ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ: ಚುಮು ಚುಮು ಚಳಿಗೆ ಗಡ ಗಡ ನಡುಕ

ಜಿಲ್ಲೆಯ ವಾತಾವರಣದಲ್ಲಿ ಏರುಪೇರು: ಮಾಗಿ ಚಳಿ ಪ್ರತಾಪ ಜೋರು
Last Updated 4 ಜನವರಿ 2019, 19:45 IST
ಅಕ್ಷರ ಗಾತ್ರ

ಕೋಲಾರ: ಬರಪೀಡಿತ ಜಿಲ್ಲೆಯಲ್ಲಿ ಮಾಗಿ ಚಳಿಯ ಪ್ರತಾಪ ಜೋರಾಗಿದ್ದು, ಮೈ ಕೊರೆವ ಚಳಿಗೆ ದೇಹದಲ್ಲಿ ಗಡ ಗಡ ನಡುಕ ಶುರುವಾಗಿದೆ. ಜಿಲ್ಲೆಯಾದ್ಯಂತ ಏಳೆಂಟು ದಿನಗಳಿಂದ ಚಳಿಯ ಪ್ರಮಾಣ ಹೆಚ್ಚಿದ್ದು, ಜಿಲ್ಲೆಯ ಮಂದಿಗೆ ಚುಮು ಚುಮು ಚಳಿಯು ಹಿತಾನುಭವ ನೀಡುತ್ತಿದೆ.

ಪಡುವಣದಲ್ಲಿ ನೇಸರ ಮರೆಯಾಗುವುದೆ ತಡ ಶುರುವಾಗುವ ಚಳಿಯ ಆಟ ಬೆಳಿಗ್ಗೆವರೆಗೂ ಮುಂದುವರಿಯುತ್ತದೆ. ಸದಾ ಸೂರ್ಯನ ಪ್ರಖರತೆಯಿಂದ ನಲುಗುವ ಜಿಲ್ಲೆ ಈಗ ಚಳಿಯ ಪ್ರತಾಪಕ್ಕೆ ತಣ್ಣಗಾಗಿದೆ. ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದೆ.

ನಸುಕಿನಲ್ಲಿ ಮಂಜಿನಾಟ ಶುರುವಾಗಿದ್ದು, ಬೆಳಿಗ್ಗೆ 7 ಗಂಟೆವರೆಗೂ ರಸ್ತೆಗಳೇ ಕಾಣದಷ್ಟು ದಟ್ಟ ಮಂಜು ಆವರಿಸುತ್ತಿದೆ. ಪತ್ರಿಕೆ ವಿತರಕರು, ಹಾಲು ಮಾರಾಟಗಾರರು, ಸೊಪ್ಪು ಹಾಗೂ ತರಕಾರಿ ವ್ಯಾಪಾರಿಗಳು, ಮುಂಜಾನೆಯೇ ಮಾರುಕಟ್ಟೆಗೆ ಬರುವ ರೈತರು ಮತ್ತು ಗ್ರಾಹಕರು ಚಳಿಗೆ ತತ್ತರಿಸಿದ್ದಾರೆ.

ನಗರ ಪ್ರದೇಶದಲ್ಲಿ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ವಾಯುವಿಹಾರ ಮಾಡುತ್ತಿದ್ದ ಮಂದಿ ಚಳಿಯ ಕಾರಣಕ್ಕೆ ಮನೆಯಿಂದ ಹೊರ ಬರುವ ಮನಸ್ಸು ಮಾಡುತ್ತಿಲ್ಲ. ಹೀಗಾಗಿ ವಾಯುವಿಹಾರಿಗಳ ಸಂಖ್ಯೆ ಕಡಿಮೆಯಾಗಿದೆ. ರಸ್ತೆ ಬದಿಯಲ್ಲಿ ತರಗೆಲೆ, ಕಸ ಕಡ್ಡಿ, ಕಾಗದ ಗುಡ್ಡೆ ಹಾಕಿ ಬೆಂಕಿ ಕಾಯಿಸುವ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿದೆ.

ತಾಪಮಾನ ಕುಸಿತ: ವಾತಾವರಣದಲ್ಲಿ ಏರುಪೇರಾಗಿದ್ದು, ಸೂರ್ಯ ನೆತ್ತಿ ಮೇಲೆ ಬಂದರೂ ಚಳಿ ಪ್ರಮಾಣ ಕಡಿಮೆ ಆಗುತ್ತಿಲ್ಲ. ಸಂಜೆ ಬೇಗನೆ ಕತ್ತಲಾದ ಅನುಭವವಾಗುತ್ತಿದೆ. ವಾರದ ಹಿಂದೆ 2018ರ ಡಿ.29ರಂದು ಜಿಲ್ಲೆಯ ಗರಿಷ್ಠ ತಾಪಮಾನ 30.4 ಮತ್ತು ಕನಿಷ್ಠ 17.7 ಡಿಗ್ರಿ ಸೆಲ್ಸಿಯಸ್‌ ಇತ್ತು. ಸತತ ಏಳು ದಿನಗಳಿಂದ ತಾಪಮಾನ ಕುಸಿಯಲಾರಂಭಿಸಿದ್ದು, ಶುಕ್ರವಾರ (ಜ.4) ಕನಿಷ್ಠ 10.29 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ.

ಭರ್ಜರಿ ವಹಿವಾಟು: ಜನ ಚಳಿಯಿಂದ ರಕ್ಷಣೆ ಪಡೆಯಲು ಬೆಚ್ಚನೆಯ ಉಡುಪುಗಳ ಮೊರೆ ಹೋಗುತ್ತಿದ್ದಾರೆ. ಅಲ್ಮೇರಾ ಸೇರಿದ್ದ ಸ್ವೆಟರ್‌, ಶಾಲು, ಮಂಕಿ ಕ್ಯಾಪ್‌, ಮಫ್ಲರ್‌ನಂತಹ ಉಣ್ಣೆ ಬಟ್ಟೆಗಳು ಹೊರಬಂದು ಜನರನ್ನು ಚಳಿಯಿಂದ ರಕ್ಷಿಸುವ ಪಾತ್ರ ನಿರ್ವಹಿಸುತ್ತಿವೆ. ಕಂಬಳಿ, ಸ್ವೆಟರ್‌, ಕೈಗವಸು, ಉಣ್ಣೆಯ ಹೊದಿಕೆಗಳು ಭರ್ಜರಿಯಾಗಿ ಮಾರಾಟವಾಗುತ್ತಿವೆ. ಉಣ್ಣೆ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿರುವುದು ಬೆಲೆಯು ತುಸು ಏರಿಕೆಯಾಗಿದೆ.

ಹೋಟೆಲ್‌ಗಳಲ್ಲಿ ಬೆಳಿಗ್ಗೆ ಕಾಫಿ, ಟೀ ವಹಿವಾಟು ವೃದ್ಧಿಸಿದೆ. ಸಂಜೆ ವೇಳೆ ಪಾನಿಪೂರಿ, ಮಸಾಲ ಪೂರಿ, ಬೇಲ್‌ ಪೂರಿ, ಬೋಂಡಾ, ಮಸಾಲ ವಡೆ, ಮೆಣಸಿನಕಾಯಿ ಬಜ್ಜಿ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿದೆ. ಆದರೆ, ಚಳಿಯ ಕಾರಣಕ್ಕೆ ಐಸ್‌ಕ್ರೀಮ್‌, ತಂಪು ಪಾನೀಯ, ಎಳನೀರು ವ್ಯಾಪಾರ ಕೊಂಚ ತಗ್ಗಿದೆ.

ಆರೋಗ್ಯ ಸಮಸ್ಯೆ: ಚಳಿಯ ತೀವ್ರತೆಗೆ ಜನರಲ್ಲಿ ನೆಗಡಿ, ಕೆಮ್ಮು, ತಲೆ ನೋವು, ಗಂಟಲು ನೋವು, ಜ್ವರದ ಲಕ್ಷಣ ಕಾಣಿಸಿಕೊಳ್ಳುತ್ತಿದೆ. ಚರ್ಮ ಬಿರಿಯುವಿಕೆ ಸಮಸ್ಯೆ ಸಾಮಾನ್ಯವಾಗಿದೆ. ಮುಖ್ಯವಾಗಿ ಚಿಕ್ಕ ಮಕ್ಕಳನ್ನು ಶೀತ ಮತ್ತು ಜ್ವರ ಹೆಚ್ಚಾಗಿ ಬಾಧಿಸುತ್ತಿದೆ. ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಳವಾಗಿದೆ. ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಸಂಕ್ರಾಂತಿವರೆಗೂ ಚಳಿ ಮುಂದುವರಿಯುವ ಸಾಧ್ಯತೆಯಿದೆ.

ಜಿಲ್ಲೆಯಲ್ಲಿ ತಾಪಮಾನ ವಿವರ (ಡಿಗ್ರಿ ಸೆಲ್ಸಿಯಸ್‌ನಲ್ಲಿ)
ದಿನ ಗರಿಷ್ಠ ಕನಿಷ್ಠ
29/12/18 30.04 17.07
30/12/18 28.98 16.98
31/12/18 28.05 15.02
1/01/19 28.02 15
2/01/19 29.01 11
3/01/19 28.04 11.01
4/01/19 30.11 10.29

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT