ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲ್ಮೀಕಿ ಭವನ ಜಾಗದ ಒತ್ತುವರಿ ತೆರವು, ಶೆಡ್‌ ನೆಲಸಮ

ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಾರ್ಯಾಚರಣೆ
Last Updated 20 ಅಕ್ಟೋಬರ್ 2018, 12:42 IST
ಅಕ್ಷರ ಗಾತ್ರ

ಕೋಲಾರ: ನಗರದ ಆರ್.ಜಿ ಲೇಔಟ್‌ನಲ್ಲಿ ವಾಲ್ಮೀಕಿ ಭವನಕ್ಕೆ ಮೀಸಲಿಟ್ಟಿದ್ದ ಜಾಗದ ಒತ್ತುವರಿಯನ್ನು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ನೇತೃತ್ವದಲ್ಲಿ ಶನಿವಾರ ತೆರವುಗೊಳಿಸಲಾಯಿತು.

ಕಂದಾಯ ಇಲಾಖೆಯು ವಾಲ್ಮೀಕಿ ಭವನ ನಿರ್ಮಾಣಕ್ಕಾಗಿ ವಾರ್ಡ್‌ 7ರ ವ್ಯಾಪ್ತಿಯ ಆರ್‌.ಜಿ ಲೇಔಟ್‌ನಲ್ಲಿ 22 ಗುಂಟೆ ಜಾಗ ಮಂಜೂರು ಮಾಡಿತ್ತು. ಈ ಪೈಕಿ 2 ಗುಂಟೆ ಜಾಗವನ್ನು ಸಮೀಪದಲ್ಲೇ ನಿರ್ಮಾಣವಾಗುತ್ತಿರುವ ಕಲ್ಯಾಣ ಮಂಟಪದ ಮಾಲೀಕ ಅತಾವುಲ್ಲಾ ಒತ್ತುವರಿ ಮಾಡಿ ಶೆಡ್‌ ಮತ್ತು ತಡೆಗೋಡೆ (ಕಾಂಪೌಂಡ್‌) ನಿರ್ಮಿಸಿದ್ದರು.

ಈ ಸಂಬಂಧ ವಾಲ್ಮೀಕಿ ಸಮುದಾಯದ ಮುಖಂಡರು, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯ ಎನ್.ಅಂಬರೀಶ್ ಜಿಲ್ಲಾಧಿಕಾರಿಗೆ ದೂರು ನೀಡಿ ಒತ್ತುವರಿ ತೆರವುಗೊಳಿಸುವಂತೆ ಮನವಿ ಮಾಡಿದ್ದರು.

ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಯು ವಾಲ್ಮೀಕಿ ಭವನದ ಜಾಗವನ್ನು ಸರ್ವೆ ಮಾಡಿ ಗಡಿ ಗುರುತಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು. ಈ ಸೂಚನೆ ಅನ್ವಯ ಅಧಿಕಾರಿಗಳು ಸರ್ವೆ ಮಾಡಿದಾಗ 2 ಗುಂಟೆ ಜಾಗ ಒತ್ತುವರಿಯಾಗಿರುವುದು ಗೊತ್ತಾಗಿತ್ತು. ಈ ಬಗ್ಗೆ ಅಧಿಕಾರಿಗಳು ಜಿಲ್ಲಾಧಿಕಾರಿಗೆ ವರದಿ ನೀಡಿದ್ದರು.

ಈ ವರದಿ ಆಧರಿಸಿ ಬೆಳಿಗ್ಗೆ ಪೊಲೀಸ್‌ ಭದ್ರತೆಯಲ್ಲಿ ಕಾರ್ಯಾಚರಣೆಗೆ ಇಳಿದ ಜಿಲ್ಲಾಧಿಕಾರಿಯು ಜೆಸಿಬಿ ವಾಹನಗಳಿಂದ ಒತ್ತುವರಿ ಜಾಗದಲ್ಲಿನ ಶೆಡ್‌ ಮತ್ತು ತಡೆಗೋಡೆಯನ್ನು ತೆರವು ಮಾಡಿಸಿದರು. ಬಳಿಕ ಸಿಬ್ಬಂದಿಯು ಒತ್ತುವರಿಯಾಗಿದ್ದ ಜಾಗಕ್ಕೆ ತಂತಿ ಬೇಲಿ ಹಾಕಿದರು.

ಒತ್ತುವರಿ ದೃಢಪಟ್ಟಿತ್ತು: ಒತ್ತುವರಿ ತೆರವು ಕಾರ್ಯಾಚರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ, ‘ವಾಲ್ಮೀಕಿ ಭವನಕ್ಕೆ ಮೀಸಲಿದ್ದ ಜಾಗ ಒತ್ತುವರಿಯಾಗಿರುವ ಸಂಗತಿಯನ್ನು ಸಮುದಾಯದ ಮುಖಂಡರು ಗಮನಕ್ಕೆ ತಂದು ತೆರವುಗೊಳಿಸುವಂತೆ ಮನವಿ ಮಾಡಿದ್ದರು. ಆ ಜಾಗ ಸರ್ವೆ ಮಾಡಿದಾಗ ಒತ್ತುವರಿ ಆಗಿರುವುದು ದೃಢಪಟ್ಟಿತ್ತು. ಹೀಗಾಗಿ ಒತ್ತುವರಿ ತೆರವುಗೊಳಿಸಲಾಗಿದೆ’ ಎಂದು ತಿಳಿಸಿದರು.

‘ಈ ಹಿಂದೆ ಸಹ ವಾಲ್ಮೀಕಿ ಸಮುದಾಯದ ಮುಖಂಡರು ಒತ್ತುವರಿ ಸಂಬಂಧ ಹಲವು ಬಾರಿ ಕಂದಾಯ ಇಲಾಖೆಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ಸರ್ವೆ ಮಾಡಿ ಒತ್ತುವರಿದಾರನಿಗೆ ನೋಟಿಸ್‌ ಜಾರಿ ಮಾಡಿದ್ದರು. ಆದರೆ, ಆತ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಹೀಗಾಗಿ ಒತ್ತುವರಿ ತೆರವು ಮಾಡಿಸಿ ಸುತ್ತಲೂ ಕಾಪೌಂಡ್ ನಿರ್ಮಿಸುವಂತೆ ಸೂಚಿಸಲಾಗಿದೆ’ ಎಂದು ಹೇಳಿದರು.

ತಹಶೀಲ್ದಾರ್ (ಪ್ರಭಾರ) ನಾಗವೇಣಿ ಹಾಗೂ ಪೊಲೀಸ್‌ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT