯಿಸಿರುವವರು ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಕಟ್ಟಡ ಕಾರ್ಮಿಕರಿಗೆ ಮಂಡಳಿಯ ಸದಸ್ಯರಾಗಿ ಸವಲತ್ತು ಪಡೆಯುವಂತೆ ಪ್ರೇರೇಪಿಸಬೇಕು’ ಎಂದು ಕಿವಿಮಾತು ಹೇಳಿದರು.

‘ಈಗಾಗಲೇ ಗುರುತಿಸಿರುವ 13 ವರ್ಗಗಳ ಅಸಂಘಟಿತ ಕಾರ್ಮಿಕರಲ್ಲಿ ತಲಾ 11 ಮಂದಿ ಸಾಧಕರಿಗೆ ಕಾರ್ಮಿಕ ಸಮ್ಮಾನ್‌ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುತ್ತದೆ. 11 ಮಂದಿಗೆ ತಲಾ ₹ 10 ಸಾವಿರ ನಗದು ಬಹುಮಾನ ನೀಡಲಾಗುತ್ತಿದೆ, ಸರ್ಕಾರ ಅಸಂಘಟಿತ ಕಾರ್ಮಿಕರ ಜತೆಯಿದೆ ಎಂಬ ಭಾವನೆ ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ವಿವರಿಸಿದರು.

ನೆಮ್ಮದಿ ತಂದಿದೆ: ‘ದುಡಿಯುವ ಕೈಗಳನ್ನು ಪುರಸ್ಕರಿಸುವ ಅವಕಾಶ ದೊರೆತಿರುವುದು ನೆಮ್ಮದಿ ತಂದಿದೆ. ಅಸಂಘಟಿತ ಕಾರ್ಮಿಕರಿಗೆ ಮತ್ತಷ್ಟು ಸೌಲಭ್ಯ ಸಿಗಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ಆಶಿಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಕಾರ್ಮಿಕರಿಗೆ ಕಡ್ಡಾಯ ಹಾಗೂ ನೈತಿಕ ಮತದಾನದ ಪ್ರತಿಜ್ಞಾವಿಧಿ ಬೋಧಿಸಿ, ‘ ಜ.1, 2019ರ ಜ.1ಕ್ಕೆ 18 ವರ್ಷ ತುಂಬಿದ ಯುವಕ ಯುವತಿಯರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಬಹುದು’ ಎಂದು ಮಾಹಿತಿ ನೀಡಿದರು.

ಶಾಸಕ ಕೆ.ಶ್ರೀನಿವಾಸಗೌಡ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ, ಜಿಲ್ಲಾ ನಿರ್ಮಿತಿ ಕೇಂದ್ರದ ನಿರ್ದೇಶಕ ಕೆ.ಎನ್.ನಾರಾಯಣಗೌಡ, ರಾಜ್ಯ ಅಸಂಘಟಿತ ಕಾರ್ಮಿಕರ ಪರಿಷತ್ ಅಧ್ಯಕ್ಷ ಕೆ.ವಿ.ಸುರೇಶ್‌ಕುಮಾರ್‌, ಜಿ.ಪಂ ಯೋಜನಾ ನಿರ್ದೇಶಕ ಎಂ.ಸಿ.ಲಕ್ಷ್ಮೀನಾರಾಯಣ, ಜಿಲ್ಲಾ ಕಾರ್ಮಿಕ ಅಧಿಕಾರಿ ನಿರಂಜನ್, ಕಾರ್ಮಿಕ ನಿರೀಕ್ಷಕ ಲೋಕೇಶ್ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !