ಶ್ರೀನಿವಾಸಪುರ: ತಾಲ್ಲೂಕಿನ ಉತ್ತರ ಭಾಗದ ಗಡಿ ಗ್ರಾಮಗಳ ರೈತರು ಇನ್ನೂ ನಾಟಿ ಈರುಳ್ಳಿ ಬೆಳೆಯುವುದನ್ನು ಬಿಟ್ಟಿಲ್ಲ. ಅಕ್ಕಡಿ ಬೆಳೆಯಾಗಿ ಹಾಗೂ ಪ್ರತ್ಯೇಕ ತಾಕುಗಳಲ್ಲಿ ಬೆಳೆದು ಸಾಂಪ್ರದಾಯಿಕ ತಳಿಯನ್ನು ಉಳಿಸಿದ್ದಾರೆ.

ಕೆಲವೊಮ್ಮೆ ನಾಟಿ ಈರುಳ್ಳಿ ಬೆಲೆ ಗಗನಕ್ಕೇರಿದರೂ ಅದರ ರುಚಿಯನ್ನು ಅಲ್ಲಗಳೆಯುವಂತಿಲ್ಲ. ರಾಗಿ ಹಿಟ್ಟಿನೊಂದಿಗೆ ನಾಟಿ ಈರುಳ್ಳಿ ಬೆರೆಸಿ, ಹಸಿ ಮೆಣಸಿನ ಕಾಯಿ, ಉಪ್ಪು ಸೇರಿಸಿ ರೊಟ್ಟಿ ಮಾಡಿ ತಿಂದವರಿಗೇ ಗೊತ್ತು ಅದರ ರುಚಿ. ಅಷ್ಟೇ ಅಲ್ಲ, ಯಾವುದೇ ತಿಂಡಿ ತಿನಿಸುಗಳಿಗೆ, ಕರಿದ ಪದಾರ್ಥಗಳಿಗೆ ನಾಟಿ ಈರುಳ್ಳಿ ಸೇರಿಸಿದರೆ ಸ್ವಾದ ಹಾಗೂ ರುಚಿ ಇಮ್ಮಡಿಗೊಳ್ಳುತ್ತದೆ.

ಬಳ್ಳಾರಿ ಈರುಳ್ಳಿ ಎಂದು ಕರೆಯುವ ದೊಡ್ಡ ಈರುಳ್ಳಿ ಪರಿಚಯವಾದ ಮೇಲೆ ನಾಟಿ ಈರುಳ್ಳಿ ಬಳಕೆ ಕಡಿಮೆಯಾಗಿದೆ. ಇದಕ್ಕೆ ನಾಟಿ ಈರುಳ್ಳಿಗೆ ಹೆಚ್ಚು ಬೆಲೆ ಇರುವುದೂ ಒಂದು ಕಾರಣ ಇರಬಹುದು. ಆದರೆ ತಾಲ್ಲೂಕಿನ ಗಡಿ ಗ್ರಾಮಗಳಲ್ಲಿ ದೊಡ್ಡ ಈರುಳ್ಳಿ ಬಳಕೆ ಅಪರೂಪ. ಬೆಲೆ ಎಷ್ಟಾದರೂ ನಾಟಿ ಈರುಳ್ಳಿ ಖರೀದಿಸಿ ತಿನ್ನುವುದು ರೂಢಿ.

ಹಿಂದೆ ಈ ಭಾಗದಲ್ಲಿ ಪ್ರತಿ ಕುಟುಂಬವೂ ಮನೆಗೆ ಅಗತ್ಯವಾದ ಈರುಳ್ಳಿ, ಬೆಳ್ಳುಳ್ಳಿ, ಕೊತ್ತಂಬರಿ, ಮೆಣಸಿನಕಾಯಿ ಬೆಳೆಯುತ್ತಿತ್ತು. ಮನೆಗೆ ಆಗಿ ಉಳಿದರೆ ಮಾತ್ರ ಸಮೀಪದ ಸಂತೆಗೆ ಕೊಂಡೊಯ್ದು ಮಾರುತ್ತಿದ್ದರು. ನೆಂಟರಿಷ್ಟರಿಗೂ ಕಳಿಸಿಕೊಡುತ್ತಿದ್ದರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ನೀರಿನ ಕೊರತೆ ಕಾಣಿಸಿಕೊಂಡಿದೆ. ನೀರಿನ ಆಸರೆ ಉಳ್ಳವರು ಮಾತ್ರ ತೋಟ ಮಾಡುತ್ತಿದ್ದಾರೆ. ಉಳಿದವರು ಗ್ರಾಹಕರಾಗಿ ಮಾರ್ಪಟ್ಟಿದ್ದಾರೆ.

ಆದರೂ ಈ ಭಾಗದಲ್ಲಿ ಸಾಂಪ್ರದಾಯಿಕ ತೋಟಗಾರಿಕೆ ಇನ್ನೂ ಮುಂದುವರಿದಿರುವುದು ವಿಶೇಷ. ಬದನೆ, ಹೀರೆ, ಬೆಂಡೆ, ತೊಂಡೆ, ಹುರುಳಿಕಾಯಿ, ಕೊತ್ತಂಬರಿ, ಈರುಳ್ಳಿ, ಬೆಳ್ಳುಳ್ಳಿ, ಟೊಮೆಟೊ, ಸೊಪ್ಪು ಹೀಗೆ ಯಾವುದೇ ತರಕಾರಿಯಾದರೂ ನಾಟಿ ಇರಬೇಕು. ಮಾರುವುದಕ್ಕೆ ಅಲ್ಲದಿದ್ದರೂ ಮನೆ ಬಳಕೆಗೆ ಬೆಳೆಯಲಾಗುತ್ತಿದೆ. ನಾಟಿ ತರಕಾರಿ ರುಚಿಗೆ ಒಗ್ಗಿಹೋಗಿರುವ ಇಲ್ಲಿನ ಜನ ಹೈಬ್ರೀಡ್ ತಳಿಗಳ ಭರಾಟೆ ನಡುವೆಯೂ ದೇಸಿ ತರಕಾರಿ ತಳಿಗಳನ್ನು ಉಳಿಸಿಕೊಂಡಿದ್ದಾರೆ.

ಈರುಳ್ಳಿ ಹಾಗೂ ಬೆಳ್ಳುಳ್ಳಿಯನ್ನು ಸಾಂಪ್ರದಾಯಿಕ ಪದ್ಧತಿಯಲ್ಲೇ ಹೆಚ್ಚು ಕಾಲ ಸಂರಕ್ಷಣೆ ಮಾಡುತ್ತಾರೆ. ಈರುಳ್ಳಿ ಅಥವಾ ಬೆಳ್ಳುಳ್ಳಿಯನ್ನು ಕಿತ್ತಮೇಲೆ ದಂಟು ಕೊಯ್ಯದೆ ನೆರಳಿನಲ್ಲಿ ಹರಡಿ ಒಣಗಿಸುತ್ತಾರೆ. ದಂಟು ಬಾಡಿದ ಮೇಲೆ ಅದನ್ನು ಗೊಂಚಲು ಕಟ್ಟಿ, ಗೊಂಚಲುಗಳನ್ನು ಮನೆ ಒಳಗೆ ಅಥವಾ ಹೊರಗೆ ಸ್ವಲ್ಪ ಎತ್ತರದಲ್ಲಿ ಕಟ್ಟಿದ ದಾರದ ಮೇಲೆ ಹಾಕಿ ಬಿಡುತ್ತಾರೆ. ಹೀಗೆ ಮಾಡುವುದರಿಂದ ಬೇಗ ಮೊಳಕೆ ಒಡೆಯುವುದಿಲ್ಲ. ಮನೆಗೆ ಬೇಕಾದಾಗ ಒಂದು ಕಟ್ಟನ್ನು ಬಿಡಿಸಿಕೊಂಡು ಬಳಸುತ್ತಾರೆ.

ಮಾರಬೇಕಾದಾಗ ಅಥವಾ ನಾಟಿ ಮಾಡಬೇಕಾದ ಸಂದರ್ಭದಲ್ಲಿ ಒಣಗಿದ ದಂಟನ್ನು ಕೊಯ್ಯಲಾಗುತ್ತದೆ. ದಂಟು ಕೊಯ್ದ ಈರುಳ್ಳಿ ಹೆಚ್ಚು ಕಾಲ ಉಳಿಯುವುದಿಲ್ಲ. ಕೆಡುತ್ತದೆ ಅಥವಾ ಮೊಳಕೆ ಬಂದು ಹಾಳಾಗುತ್ತದೆ. ಕಾಯ್ದಿಡುವ ಈ ಸರಳ ವಿಧಾನ ತೀರಾ ಹಳೆಯದಾದರೂ ಇನ್ನೂ ಆಚರಣೆಯಲ್ಲಿದೆ. ಬಿತ್ತನೆ ಕಾಳನ್ನು ಚೆನ್ನಾಗಿ ಒಣಗಿಸಿ ಮಣ್ಣಿನ ಮಡಕೆಯಲ್ಲಿ ಕಾಪಿಡುವ ಪದ್ಧತಿಯೂ ಜಾಲ್ತಿಯಲ್ಲಿದೆ. ಮುಂಗಾರಿನಲ್ಲಿ ತೃಣ ಧಾನ್ಯಗಳನ್ನೂ ಬೆಳೆಯಲಾಗುತ್ತಿದೆ ಇದು ಗುಡ್ಡಗಾಡು ಪ್ರದೇಶದ ಕೃಷಿಕರ ದೇಸಿ ಪ್ರೀತಿಯ ಫಲ ಎಂದರೆ ತಪ್ಪಾಗಲಾರದು.

ಪಟ್ಟಣಗಳಿಂದ ದೂರದ ಗಡಿ ಗ್ರಾಮಗಳ ಜನ ಇಂದೂ ಮಾಂಸಕ್ಕಾಗಿ ನಾಟಿ ಕೋಳಿಯನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ. ಹಾಗಾಗಿ ಉತ್ತಮ ತಳಿಯ ನಾಟಿ ಕೋಳಿ ಇಲ್ಲಿ ಸಿಗುತ್ತದೆ. ಹಂದಿ, ಕುರಿ ಮಾಂಸ ವಿಶೇಷ ಸಂದರ್ಭಕ್ಕೆ ಮೀಸಲು. ಇಲ್ಲಿನ ಆಳವಾದ ಪುಟ್ಟ ಕೆರೆಗಳಲ್ಲಿ ಇನ್ನೂ ನಾಟಿ ಮೀನಿನ ಸಂತತಿ ಇದೆ. ಕೊಡದನ, ಮಾರವ, ಚೇಳು, ಜಲ್ಲೆ, ಉಣಸೆ ಮುಂತಾದ ಮೀನು ಪ್ರಭೇದಗಳು ಜೀವಂತವಾಗಿವೆ. ದೇಸಿಪ್ರಿಯ ದೇಶವಾಸಿಗಳು ಹೆಚ್ಚಿದರೆ ರುಚಿಕರ ನಾಟಿ ಬೆಳೆ ಉಳಿಯಲು ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.