ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ: ಯುವನಿಧಿಗೆ 4,600 ಯುವಜನತೆ ಅರ್ಹ

Published 14 ಜನವರಿ 2024, 6:18 IST
Last Updated 14 ಜನವರಿ 2024, 6:18 IST
ಅಕ್ಷರ ಗಾತ್ರ

ಕೊಪ್ಪಳ: ಚುನಾವಣಾ ಪೂರ್ವದಲ್ಲಿ ರಾಜ್ಯ ಕಾಂಗ್ರೆಸ್‌ ಘೋಷಣೆ ಮಾಡಿದ್ದ ಗ್ಯಾರಂಟಿ ಸೌಲಭ್ಯಗಳಲ್ಲಿ ಒಂದಾದ ಯುವನಿಧಿ ಪಡೆದುಕೊಳ್ಳಲು ಜಿಲ್ಲೆಯಲ್ಲಿ ಅಂದಾಜು 4,600 ಜನ ಯುವಜನತೆ ಅರ್ಹತೆ ಹೊಂದಿದ್ದಾರೆ.

ಅರ್ಹ ಪದವೀಧರರಿಗೆ ಮಾಸಿಕ ₹3,000 ಹಾಗೂ ಡಿಪ್ಲೊಮೊ ಪೂರ್ಣಗೊಳಿಸಿದವರಿಗೆ ₹1,500 ಮಾಸಿಕ ನಿರುದ್ಯೋಗ ಭತ್ಯೆ ಕೊಡುವ ಯೋಜನೆ ಇದಾಗಿದೆ. ಮಾಹಿತಿ ಸಂಗ್ರಹ ಹಾಗೂ ಪ್ರಚಾರದ ಹೊಣೆ ಹೊತ್ತಿರುವ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಜಿಲ್ಲೆಯಲ್ಲಿ ಯುವನಿಧಿಗೆ ಅರ್ಹ ಪದವೀಧರರ ಮಾಹಿತಿಯನ್ನು ಕಲೆ ಹಾಕಿದೆ. ಶುಕ್ರವಾರದ ಅಂತ್ಯಕ್ಕೆ 2,175 ಯುವಜನತೆ ಈ ‘ಗ್ಯಾರಂಟಿ’ಗೆ ಹೆಸರು ನೋಂದಾಯಿಸಿದ್ದಾರೆ.

ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ಪ್ರವೇಶ ಪಡೆದು ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಮಾಹಿತಿಯನ್ನು ಇಲಾಖೆ ಕಲೆಹಾಕಿದ್ದು, ಇದಕ್ಕಾಗಿ ಆಯಾ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯದಿಂದ ಮಾಹಿತಿಯನ್ನೂ ಬಳಸಿಕೊಂಡಿದೆ.

ಯೋಜನೆ ಅನುಷ್ಠಾನಕ್ಕೆ ಶುಕ್ರವಾರ ಶಿವಮೊಗ್ಗದಲ್ಲಿ ಚಾಲನೆ ಲಭಿಸಿದ್ದು ಸ್ಪಷ್ಟವಾಗಿ ಎಷ್ಟು ಜನ ನಿರುದ್ಯೋಗಿಗಳಿಗೆ ಈ ಸೌಲಭ್ಯ ಲಭಿಸುತ್ತದೆ ಎನ್ನುವುದರ ಬಗ್ಗೆ ಜಿಲ್ಲಾಮಟ್ಟದಲ್ಲಿ ನಿಶ್ಚಿತ ಅಂಕಿಅಂಶವಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ಈಗ ರಾಷ್ಟ್ರೀಯ ಶೈಕ್ಷಣಿಕ ಠೇವಣಿ (ಎನ್‌ಎಡಿ) ಎನ್ನುವ ಪೋರ್ಟಲ್‌ನಲ್ಲಿ ರಾಜ್ಯದ ಸಮಗ್ರ ವಿದ್ಯಾರ್ಥಿಗಳ ಮಾಹಿತಿಯನ್ನು ದಾಖಲಿಸಿ ಇದನ್ನು ಆಯಾ ಜಿಲ್ಲಾವಾರು ಕೌಶಲ ಇಲಾಖೆಗೆ ಶೀಘ್ರದಲ್ಲಿಯೇ ಹಂಚಿಕೆ ಮಾಡಿದ ಬಳಿಕ ನಿಖರ ಅರ್ಹ ಯುವಜನತೆಗೆಯ ಮಾಹಿತಿ ಲಭ್ಯವಾಗುತ್ತದೆ.

ಯುವನಿಧಿ ಸೌಲಭ್ಯ ಪಡೆದುಕೊಳ್ಳಬೇಕಾದವರು 2023ರಲ್ಲಿ ಪದವಿ ಅಥವಾ ಡಿಪ್ಲೋಮಾ ಉತ್ತೀರ್ಣರಾಗಿ ಕನಿಷ್ಠ ಆರು ತಿಂಗಳಾಗಿರಬೇಕು. ಸರ್ಕಾರಿ ಅಥವಾ ಖಾಸಗಿ ಉದ್ಯೋಗ ಮಾಡುತ್ತಿರಬಾರದು. ಸ್ವಯಂ ಉದ್ಯೋಗ ಮಾಡುವವರು ಹಾಗೂ ಉನ್ನತ ವ್ಯಾಸಂಗಕ್ಕೆ ತೆರಳುವವರು ಇದಕ್ಕೆ ಅರ್ಹರಲ್ಲ ಎಂದು ಸರ್ಕಾರವೇ ನಿರ್ಬಂಧ  ಹಾಕಿದೆ. ಅರ್ಹರು ಹೆಸರು ನೋಂದಾಯಿಸಲು ಸದ್ಯಕ್ಕೆ ಅಂತಿಮ ದಿನಾಂಕ ನಿಗದಿ ಮಾಡಿಲ್ಲ.

ದೃಢೀಕರಣ ಕಡ್ಡಾಯ:

ಸರ್ಕಾರದ ಈ ಸೌಲಭ್ಯ ಪಡೆದುಕೊಂಡವರಿಗೆ ನೌಕರಿ ಲಭಿಸಿದರೆ ಎರಡು ವರ್ಷಗಳ ತನಕ ಇದರ ಅನುಕೂಲ ಲಭಿಸಲಿದೆ. ಈ ಅವಧಿಯಲ್ಲಿ ನೌಕರಿ ಲಭಿಸಿದರೆ ಆಗಿನಿಂದಲೇ ಯುವನಿಧಿ ಪಡೆದುಕೊಳ್ಳುವುದಿಲ್ಲ ಎಂದು ಬೇಷರತ್‌ ಸ್ವಯಂ ದೃಢೀಕರಣವನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಇಲ್ಲವಾದರೆ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಕೆ ನೀಡಿದೆ.

ಚುನಾವಣಾ ಪೂರ್ವದಲ್ಲಿ ರಾಜ್ಯ ಕಾಂಗ್ರೆಸ್‌ ಘೋಷಿಸಿದ್ದ ಗ್ಯಾರಂಟಿ ಯೋಜನೆ ರಾಷ್ಟ್ರೀಯ ಶೈಕ್ಷಣಿಕ ಠೇವಣಿ ಪೋರ್ಟಲ್‌ ಮೊರೆ ಶಿವಮೊಗ್ಗದಲ್ಲಿ ಶುಕ್ರವಾರ ಆರಂಭವಾದ ಯುವನಿಧಿ
ಸೌಲಭ್ಯ ಬಳಸಿಕೊಳ್ಳಲು ಮನವಿ
ಯುವನಿಧಿ ಯೋಜನೆಯ ನೋಂದಣಿ ಆರಂಭವಾಗಿದ್ದು ಅರ್ಹ ಯುವಜನತೆ ಇದರ ಸೌಲಭ್ಯ ಬಳಸಿಕೊಳ್ಳಬೇಕು. ಅರ್ಜಿ ಸಲ್ಲಿಸಿದರೆ ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಜಮೆಯಾಗುತ್ತದೆ ಎಂದು ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಪ್ರಾಣೇಶ್ ತಿಳಿಸಿದ್ದಾರೆ. ‘ಅರ್ಹರು https://sevasindhugs. karnataka.gov.in ಹೆಸರು ನೋಂದಾಯಿಸಬಹುದು. ಉಚಿತವಾಗಿ ಕರ್ನಾಟಕ ಒನ್ ಗ್ರಾಮ ಒನ್ ಮತ್ತು ಬಾಪೂಜಿ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ಸ್ವಯಂ ಘೋಷಿತ ನಿರುದ್ಯೋಗ ಪ್ರಮಾಣ ಪತ್ರ ದೃಢಿಕರಣ ಕಡ್ಡಾಯವಾಗಿದೆ. ಇನ್ನಷ್ಟು ಮಾಹಿತಿಗಾಗಿ ಸಹಾಯವಾಣಿ 18005999918 ಸಂಪರ್ಕಿಸಬಹುದು’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT