ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉರುಳಿದ ವರ್ಷದಲ್ಲಿ ಅರಳಿದ್ದು– ನರಳಿದ್ದರ ಲೆಕ್ಕಾಚಾರ

ಬಂದು ಹೋಗುವ ನೆಂಟ ಈ ಬಾರಿಯೂ ಹೊರಟ: ಹದಿನೆಂಟರ ಅಂಗಳದ ಹಿನ್ನೋಟ
Last Updated 30 ಡಿಸೆಂಬರ್ 2018, 19:31 IST
ಅಕ್ಷರ ಗಾತ್ರ

ಕೋಲಾರ: ಹಳಬನನ್ನು ಕಳಿಸಿ ಹೊಸಬನನ್ನು ಬರ ಮಾಡಿಕೊಳ್ಳುವ ತವಕ... ಉರುಳಿದ ವರ್ಷದಲ್ಲಿ ಅರಳಿದ್ದು,- ನರಳಿದ್ದರ ಲೆಕ್ಕಾಚಾರದಲ್ಲೂ ಒಂದು ಪುಳಕ... ಜೀವನದಲ್ಲಿ ಒಂದು ವರ್ಷ ಹೆಚ್ಚಾಯಿತು ಎಂಬುದನ್ನು ಬಿಟ್ಟರೆ ಉಳಿದದ್ದೆಲ್ಲಾ ಅದೇ ಮಾಮೂಲು -ಕಲಸುಮೇಲೋಗರ...

ಕ್ಯಾಲೆಂಡರ್ ಬದಲಿಸಿದಷ್ಟು ಸುಲಭಕ್ಕೆ ಬದುಕು ಬದಲಾಗುವುದಿಲ್ಲ, ಅಂದುಕೊಂಡಷ್ಟು ಸುಲಭಕ್ಕೆ ಯಾವುದೂ ದಕ್ಕುವುದಿಲ್ಲ. ಕಳೆದ ನಿನ್ನೆಗಳ ನೆನಪಲ್ಲಿ, ನಾಳೆಯ ಕನಸಿನ ವ್ಯಾಪಾರಕ್ಕೆ ನಿಂತ ಮಂದಿ. ಹೊಸ ಹೆಜ್ಜೆ, ಹೊಸ ಬೆಳಕು, ಹೊಸ ಭರವಸೆಗಳ ಜತೆಗೆ ಹೊಸ ಬದುಕು ಕಟ್ಟುವೆಡೆಗೆ ಹೊಸ ನೋಟ...

ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. 2019ರ ಬಿಸಿ ಅಪ್ಪುಗೆಗೆ ಜಿಲ್ಲೆಯ ಜನ ಸಜ್ಜಾಗುತ್ತಿದ್ದಾರೆ. ಒಂದಿಷ್ಟು ಹೊಸ ನಿರೀಕ್ಷೆಗಳೊಂದಿಗೆ ಹೊಸ ವರ್ಷ ಎದುರು ನೋಡುತ್ತಿದ್ದಾರೆ. ಹೊಸ ವರ್ಷಾಗಮನದ ಹೊಸ್ತಿಲಲ್ಲಿ ನಿಂತು ಹಿಂತಿರುಗಿ ನೋಡಿದರೆ 2018ರಲ್ಲಿ ಜಿಲ್ಲೆಗೆ ಸಿಹಿ ಕಹಿಯ ಅನುಭವ.

2018ರಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಮಹತ್ವದ ಘಟನೆಗಳು ನಡೆದು ಹೋಗಿವೆ. ಕಾಲಗರ್ಭದಲ್ಲಿ ಲೆಕ್ಕವಿಲ್ಲದಷ್ಟು ಬದಲಾವಣೆಯ ನೀರು ಹರಿದಿದೆ. ರಾಜಕೀಯವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬದಲಾವಣೆಯ ಗಾಳಿ ಬೀಸಿದೆ. ಜಿಲ್ಲೆಯಲ್ಲಿ ಘಟಿಸಿದ ಹಲವು ಘಟನೆಗಳು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಿದವು. ರಾಜ್ಯ ಹಾಗೂ ದೇಶದ ವಿವಿಧೆಡೆ ನಡೆದ ಘಟನೆಗಳು ಜಿಲ್ಲೆಯೊಂದಿಗೆ ತಳುಕು ಹಾಕಿಕೊಂಡು ಚರ್ಚೆಗೆ ಗ್ರಾಸವಾದವು. ಅಂತಹ ಕೆಲ ಘಟನೆಗಳನ್ನು ಮೆಲುಕು ಹಾಕುವ ಪ್ರಯತ್ನ ಮಾಡಲಾಗಿದೆ.

ಚುನಾವಣಾ ಕಾವು: ವಿಧಾನಸಭಾ ಚುನಾವಣಾ ಕಾವಿನೊಂದಿಗೆ ಆರಂಭವಾದ ಈ ವರ್ಷದ ಅಂತ್ಯದಲ್ಲಿ ಲೋಕಸಭಾ ಚುನಾವಣಾ ಬಿಸಿ ಏರಿದೆ. ರಾಜ್ಯ ವಿಧಾನಸಭೆಗೆ ಏ.14ರಂದು ಚುನಾವಣೆ ಘೋಷಣೆಯಾಯಿತು. ಅದಕ್ಕೂ ಮುನ್ನವೇ ರಾಜಕೀಯ ಪಕ್ಷಗಳಲ್ಲಿ ಅಭ್ಯರ್ಥಿಗಳ ಹುಡುಕಾಟ ಆರಂಭವಾಗಿತ್ತು. ಮಾರ್ಚ್‌, ಎಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಜಿಲ್ಲೆಯಾದ್ಯಂತ ಪ್ರಚಾರದ ಕಾವು ಜೋರಾಗಿತ್ತು. ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳ ಅತಿರಥ ಮಹಾರಥರು ಜಿಲ್ಲೆಯಲ್ಲಿ ಅಬ್ಬರದ ಪ್ರಚಾರ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಬಂಗಾರಪೇಟೆ ತಾಲ್ಲೂಕಿನ ಬೀರಂಡಹಳ್ಳಿಯಲ್ಲಿ ಮೇ 9ರಂದು ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಕೆಜಿಎಫ್‌ನಲ್ಲಿ ಏ.30ರಂದು ಪ್ರಚಾರ ನಡೆಸಿದರು. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಜಿಲ್ಲೆಯ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಏ.7ರಂದು ಜನಾಶೀರ್ವಾದ ಯಾತ್ರೆ ಕೈಗೊಂಡರು. ಮಾಲೂರಿನಲ್ಲಿ ಮೇ 7ರಂದು ಪ್ರಚಾರ ನಡೆಸಿದರು. ಚುನಾವಣೆ ವೇಳೆ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ಜಿಲ್ಲಾ ಕೇಂದ್ರದಲ್ಲಿ ಮಾರ್ಚ್‌ 4ರಂದು ವಿಕಾಸ ಪರ್ವ, ಶ್ರೀನಿವಾಸಪುರದಲ್ಲಿ ಮೇ 1 ಮತ್ತು ಜಿಲ್ಲಾ ಕೇಂದ್ರದಲ್ಲಿ ಮೇ 5ರಂದು ಭರ್ಜರಿ ಪ್ರಚಾರ ನಡೆಸಿದರು.

ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಭದ್ರಕೋಟೆಯಾದ ಜಿಲ್ಲೆಯಲ್ಲಿ ‘ಕಮಲ’ ಮುದುಡಿತು. ‘ಕೈ’ ಪಾಳಯ ಮೇಲುಗೈ ಸಾಧಿಸಿತು. 6 ವಿಧಾನಸಭಾ ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳು ಕಾಂಗ್ರೆಸ್‌ ತೆಕ್ಕೆಗೆ ಜಾರಿದವು. ಒಂದು ಕ್ಷೇತ್ರದಲ್ಲಿ ಜೆಡಿಎಸ್‌ ಗೆಲುವಿನ ನಗೆ ಬೀರಿತು. ಕಮಲ ಪಾಳಯದ ಘಟಾನುಘಟಿಗಳು ಅಬ್ಬರದ ಪ್ರಚಾರ ನಡೆಸಿದರೂ ಬಿಜೆಪಿ ಗೆಲುವಿನ ಖಾತೆ ತೆರೆಯದೆ ಮುಖಭಂಗ ಅನುಭವಿಸಿತು.

ಕೋಲಾರ–ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಕೋಚಿಮುಲ್‌) ಅಧ್ಯಕ್ಷ ಸ್ಥಾನಕ್ಕೆ ಜುಲೈ 16ರಂದು ನಡೆದ ಚುನಾವಣೆಯಲ್ಲಿ ಮಾಲೂರು ಶಾಸಕ ಹಾಗೂ ಒಕ್ಕೂಟದ ನಿರ್ದೇಶಕ ಕೆ.ವೈ.ನಂಜೇಗೌಡ ಅವಿರೋಧ ಆಯ್ಕೆಯಾದರು.

ಜಿಲ್ಲಾ ಪಂಚಾಯಿತಿಯ ವಿವಿಧ ಸ್ಥಾಯಿ ಸಮಿತಿಗಳಿಗೆ ಜುಲೈ 18ರಂದು ಚುನಾವಣೆ ನಡೆಯಿತು. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾಂಗ್ರೆಸ್‌ನ ರೂಪಶ್ರೀ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಜೆಡಿಎಸ್‌ನ ಎಂ.ವಿ.ಶ್ರೀನಿವಾಸ್ ಹಾಗೂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಪ್ರಕಾಶ್ ರಾಮಚಂದ್ರ ಅವಿರೋಧ ಆಯ್ಕೆಯಾದರು.

ತೀವ್ರ ಕುತೂಹಲ ಕೆರಳಿಸಿದ್ದ ಕೋಲಾರ ಎಪಿಎಂಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷಗಾದಿಗೆ ಅ.12ರಂದು ನಡೆದ ಚುನಾವಣೆಯಲ್ಲಿ ಶಾಸಕ ಕೆ.ಶ್ರೀನಿವಾಸಗೌಡರ ಬಣದ ಅಭ್ಯರ್ಥಿ ಪರಾಭವಗೊಂಡು ಶಾಸಕರಿಗೆ ಮುಖಭಂಗವಾಯಿತು. ಶಾಸಕರು ಹಾಗೂ ಪಕ್ಷದ ಮುಖಂಡರು ಎಪಿಎಂಸಿ ನಿಕಟಪೂರ್ವ ಅಧ್ಯಕ್ಷ ಬಿ.ವೆಂಕಟೇಶ್‌ ಅವರನ್ನೇ ಎರಡನೇ ಅವಧಿಗೂ ಮುಂದುವರಿಸುವ ನಿರ್ಣಯ ಕೈಗೊಂಡು ನಾಮಪತ್ರ ಹಾಕಿಸಿದ್ದರು. ಆದರೆ, ಶಾಸಕರ ನಿರ್ಧಾರಕ್ಕೆ ಸೆಡ್ಡು ಹೊಡೆದ ಜೆಡಿಎಸ್‌ ಪಾಳಯದವರೇ ಆದ ಡಿ.ಎಲ್‌.ನಾಗರಾಜ್‌ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಸಾಧಿಸಿ ಅಧ್ಯಕ್ಷಗಾದಿ ಹಿಡಿದರು.

ರಾಜಕೀಯ ಜಿದ್ದಾಜಿದ್ದಿಯ ಕಣವಾಗಿದ್ದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ (ಡಿಸಿಸಿ) ಅಧ್ಯಕ್ಷಗಾದಿಗೆ ನ.28ರಂದು ಚುನಾವಣೆ ನಡೆದು ಎಂ.ಗೋವಿಂದಗೌಡ ಪುನರಾಯ್ಕೆಯಾಗುವ ಮೂಲಕ ಜಿಲ್ಲೆಯ ಸಹಕಾರಿ ರಂಗದಲ್ಲಿ ಹೊಸ ಇತಿಹಾಸ ಬರೆದರು.

ಆಕ್ರೋಶದ ಕಿಡಿ: ಮಾಲೂರು ಪಟ್ಟಣದಲ್ಲಿ ಆ.1ರಂದು ನಡೆದ ವಿದ್ಯಾರ್ಥಿನಿಯ ಕೊಲೆ ಹಾಗೂ ಅತ್ಯಾಚಾರ ಯತ್ನ ಪ್ರಕರಣವು ಜಿಲ್ಲೆಯಾದ್ಯಂತ ಆಕ್ರೋಶದ ಕಿಡಿ ಹೊತ್ತಿಸಿತು. ಪ್ರಕರಣ ಖಂಡಿಸಿ ವಿವಿಧ ಸಂಘಟನೆಗಳ ಸದಸ್ಯರು ಬೀದಿಗಿಳಿದು ಹೋರಾಟ ಮಾಡಿದರು. ಸಾಮಾಜಿಕ ಜಾಲತಾಣಗಳಲ್ಲೂ ವ್ಯಾಪಕ ಚರ್ಚೆಯಾಯಿತು. ಜಿಲ್ಲಾ ಕೇಂದ್ರ ಸೇರಿದಂತೆ ಎಲ್ಲೆಡೆ ಪ್ರತಿಭಟನೆ ಕಾವು ಹೆಚ್ಚಿತು.

ಪೊಲೀಸರು ಘಟನೆ ನಡೆದ 48 ತಾಸಿನಲ್ಲಿ ಆರೋಪಿಯನ್ನು ಪತ್ತೆ ಮಾಡಿ ಕಂಬಿ ಹಿಂದೆ ದೂಡಿದರು. ಅಲ್ಲದೇ, 24 ದಿನದಲ್ಲಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದರು. 45 ದಿನದಲ್ಲಿ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿದ ಎರಡನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯವು ಅಪಾಧಿತ ಟಿ.ಎನ್‌.ಸುರೇಶ್‌ಬಾಬುಗೆ ಸೆ.15ರಂದು ಗಲ್ಲು ಶಿಕ್ಷೆ ವಿಧಿಸಿತು.

ಮಾಲೂರು ತಾಲ್ಲೂಕು ಮಾಸ್ತಿ ಠಾಣೆ ವ್ಯಾಪ್ತಿಯ ಕುಪ್ಪೂರು ಗ್ರಾಮದ ಬಳಿ 2014ರ ಮೇ 28ರಂದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ 4 ಮಂದಿ ಆಪಾದಿತರಿಗೆ ಇದೇ ನ್ಯಾಯಾಲಯ ಸೆ.15ರಂದೇ ಗಲ್ಲು ಶಿಕ್ಷೆ ವಿಧಿಸಿತು. ಇದರೊಂದಿಗೆ ಒಂದೇ ದಿನ 2 ಪ್ರತ್ಯೇಕ ಪ್ರಕರಣಗಳಲ್ಲಿ ಗಲ್ಲು ಶಿಕ್ಷೆ ಆದೇಶಕ್ಕೆ ನ್ಯಾಯಾಲಯ ಸಾಕ್ಷಿಯಾಯಿತು.

ಮರಣ ಮೃದಂಗ: ಜಿಲ್ಲೆಯ ವಿವಿಧೆಡೆ ಪದೇ ಪದೇ ಭೀಕರ ಅಪಘಾತಗಳಾಗಿ ಹೆಚ್ಚಿನ ಸಾವು ನೋವು ಸಂಭವಿಸಿತು. ಮುಳಬಾಗಿಲು ತಾಲ್ಲೂಕಿನ ಗಾಜಲಬಾವಿ ಗ್ರಾಮದ ಬಳಿ ಜ.13ರಂದು ಸರಕು ಸಾಗಣೆ ಆಟೊ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು 3 ಮಂದಿ ಸ್ಥಳದಲ್ಲೇ ಮೃತಪಟ್ಟರು. ಶನಿಮಹಾತ್ಮ ದೇವಸ್ಥಾನಕ್ಕೆ ಹೋಗಿದ್ದ ಇವರು ಮತ್ತೆ ಮನೆಗೆ ಮರಳಲಿಲ್ಲ.

ಕೋಲಾರ ತಾಲ್ಲೂಕಿನ ವಡಗೂರು ಗೇಟ್‌ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮಾ.22ರಂದು ಕಾರು ಡಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟರು. ಶಾಲೆ ಮುಗಿದ ನಂತರ ಊರಿಗೆ ಹೋಗಲು ಹೆದ್ದಾರಿ ಬದಿಯ ನಿಲ್ದಾಣದಲ್ಲಿ ಬಸ್‌ಗೆ ಕಾಯುತ್ತಿದ್ದ ವಿದ್ಯಾರ್ಥಿಗಳು ಕಾರು ಚಾಲಕನ ನಿರ್ಲಕ್ಷ್ಯಕ್ಕೆ ಬಲಿಯಾದರು.

ಕೋಲಾರ ಹೊರವಲಯದ ಟಮಕ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಮೇ 17ರಂದು ಸಂಭವಿಸಿದ ಕಾರು ಅಪಘಾತದಲ್ಲಿ ಇಬ್ಬರು ಮೃತಪಟ್ಟರು. ತಮಿಳುನಾಡಿನಲ್ಲಿ ಸಂಬಂಧಿಕರ ಮದುವೆ ಸಮಾರಂಭ ಮುಗಿಸಿಕೊಂಡು ಕಾರಿನಲ್ಲಿ ವಾಪಸ್‌ ಬರುತ್ತಿದ್ದವರು ಸಾವಿನ ಮನೆ ಸೇರಿದರು.

ಬಂಗಾರಪೇಟೆ ತಾಲ್ಲೂಕಿನ ರಾಮಾಪುರ ಗೇಟ್‌ ಬಳಿ ಜುಲೈ 3ರಂದು ಸಂಭವಿಸಿದ ಸರಣಿ ಅಪಘಾತದಲ್ಲಿ 3 ಮಂದಿ ಸ್ಥಳದಲ್ಲೇ ಮೃತಪಟ್ಟರು. ಬಂಗಾರಪೇಟೆ ತಾಲ್ಲೂಕಿನ ಅನಿಗಾನಹಳ್ಳಿ ಬಳಿ ಸೆ.26ರಂದು ಕಾರು ಮತ್ತು ಟಾಟಾ ಸುಮೊ ನಡುವೆ ಸಂಭವಿಸಿದ ಅಪಘಾತದಲ್ಲಿ ಯೋಧ ಸೇರಿದಂತೆ 4 ಮಂದಿ ಸಾವಿನ ಮನೆಯ ಕದ ತಟ್ಟಿದರು.

ಕೋಲಾರ ಹೊರವಲಯದ ಎಪಿಎಂಸಿ ಬಳಿ ಅ.12ರಂದು ಕಾರು ಮತ್ತು ಬೈಕ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಅಸುನೀಗಿದರು. ಬಂಗಾರಪೇಟೆ ತಾಲ್ಲೂಕಿನ ಬೀರಂಡಹಳ್ಳಿ ಗೇಟ್‌ ಬಳಿ ಡಿ.26ರಂದು ಸ್ನೇಹಿತರ ಜತೆ ಡ್ರ್ಯಾಗ್‌ ರೇಸ್‌ ಮಾಡುವ ಯತ್ನದಲ್ಲಿ ಬಸ್‌ಗೆ ಬೈಕ್‌ ಗುದ್ದಿಸಿದ ಎಂಜಿನಿಯರಿಂಗ್‌ ವಿದ್ಯಾರ್ಥಿ ಸ್ಥಳದಲ್ಲೇ ಸಜೀವ ದಹನವಾದ.

ಪ್ರಶಸ್ತಿ ಖುಷಿ: ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸಾಧನೆ ಮಾಡಿದ ಜಿಲ್ಲೆಯ ಹಲವು ಸಾಧಕರು ಈ ಬಾರಿ ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿ ಮುಡಿಗೇರಿಸಿಕೊಂಡರು. ಈ ಸಾಧಕರು ಜಿಲ್ಲೆಯ ಕೀರ್ತಿ ಪತಾಕೆ ಹಾರಿಸಿದರು.

ಅಕ್ಟೋಬರ್‌ನಲ್ಲಿ ರಷ್ಯಾದಲ್ಲಿ ನಡೆದ ವಿಶ್ವ ಜೂನಿಯರ್‌ ಸ್ನೂಕರ್‌ ಚಾಂಪಿಯನ್‌ಶಿಪ್‌ನಲ್ಲಿ ‘ಚಿನ್ನದ ಊರು’ ಕೆಜಿಎಫ್‌ನ ಹುಡುಗಿ ಕೀರ್ತನಾ ಪಾಂಡ್ಯನ್‌ ಚಿನ್ನದ ಪದಕ ಗಳಿಸಿದರು. ರೇಷ್ಮೆ ಇಲಾಖೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಅನುಷ್ಠಾನಕ್ಕಾಗಿ ಜಿಲ್ಲೆಗೆ ಈ ಬಾರಿ ರಾಜ್ಯ ಮಟ್ಟದಲ್ಲಿ 2ನೇ ಸ್ಥಾನ ಲಭಿಸಿತು.

‘ಕಾಮರೂಪಿ’ ಕಾವ್ಯನಾಮದಿಂದ ಪ್ರಸಿದ್ಧರಾದ ಜಿಲ್ಲೆಯ ಹೆಮ್ಮೆಯ ಸಾಹಿತಿ ಎಂ.ಎಸ್.ಪ್ರಭಾಕರ ಮತ್ತು ಒಲಿಂಪಿಯನ್‌ ಅಥ್ಲೀಟ್‌ ಕೆನೆತ್‌ ಪೊವೆಲ್‌ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದರು. ಮಾಲೂರು ತಾಲ್ಲೂಕಿನ ಗುಂಡ್ಲುಪಾಳ್ಯ ಗ್ರಾಮದ ಸೂಲಗಿತ್ತಿ ಬ್ಯಾಟಮ್ಮ ಅವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ ಮತ್ತು ನಾಟಕಕಾರ ಕೆ.ವೈ.ನಾರಾಯಣಸ್ವಾಮಿ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿತು. ಕೋಲಾರ ತಾಲ್ಲೂಕಿನ ಮದನಹಳ್ಳಿ ಗ್ರಾಮದ ಪ್ರಗತಿಪರ ರೈತ ಎಂ.ಎನ್‌.ರವಿಶಂಕರ್‌ ಕೆನರಾ ಬ್ಯಾಂಕ್ ಪ್ರಾಯೋಜಿತ ‘ಕ್ಯಾನ್‌ ಬ್ಯಾಂಕ್‌‘ ರಾಜ್ಯ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿಗೆ ಪಾತ್ರರಾದರು.

ದುರಂತ ಅಂತ್ಯ: ಕೋಲಾರ ತಾಲ್ಲೂಕಿನ ಮಂಗಸಂದ್ರ ಗೇಟ್‌ ಬಳಿ ಮಾರ್ಚ್‌ 27ರಂದು ಲಾರಿ ಮತ್ತು ಬೈಕ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಹೆಡ್‌ ಕಾನ್‌ಸ್ಟೆಬಲ್‌ ಪಾಪಣ್ಣ (50) ಮೃತಪಟ್ಟರು. ಕೋಲಾರ ನಗರ ಸಂಚಾರ ಠಾಣೆಯಲ್ಲಿ ಸೇವೆಯಲ್ಲಿದ್ದ ಅವರು ಅಪಘಾತ ಪ್ರಕರಣವೊಂದರ ವಾಹನದ ಮಾಲೀಕರ ಪತ್ತೆಗಾಗಿ ಮಾಲೂರಿಗೆ ಹೋಗುತ್ತಿದ್ದಾಗ ದುರಂತ ಅಂತ್ಯ ಕಂಡರು. ಮುಳಬಾಗಿಲು ತಾಲ್ಲೂಕಿನ ಬೆಟಗೇರಹಳ್ಳಿಯಲ್ಲಿ ಜುಲೈ 12ರಂದು ಒಂದೇ ಕುಟುಂಬದ ನಾಲ್ಕು ಮಂದಿ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಮನಕಲಕಿತು.

ಕೆಜಿಎಫ್‌ನ ರಾಬರ್ಟ್‌ಸನ್‌ಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಫೆ.23ರಂದು ಮತ್ತು ಜಿಲ್ಲಾ ಕೇಂದ್ರದ ಶ್ರೀ ನರಸಿಂಹರಾಜ (ಎಸ್‌ಎನ್‌ಆರ್‌) ಜಿಲ್ಲಾ ಆಸ್ಪತ್ರೆಯಲ್ಲಿ ಜುಲೈ 11ರಂದು ನಡೆದ ನವಜಾತ ಶಿಶುಗಳ ಅಪಹರಣವು ಸಾರ್ವಜನಿಕರಲ್ಲಿ ಆತಂಕ ಮೂಡಿಸಿತು. ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿ ಕಳವಾಗಿದ್ದ ನವಜಾತ ಹೆಣ್ಣು ಶಿಶುವು ಜುಲೈ 13ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಅತ್ತಿಬೆಲೆ ಬಳಿಯ ಕೆಎಚ್‌ಬಿ ಕಾಲೊನಿಯಲ್ಲಿ ಪತ್ತೆಯಾಗಿ ಪ್ರಕರಣ ಸುಖಾಂತ್ಯ ಕಂಡಿತು.

ಭ್ರಷ್ಟರ ಬೇಟೆ: ಆದಾಯ ಮಿತಿಗಿಂತ ಹೆಚ್ಚಿನ ಆಸ್ತಿ ಸಂಪಾದಿಸಿದ ಲಂಚಬಾಕ ಅಧಿಕಾರಿಗಳ ವಿರುದ್ಧ ಸಮರ ಸಾರಿದ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಸಿಬ್ಬಂದಿಯು ಭ್ರಷ್ಟರನ್ನು ಕೃಷ್ಣನ ಜನ್ಮ ಸ್ಥಳಕ್ಕೆ ಕಳುಹಿಸಿದರು. ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಶ್ರೀನಿವಾಸಪುರ ಉಪ ವಿಭಾಗದ ಸಹಾಯಕ ಎಂಜಿನಿಯರ್‌ (ಎ.ಇ) ಎನ್.ಅಪ್ಪಿರೆಡ್ಡಿ ಮಾರ್ಚ್‌ 9ರಂದು, ಜಿಲ್ಲಾಧಿಕಾರಿ ಕಚೇರಿಯ ಕಂದಾಯ ವಿಭಾಗದಲ್ಲಿ ಶಿರಸ್ತೆದಾರ್‌ ಆಗಿದ್ದ ಮುನಿವೆಂಕಟಪ್ಪ ಏ.27ರಂದು ಮತ್ತು ಕೆಜಿಎಫ್‌ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ (ಬಿಇಒ) ಸುರೇಶ್‌ ನ.3ರಂದು ಎಸಿಬಿ ಬಲೆಗೆ ಬಿದ್ದರು.

ಪೊಲೀಸ್‌ ದರ್ಪ: ಬೇತಮಂಗಲ ಪೊಲೀಸ್ ಠಾಣೆ ಎಸ್‌ಐ ಹೊನ್ನೇಗೌಡ (ಅಮಾನತುಗೊಂಡಿದ್ದಾರೆ) ಅವರು ನವೆಂಬರ್‌ನಲ್ಲಿ ಅಪರಾಧ ಪ್ರಕರಣವೊಂದರ ಆರೋಪಿಗಳಿಗೆ ಠಾಣೆಯಲ್ಲಿ ಬೂಟುಗಾಲಿನಿಂದ ಒದ್ದು ದರ್ಪ ತೋರಿದ ಪ್ರಕರಣ ಸಾರ್ವಜನಿಕವಾಗಿ ಸಾಕಷ್ಟು ಚರ್ಚೆಗೆ ಗ್ರಾಸವಾಯಿತು. ಹೊನ್ನೇಗೌಡರ ದೌರ್ಜನ್ಯದ ದೃಶ್ಯಾವಳಿಯನ್ನು ಸಹೋದ್ಯೋಗಿಗಳೇ ಮೊಬೈಲ್‌ನಲ್ಲಿ ಸೆರೆ ಹಿಡಿದು ನ.16ರಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರು. ಹೊನ್ನೇಗೌಡರ ವರ್ತನೆ ಖಂಡಿಸಿ ಜಿಲ್ಲೆಯಾದ್ಯಂತ ಹೋರಾಟದ ಕಿಚ್ಚು ಹೊತ್ತಿತ್ತು. ಬಳಿಕ ಅವರನ್ನು ನ.17ರಂದು ಸೇವೆಯಿಂದ ಅಮಾನತು ಮಾಡಲಾಯಿತು.

ಫಲಿತಾಂಶದ ಏರಿಳಿತ: ಏ.30ರಂದು ಘೋಷಣೆಯಾದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆಯು ಶೇ 66.51 ಫಲಿತಾಂಶ ಪಡೆಯುವುದರೊಂದಿಗೆ ರಾಜ್ಯ ಮಟ್ಟದಲ್ಲಿ 18ನೇ ಸ್ಥಾನ ಪಡೆಯಿತು. ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯು ಶೇ 57.87 ಫಲಿತಾಂಶ ಸಾಧನೆಯೊಂದಿಗೆ ರಾಜ್ಯ ಮಟ್ಟದಲ್ಲಿ 15ನೇ ಸ್ಥಾನದಲ್ಲಿತ್ತು. ಈ ಬಾರಿ ಒಟ್ಟಾರೆ ಫಲಿತಾಂಶ ಏರಿಕೆಯಾದರೂ ಜಿಲ್ಲಾವಾರು ಪಟ್ಟಿಯಲ್ಲಿ ಜಿಲ್ಲೆಯು 18ನೇ ಸ್ಥಾನಕ್ಕೆ ಕುಸಿಯಿತು.

ಅದರ ಬೆನ್ನಲ್ಲೇ ಮೇ 7ರಂದು ಘೋಷಣೆಯಾದ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಜಿಲ್ಲೆಯು ಶೇ 83.34 ಫಲಿತಾಂಶ ಪಡೆಯುವುದರೊಂದಿಗೆ ರಾಜ್ಯ ಮಟ್ಟದಲ್ಲಿ 8ನೇ ಸ್ಥಾನ ಗಳಿಸಿತು. ಹಿಂದಿನ ವರ್ಷ ಜಿಲ್ಲೆಯು ಶೇ 78.51 ಫಲಿತಾಂಶ ಸಾಧನೆಯೊಂದಿಗೆ ರಾಜ್ಯ ಮಟ್ಟದಲ್ಲಿ 7ನೇ ಸ್ಥಾನದಲ್ಲಿತ್ತು. ಈ ಬಾರಿ ಒಟ್ಟಾರೆ ಫಲಿತಾಂಶ ಏರಿಕೆಯಾದರೂ ಜಿಲ್ಲೆಯು 8ನೇ ಸ್ಥಾನಕ್ಕೆ ಕುಸಿಯಿತು.

ವರ್ಗಾವಣೆ ಪರ್ವ: ಮರಳು ದಂಧೆ ಹಾಗೂ ಕಲ್ಲು ಗಣಿಗಾರಿಕೆ ವಿರುದ್ಧ ಕಾನೂನು ಸಮರ ಸಾರಿದ್ದ ಜಿಲ್ಲಾಧಿಕಾರಿ ಜಿ.ಸತ್ಯವತಿ ಅವರನ್ನು ಸರ್ಕಾರ ಜೂನ್‌ ಮಧ್ಯ ಭಾಗದಲ್ಲಿ ಕಡ್ಡಾಯ ರಜೆ ಮೇಲೆ ಕಳುಹಿಸಿತು. ನಂತರ ಅವರನ್ನು ವರ್ಗಾವಣೆ ಮಾಡಿ ಜೆ.ಮಂಜುನಾಥ್‌ ಅವರನ್ನು ಜಿಲ್ಲಾಧಿಕಾರಿಯಾಗಿ ನೇಮಿಸಿತು. ಮಂಜುನಾಥ್ ಆ.1ರಂದು ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು.

ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ ನಿರ್ಮಾಣ ಹಾಗೂ ಬರ ಪರಿಸ್ಥಿತಿ ನಿರ್ವಹಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ ಅವರನ್ನು ಮಾರ್ಚ್‌ 7ರಂದು ವರ್ಗಾವಣೆ ಮಾಡಲಾಯಿತು. ಅವರ ವರ್ಗಾವಣೆಯಿಂದ ತೆರವಾದ ಹುದ್ದೆಗೆ ಏ.24ರಂದು ಕೆ.ಎಸ್‌.ಲತಾಕುಮಾರಿ ಅವರನ್ನು ನಿಯೋಜಿಸಲಾಯಿತು. ಆದರೆ, ನಾಲ್ಕು ತಿಂಗಳು ಕಳೆಯುವಷ್ಟರಲ್ಲೇ ಲತಾಕುಮಾರಿ ಅವರನ್ನೂ ಎತ್ತಂಗಡಿ ಮಾಡಲಾಯಿತು. ಬಳಿಕ ನೂತನ ಸಿಇಒ ಆಗಿ ನಿಯೋಜನೆಗೊಂಡ ಜಿ.ಜಗದೀಶ್‌ ಸೆ.17ರಂದು ಅಧಿಕಾರ ಸ್ವೀಕರಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಅವರನ್ನು ಆ.8ರಂದು ವರ್ಗಾವಣೆ ಮಾಡಲಾಯಿತು.

ಕೊನೆಗೂ ಬಂದ ಗಂಗೆ: ಜಿಲ್ಲೆಯ 121 ಕೆರೆ ತುಂಬಿಸುವ ಉದ್ದೇಶದಿಂದ ಹಿಂದಿನ ಕಾಂಗ್ರೆಸ್‌ ಸರ್ಕಾರ ₹ 1,280 ಕೋಟಿ ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಂಡಿದ್ದ ಮಹತ್ವಾಕಾಂಕ್ಷೆಯ ಕೆ.ಸಿ ವ್ಯಾಲಿ ಯೋಜನೆ ಕಾಮಗಾರಿ ಹಲವು ಅಡೆತಡೆ ನಡುವೆ ಪೂರ್ಣಗೊಂಡು ಜೂನ್‌ 2ರಂದು ಜಿಲ್ಲೆಯ ಲಕ್ಷ್ಮೀಸಾಗರ ಕೆರೆಗೆ ನೀರು ಬಂದಿತು.

ಈ ಯೋಜನೆಗೆ 2016ರ ಮೇ 30ರಂದು ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಕಾಮಗಾರಿ ಪೂರ್ಣಗೊಳ್ಳಲು ಸುಮಾರು 2 ವರ್ಷವೇ ಬೇಕಾಯಿತು. ಜೂನ್‌ 2ರಿಂದ ಜುಲೈ 17ರವರೆಗೆ ಕೋಲಾರ ತಾಲ್ಲೂಕಿನ ಲಕ್ಷ್ಮೀಸಾಗರ, ಉದ್ದಪ್ಪನಹಳ್ಳಿ, ಜೋಡಿ ಕೃಷ್ಣಾಪುರ, ನರಸಾಪುರ ಹಾಗೂ ದೊಡ್ಡವಲ್ಲಭಿ ಕೆರೆಗೆ ನೀರು ಹರಿಸಲಾಗಿತ್ತು. ಜುಲೈ 17ರಂದು ಲಕ್ಷ್ಮೀಸಾಗರ ಕೆರೆ ಹಾಗೂ ಕಾಲುವೆ ನೀರಿನಲ್ಲಿ ನೊರೆ ಕಾಣಿಸಿಕೊಂಡಿತು. ಹೀಗಾಗಿ ಜುಲೈ 18ರಂದು ನೀರು ಹರಿಸುವುದನ್ನು ಸ್ಥಗಿತಗೊಳಿಸಲಾಯಿತು.

ನಂತರ ನೀರಾವರಿ ಹೋರಾಟಗಾರರು ನೀರಿನ ಶುದ್ಧತೆ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದರು. ಹೈಕೋರ್ಟ್‌ ನೀರಿನ ಶುದ್ಧತೆ ಖಾತ್ರಿಪಡಿಸುವವರೆಗೂ ಯೋಜನೆಯಿಂದ ಜಿಲ್ಲೆಗೆ ನೀರು ಹರಿಸದಂತೆ ಮಧ್ಯಂತರ ತಡೆಯಾಜ್ಞೆ ನೀಡಿತು. ಆ ನಂತರ ಸುದೀರ್ಘ ವಿಚಾರಣೆ ನಡೆದು ನ್ಯಾಯಾಲಯ ತಡೆಯಾಜ್ಞೆ ಆದೇಶ ಮಾರ್ಪಾಡು ಮಾಡಿ ನೀರು ಹರಿಸುವಂತೆ ಸೆ.28ರಂದು ಆದೇಶ ಹೊರಡಿಸಿತು.

ಮರೆಯಾದವರು: ವಿವಿಧ ಕ್ಷೇತ್ರಗಳ ಗಣ್ಯರ ಅಗಲಿಕೆಯ ನೋವು ಜನರ ಮನಸು ಘಾಸಿಗೊಳಿಸಿತು. ಕೆಜಿಎಫ್‌ ಮೀಸಲು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಎಂ.ಭಕ್ತವತ್ಸಲಂ ನ.29ರಂದು ಹೃದಯಾಘಾತದಿಂದ ನಿಧನರಾದರು. ಕೆಜಿಎಫ್‌ ತಾಲ್ಲೂಕಿನ ಕಮ್ಮಸಂದ್ರ ಗ್ರಾಮದಲ್ಲಿ ಕೋಟಿ ಲಿಂಗಗಳ ಶಿವಲೋಕ ಸೃಷ್ಟಿಸಿ ದೇಶ ವಿದೇಶದಲ್ಲಿ ಪ್ರಖ್ಯಾತರಾಗಿದ್ದ ಕೋಟಿಲಿಂಗೇಶ್ವರ ಕ್ಷೇತ್ರದ ಧರ್ಮಾಧಿಕಾರಿ ಸಾಂಬಶಿವಮೂರ್ತಿ ಡಿ.14ರಂದು ಕೊನೆಯುಸಿರೆಳೆದರು. ಮಾಜಿ ಶಾಸಕ ದ್ಯಾವೀರಪ್ಪ ನಿಧನರಾದರು. ಶ್ರೀ ನರಸಿಂಹರಾಜ (ಎಸ್‌ಎನ್‌ಆರ್‌) ಜಿಲ್ಲಾ ಆಸ್ಪತ್ರೆ ಶಸ್ತ್ರಚಿಕಿತ್ಸಕರಾಗಿದ್ದ ಡಾ.ಎಚ್‌.ಆರ್‌.ಶಿವಕುಮಾರ್‌ ಮಹಾರಾಷ್ಟ್ರದಲ್ಲಿ ಏ.6ರಂದು ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟರು.

ಅಧ್ಯಕ್ಷಗಾದಿ ಭಾಗ್ಯ: ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಜಯ ಗಳಿಸಿದ್ದ ಕೆ.ಆರ್.ರಮೇಶ್‌ಕುಮಾರ್‌ ಅವರಿಗೆ ಮೇ 25ರಂದು ವಿಧಾನಸಭಾಧ್ಯಕ್ಷ ಸ್ಥಾನ ಒಲಿದು ಬಂದಿತು. ಬಂಗಾರಪೇಟೆ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ ಅವರಿಗೆ ಡಿ.22ರಂದು ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಅಧ್ಯಕ್ಷಗಾದಿ ಮತ್ತು ಕೆಜಿಎಫ್‌ ಶಾಸಕಿ ಎಂ.ರೂಪಕಲಾ ಅವರಿಗೆ ಸಂಸದೀಯ ಕಾರ್ಯದರ್ಶಿ ಹುದ್ದೆ ನೀಡಿದ್ದರಿಂದ ಜಿಲ್ಲೆಯಲ್ಲಿ ಸಂಭ್ರಮ ಮನೆ ಮಾಡಿತು.

ಅಕ್ರಮದ ಸದ್ದು: ಕೆಜಿಎಫ್‌ ಪೊಲೀಸ್‌ ಜಿಲ್ಲೆ ವ್ಯಾಪ್ತಿಯ 6 ಮಂದಿ ಪೊಲೀಸ್‌ ಸಿಬ್ಬಂದಿಯನ್ನು ಅಕ್ರಮ ನೇಮಕಾತಿ ಆರೋಪದ ಮೇಲೆ ವಜಾಗೊಳಿಸಿ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಸ್‌.ಲೋಕೇಶ್‌ಕುಮಾರ್‌ ಆ.9ರಂದು ಆದೇಶ ಹೊರಡಿಸಿದರು.

ವಜಾಗೊಂಡ 6 ಮಂದಿಯೂ ನಿವೃತ್ತ ಐಪಿಎಸ್‌ ಅಧಿಕಾರಿ ಎಚ್‌್.ಆರ್‌.ಭಗವಾನ್‌ದಾಸ್‌ರ ಸಂಬಂಧಿಕರು. ಈ ಹಿಂದೆ ಕೆಜಿಎಫ್‌ ಪೊಲೀಸ್‌ ಜಿಲ್ಲಾ ವರಿಷ್ಠಾಧಿಕಾರಿಯಾಗಿದ್ದ ಭಗವಾನ್‌ದಾಸ್‌ ನಿವೃತ್ತಿಗೂ ಮುನ್ನ 2016ರ ಜುಲೈನಲ್ಲಿ ಇವರನ್ನು ಬ್ಯಾಕ್‌ಲಾಗ್‌ ಹುದ್ದೆಗಳಿಗೆ ಅಕ್ರಮವಾಗಿ ನೇರ ನೇಮಕಾತಿ ಮಾಡಿದ್ದರು. ಅಕ್ರಮ ನೇಮಕಾತಿ ಮತ್ತು ಸಿಬ್ಬಂದಿ ವಜಾ ಪ್ರಕರಣ ಸಾಕಷ್ಟು ಸದ್ದು ಮಾಡಿತು.

ಕಳಚದ ಬರದ ಕೊಂಡಿ: ಕಳೆದೊಂದು ದಶಕದಿಂದ ಜಿಲ್ಲೆಯ ಜನರನ್ನು ಬಹುವಾಗಿ ಕಾಡಿದ್ದ ಬರ ಈ ಬಾರಿಯೂ ತನ್ನ ಕರಾಳ ಛಾಯೆ ಮುಂದುವರಿಸಿದೆ. ಮುಂಗಾರು ಮತ್ತು ಹಿಂಗಾರಿನಲ್ಲಿ ಮಳೆ ಕೈಕೊಟ್ಟಿದ್ದರಿಂದ 39,438 ಹೆಕ್ಟೇರ್ ಬೆಳೆ ನಾಶವಾಗಿದೆ. ಕೇಂದ್ರ ಬರ ಅಧ್ಯಯನ ತಂಡವು ನ.17ರಂದು ಜಿಲ್ಲೆಗೆ ಭೇಟಿ ನೀಡಿ ಬರ ಪರಿಸ್ಥಿತಿ ಅವಲೋಕಿಸಿತು. ಬರ ಪರಿಸ್ಥಿತಿ ನಿರ್ವಹಣೆಗಾಗಿ ಜಿಲ್ಲೆಗೆ ₹ 57.45 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಜಿಲ್ಲಾಡಳಿತ ಪ್ರಸ್ತಾವ ಸಲ್ಲಿಸಿತು.

ಕೆಜಿಎಫ್‌ ನೂತನ ತಾಲ್ಲೂಕಾಗಿ ಮಾರ್ಚ್‌ 22ರಂದು ಕಾರ್ಯಾರಂಭ ಮಾಡಿತು. ಇದರೊಂದಿಗೆ ಆ ಭಾಗದ ಜನರ ದಶಕದ ಬೇಡಿಕೆ ಈಡೇರಿತು. ಜಿಲ್ಲೆಯು ಸಿಹಿ ಕಹಿಯ ನೆನಪಿನ ಸರಣಿಗೆ ಮುಖಾಮುಖಿಯಾಗುತ್ತಾ 2018ಕ್ಕೆ ವಿದಾಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT