ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಕೋವಿಡ್‌-19ಗೆ ಜಿಲ್ಲೆಯಲ್ಲಿ ಮತ್ತೊಂದು ಬಲಿ

ಎರಡಕ್ಕೇರಿದ ಸಾವಿನ ಸಂಖ್ಯೆ
Last Updated 2 ಜುಲೈ 2020, 14:42 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯಲ್ಲಿ ಕೋವಿಡ್‌-19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಗುರುವಾರ ಮತ್ತೋರ್ವ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದಾರೆ.

ಕೊಪ್ಪಳ ನಗರದ ದಿವಟರ ಓಣಿಯ ರೋಗಿ ಸಂಖ್ಯೆ 16430 ಎಂಬ 49 ವರ್ಷದ ಪುರುಷ ಸಾವನ್ನಪ್ಪಿದ್ದಾರೆ. ಜೂ.28 ರಂದು ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಇವರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ವರದಿಯಲ್ಲಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಕೋವಿಡ್ ಸೋಂಕು ಹೆಚ್ಚಾಗಿ ಹರಡಿದ್ದು, ಶ್ವಾಸಕೋಶ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಿಸದೇ ಅವರು ಗುರುವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.

ಪ್ರಸ್ತುತ ಇವರು ವಾಸಿಸುತ್ತಿದ್ದ ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಅಧಿಕಾರಿಗಳು ಸೀಲ್‌ಡೌನ್ ಮಾಡಿದ್ದಾರೆ. ಇದರಿಂದಾಗಿ ನಗರದ ಜನತೆ ಆತಂಕದಲ್ಲಿದ್ದಾರೆ. ಇದು ಕೋವಿಡ್‌-19 ಸೋಂಕಿಗೆ ಬಲಿಯಾದ ಎರಡನೇ ಪ್ರಕರಣವಾಗಿದೆ. ಜಿಲ್ಲೆಯಲ್ಲಿ ಈವರೆಗೂ 97 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು ಶತಕದ ಹೊಸ್ತಿಲಲ್ಲಿದೆ. ಇವರಲ್ಲಿ ಚಿಕಿತ್ಸೆ ಬಳಿಕ ಗುಣಮುಖರಾದ 41 ಜನರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ 54 ಸಕ್ರೀಯ ಪ್ರಕರಣಗಳಿವೆ.

ಸೋಂಕಿತ ವಿದ್ಯಾರ್ಥಿನಿಯ ಪ್ರಾಥಮಿಕ ಸೋಂಕಿತರ ವರದಿ ನೆಗೆಟಿವ್‌

ಜಿಲ್ಲೆಯ ಕಾರಟಗಿ ಪಟ್ಟಣದ ಬಸವೇಶ್ವರ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದ ಕೋವಿಡ್‌-19 ಸೋಂಕಿತ ವಿದ್ಯಾರ್ಥಿನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಪ್ರಾಥಮಿಕ ಸಂಪರ್ಕಿತರ ವರದಿಗಳು ನೆಗೆಟಿವ್‌ ಬಂದಿವೆ.

ವಿದ್ಯಾರ್ಥಿನಿಗೆ ಸೋಂಕು ತಗುಲಿರುವುದು ದೃಢಪಡುತ್ತಿದ್ದಂತೆ ಜಿಲ್ಲಾಡಳಿತದಿಂದ ಕೇಂದ್ರದಲ್ಲಿದ್ದ 17 ಜನ ವಿದ್ಯಾರ್ಥಿಗಳು ಹಾಗೂ 4 ಜನ ರೂಮ್‌ ಸೂಪರ್‌ವೈಸರ್‌ಗಳನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಅಲ್ಲದೆ ಅವರ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಗುರುವಾರ ಮಾದರಿಯ ಫಲಿತಾಂಶ ಹೊರಬಂದಿದ್ದು, ಎಲ್ಲ ವರದಿಗಳು ನೆಗೆಟಿವ್‌ ಬಂದಿವೆಎಂದು ಜಿಲ್ಲಾಧಿಕಾರಿ ಸುರಳ್ಕರ್‌ ವಿಕಾಸ್‌ ಕಿಶೋರ್‌ ತಿಳಿಸಿದ್ದಾರೆ.ಇದರಿಂದಾಗಿ ಸಾಕಷ್ಟು ಆತಂಕಕ್ಕೀಡಾಗಿದ್ದ ವಿದ್ಯಾರ್ಥಿಗಳು ವರದಿ ನೆಗೆಟಿವ್‌ ಬಂದ ಹಿನ್ನೆಲೆಯಲ್ಲಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT