ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಯರಗೋಳ್‌ ಕಾಮಗಾರಿ ಜನವರಿಗೆ ಪೂರ್ಣ- ಶಾಸಕ ಶ್ರೀನಿವಾಸಗೌಡ

ಕಾಮಗಾರಿ ಪರಿಶೀಲನೆ ಬಳಿಕ ಶಾಸಕ ಶ್ರೀನಿವಾಸಗೌಡ ಹೇಳಿಕೆ
Last Updated 19 ಆಗಸ್ಟ್ 2020, 16:43 IST
ಅಕ್ಷರ ಗಾತ್ರ

ಕೋಲಾರ: ‘2021ರ ಜನವರಿ ವೇಳೆಗೆ ಯರಗೋಳ್ ಯೋಜನೆ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ವಿಶ್ವಾಸ ವ್ಯಕ್ತಪಡಿಸಿದರು.

ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನಲ್ಲಿ ನಡೆಯುತ್ತಿರುವ ಯರಗೋಳ್‌ ಯೋಜನೆ ಡ್ಯಾಂ ಕಾಮಗಾರಿ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಮಾತನಾಡಿ, ‘ಯರಗೋಳ್‌ ಯೋಜನೆಗೆ 2006ರಲ್ಲಿ ಆಡಳಿತಾತ್ಮಕ ಅನುಮೋದನೆ ಸಿಕ್ಕಿತ್ತು. 2008ರಲ್ಲಿ ಈ ಯೋಜನೆಯ ಅಂದಾಜು ವೆಚ್ಚ ₹ 79.93 ಕೋಟಿಯಿತ್ತು. ಬಳಿಕ ಪರಿಷ್ಕೃತ ಅಂದಾಜು ಮೊತ್ತ ₹ 128 ಕೋಟಿಗೆ ಏರಿಕೆಯಾಯಿತು’ ಎಂದು ವಿವರಿಸಿದರು.

‘ಯರಗೋಳ್‌ ಭಾಗದ ಅರಣ್ಯ ಪ್ರದೇಶದಿಂದ ಹರಿದು ಬರುವ ನೀರು ವ್ಯರ್ಥವಾಗಿ ತಮಿಳುನಾಡಿಗೆ ಹರಿದು ಹೋಗುತ್ತಿದೆ. ಇದೀಗ ಈ ಭಾಗದಲ್ಲಿ ಡ್ಯಾಂ ನಿರ್ಮಿಸಿರುವುದರಿಂದ ನೀರು ಸಂಗ್ರಹಣೆಗೆ ಅನುಕೂಲವಾಗಿದೆ. ಯೋಜನೆ ಕಾಮಗಾರಿ ಪೂರ್ಣಗೊಂಡರೆ ಕೋಲಾರ, ಮಾಲೂರು ಹಾಗೂ ಬಂಗಾರಪೇಟೆ ತಾಲ್ಲೂಕಿನ 45 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸಬಹುದು’ ಎಂದು ಹೇಳಿದರು.

‘ಧರ್ಮಸಿಂಗ್‌ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಯರಗೋಳ್‌ ಯೋಜನೆಗೆ ಅನುಮೋದನೆ ನೀಡಿದರು. ಆದರೆ, ಕಾರಣಾಂತರದಿಂದ ಕಾಮಗಾರಿ ವಿಳಂಬವಾಯಿತು. ಇದೀಗ ಕಾಮಗಾರಿ ವೆಚ್ಚ ಹೆಚ್ಚಿದೆ. ಯೋಜನೆ ವ್ಯಾಪ್ತಿಯ ಜಲಸಂಗ್ರಹಗಾರಗಳು ಕೆಲವು ಪೂರ್ಣಗೊಂಡಿವೆ. ಕೆಲ ಕಾಮಗಾರಿಗಳು ಪ್ರಗತಿಯಲ್ಲಿವೆ. ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕಾಮಗಾರಿಗಳು ವಿಳಂಬ ಆಗಿರುವುದರಿಂದ ದಂಡ ವಿಧಿಸಲಾಗಿದೆ’ ಎಂದರು.

‘ಅಣೆಕಟ್ಟು ನಿರ್ಮಾಣ ಕಾಮಗಾರಿ ಶೇ 95ರಷ್ಟು ಪೂರ್ಣಗೊಂಡಿದೆ. ಅಣೆಕಟ್ಟೆಯ ಸಂಪರ್ಕ ರಸ್ತೆಯು 3.50 ಕಿಲೋ ಮೀಟರ್‌ ಉದ್ದವಿದ್ದು, ಕಾಮಗಾರಿ ಶೇ 85ರಷ್ಟು ಮುಗಿದಿದೆ. ಏರು ಕೊಳವೆ ಮಾರ್ಗ 9.15 ಕಿ.ಮೀನಲ್ಲಿ ಶೇ 95ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಜಾಕ್ವೆಲ್‌ ಕಾಮಗಾರಿ ಶೇ 85ರಷ್ಟು ಮುಗಿದಿದೆ’ ಎಂದು ಮಾಹಿತಿ ನೀಡಿದರು.

ಪ್ರವಾಸೋದ್ಯಮ ಅಭಿವೃದ್ಧಿ: ‘ಯರಗೋಳ್‌ ಅಣೆಕಟ್ಟು ಬಳಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲಾಗುತ್ತದೆ. ವಸತಿಗೃಹಗಳ ನಿರ್ಮಾಣ ಕಾಮಗಾರಿಯ ಪರಿಷ್ಕೃತ ಅಂದಾಜು ಪಟ್ಟಿಗೆ ಅನುಮೋದನೆ ದೊರೆತ ನಂತರ ಕ್ರಮ ಕೈಗೊಳ್ಳಲಾಗುವುದು. ಯರಗೋಳ್ ಡ್ಯಾಂ 500 ಎಂಸಿಎಫ್‌ಟಿ ನೀರು ಸಂಗ್ರಹಣೆ ಸಾಮರ್ಥ್ಯ ಹೊಂದಿದ್ದು, 375 ಎಕರೆಯಷ್ಟು ಭೂಮಿ ಮುಳುಗಡೆಯಾಗುತ್ತದೆ’ ಎಂದರು.

‘ಜನಪ್ರತಿನಿಧಿಗಳಿಗೆ ಜನಪರವಾಗಿ ಕೆಲಸ ಮಾಡುವ ಇಚ್ಛಾಶಕ್ತಿ ಇರಬೇಕು. ಕೋಲಾರ ಕ್ಷೇತ್ರದಲ್ಲಿ ಕಳೆದ 10 ವರ್ಷದಲ್ಲಿ 2 ಬಾರಿ ಶಾಸಕರಾಗಿ ಆಯ್ಕೆಯಾದ ಮಹಾನುಭಾವ ಜನಪರವಾಗಿ ಕೆಲಸ ಮಾಡಲಿಲ್ಲ. ಯರಗೋಳ್‌ ಯೋಜನೆ ಪೈಪ್‌ಲೈನ್‌ ಕಾಮಗಾರಿಯಲ್ಲಿ ಹಣ ದೋಚಿದ್ದೆ ಅವರ ದೊಡ್ಡ ಸಾಧನೆ’ ಎಂದು ಮಾಜಿ ಶಾಸಕ ವರ್ತೂರು ಪ್ರಕಾಶ್ ವಿರುದ್ಧ ವಾಗ್ದಾಳಿ ನಡೆಸಿದರು.

ಕೋಲಾರ ನಗರಸಭೆ ಸದಸ್ಯರಾದ ರಾಕೇಶ್, ಗುಣಶೇಖರ್‌, ಆಯುಕ್ತ ಶ್ರೀಕಾಂತ್, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯನಿರ್ವಾಹಕ ಎಂಜಿನಿಯರ್‌ ಶ್ರೀನಿವಾಸ್‌ರೆಡ್ಡಿ, ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಶಿವರಾಮ್ ನಾಯಕ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT