ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಢ್ಯಗಳಿಗೆ ಸೆಡ್ಡು ಹೊಡೆದ ಬಸವಣ್ಣ

36ನೇ ಶರಣಮೇಳ ಪ್ರಚಾರ ಕಾರ್ಯಕ್ರಮ: ಮಾತೆ ಗಂಗಾದೇವಿ ಹೇಳಿಕೆ
Last Updated 28 ನವೆಂಬರ್ 2022, 5:28 IST
ಅಕ್ಷರ ಗಾತ್ರ

ಕೊಪ್ಪಳ: ಸಂಪ್ರದಾಯವಾದಿಗಳ ಪ್ರಬಲ ವಿರೋಧದ ನಡುವೆಯೂ ಮೌಢ್ಯಗಳು ಹಾಗೂ ಕಂದಾಚಾರಗಳಿಗೆ ಸೆಡ್ಡು ಹೊಡೆದ ಬಸವಣ್ಣನವರು ಸಮಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂದು ಕೂಡಲ ಸಂಗಮದ ಬಸವಧರ್ಮ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಹೇಳಿದರು.

ಇಲ್ಲಿನ ವಿಶ್ವಗುರು ಬಸವೇಶ್ವರ ಟ್ರಸ್ಟ್, ರಾಷ್ಟ್ರೀಯ ಬಸವದಳ, ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಸಮಿತಿ, ಅಖಿಲ ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ವೇದಿಕೆ ಸಹಯೋಗದಲ್ಲಿ ಗುರುಬಸವ ಮಹಾಮನೆಯಲ್ಲಿ ಭಾನು ವಾರ ನಡೆದ 36ನೇ ಶರಣಮೇಳ ಪ್ರಚಾರ ಕಾರ್ಯಕ್ರಮದಲ್ಲಿ ಮಾತ ನಾಡಿ, ಒಂದೊಂದು ಸಮಾಜದ ಮಹಾ ಪುರುಷರು ಏಕಾಂತವಾಗಿ ಸಾಕ್ಷಾತ್ಕಾರ ಪಡೆದರೆ, ಬಸವಣ್ಣನವರು ಸಾವಿರಾರು ಜನರ ನಡುವೆ ಸಾಕ್ಷಾತ್ಕಾರ ಸಂಪಾದನೆ ಮಾಡಿದರು. ಎರಡು ನದಿಗಳು ಕೂಡುವ ಸಂಗಮದ ನೀರಿನಲ್ಲಿ ಮುಳುಗಿದಾಕ್ಷಣ ಪಾಪಗಳು ಕಳೆಯುವುದಿಲ್ಲ. 21ನೇ ಶತಮಾನದಲ್ಲಿಯೂ ಜನರಲ್ಲಿ ಮೌಢ್ಯ ಕಡಿಮೆಯಾಗಿಲ್ಲ ಎಂದರು.

ಎಲ್ಲರೂ ಬಸವ ಜಯಂತಿ, ಬಸವ ಪಂಚಮಿ ಮತ್ತು ಸಾಕ್ಷಾತ್ಕಾರ ದಿನಗಳನ್ನು ಕಡ್ಡಾಯವಾಗಿ ಆಚರಿಸಬೇಕು. ಬಸವಣ್ಣ ನವರು ಹುಟ್ಟಿದ ದಿನಕ್ಕಿಂತ ಅವರ ಲಿಂಗೈಕ್ಯರಾದ ದಿನವನ್ನು ಅದ್ದೂರಿಯಾಗಿ ಆಚರಣೆ ಮಾಡಬೇಕು. ನೀವೆಲ್ಲರೂ ಮೌಢ್ಯದ ಜಾಡಿನಿಂದ ಹೊರಬರಬೇಕು. ಭಕ್ತರಿಂದಲೇ ನೇರವಾಗಿ ದೇವರ ಪೂಜೆ ಮಾಡಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲಬೇಕು. ಈ ಎಲ್ಲಾ ಕಾರಣಗಳಿಂದಾಗಿ ಕೂಡಲಸಂಗಮದಲ್ಲಿ ನಡೆಯುವ ಶರಣ ಮೇಳ ಬಹಳಷ್ಟು ಮಹತ್ವ ಪಡೆದುಕೊಂಡಿದೆ. ಈ ಮೇಳದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಆಹ್ವಾನ ನೀಡಿದರು.

ಸಮಾಜದ ಮುಖಂಡ ಶಿವಕುಮಾರ ಕುಕನೂರು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕೊಪ್ಪಳದಲ್ಲಿ ಎಲ್ಲ ಬಸವತತ್ವ ಸಂಘಟನೆಗಳು ಒಂದಾಗಿವೆ. ಮುಂದೆಯೂ ಒಗ್ಗಟ್ಟಾಗಿ ಸಮಾಜದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಹೋಗಲಾಗುವುದು ಎಂದರು.

ಜಿಲ್ಲಾ ಬಸವ ಸಮಿತಿ ಅಧ್ಯಕ್ಷ ಬಸವರಾಜ ಬಳ್ಳೊಳ್ಳಿ ಮಾತನಾಡಿ, ನಮ್ಮೆಲ್ಲರ ನಡುವಿನ ಭಿನ್ನಾಭಿಪ್ರಾಯ ಬದಿಗಿಟ್ಟು ಎಲ್ಲರೂ ಒಂದಾಗಬೇಕು. ಶರಣರಿಗಾಗಿ ಶರಣರೇ ಹಮ್ಮಿಕೊಳ್ಳುವ ಕಾರ್ಯಕ್ರಮ ಶರಣ ಮೇಳವಾಗಿದೆ. ಪ್ರಸಕ್ತ ಕಾಲಕ್ಕೆ ಮೇಳ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಅನಿನಿಸಾನಂದ ಸ್ವಾಮೀಜಿ, ವಿಶ್ವಗುರು ಬಸವೇಶ್ವರ ಟ್ರಸ್ಟ್‌ನ ಗುಡದಪ್ಪ ಹಡಪದ, ಕಾರ್ಯದರ್ಶಿ ರಾಜೇಶ ಸಸಿಮಠ, ಗೌರವಾಧ್ಯಕ್ಷ ಎಂ. ಬಸವರಾಜಪ್ಪ, ರಾಷ್ಟ್ರೀಯ ಬಸವದಳ ಗುಳೆ ಗ್ರಾಮದ ಗೌರವಾಧ್ಯಕ್ಷ ಬಸವನಗೌಡ ಪಾಟೀಲ, ಜಾಗತಿಕ ಲಿಂಗಾಯತ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ದಾನಪ್ಪ ಶೆಟ್ಟರ, ಕದಳಿ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷೆ, ನಿರ್ಮಲಾ ಬಳ್ಳೊಳ್ಳಿ, ರಾಷ್ಟ್ರೀಯ ಬಸವದಳ ಕೊಪ್ಪಳದ ಮುಖ್ಯಸ್ಥ ಶಿವಬಸವಯ್ಯ ವೀರಾಪುರ, ಬಸವರತ್ನ ಮಾತಾಜಿ, ಎಂ.ಬಸವರಾಜ, ಬಸನಗೌಡ ಪೊಲೀಸ್‌ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT