ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ: ಐದು ವರ್ಷಗಳಲ್ಲಿ 219 ಬಾಲ ಗರ್ಭಿಣಿಯರು!

ಪ್ರತಿ ವರ್ಷ ಏರುತ್ತಲೇ ಇದೆ ಗ್ರಾಫ್‌, ಜಿಲ್ಲೆಯಲ್ಲಿ ಆತಂಕಕಾರಿ ಬೆಳವಣಿಗೆ
Published 29 ಡಿಸೆಂಬರ್ 2023, 5:47 IST
Last Updated 29 ಡಿಸೆಂಬರ್ 2023, 5:47 IST
ಅಕ್ಷರ ಗಾತ್ರ

ಕೊಪ್ಪಳ: ಹಿಂದಿನ ಐದು ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಬಾಲಕಿಯರು ಹೆಚ್ಚಿನ ಪ್ರಮಾಣದಲ್ಲಿ ಗರ್ಭಿಣಿಯರಾಗುತ್ತಿರುವ ಆತಂಕಕಾಗಿ ಬೆಳವಣಿಗೆ ನಡೆಯುತ್ತಲೇ ಇದ್ದು, ಇದು ಈ ವರ್ಷದಲ್ಲಿ ಮತ್ತಷ್ಟು ಏರಿಕೆಯಾಗಿದೆ.

2023–24ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 66 ಜನ ಬಾಲಕಿಯರು ಗರ್ಭಿಣಿಯರಾಗಿದ್ದು, ಗಂಗಾವತಿ ತಾಲ್ಲೂಕು ಒಂದರಲ್ಲಿಯೇ 28 ಪ್ರಕರಣಗಳು ಪತ್ತೆಯಾಗಿವೆ. ಕಳೆದ ವರ್ಷ ಒಟ್ಟು 49 ಪ್ರಕರಣಗಳಿದ್ದವು.

ಇಂಥ ಆತಂಕಕಾರಿ ವಿಚಾರ ಜಿಲ್ಲೆಯ ಆರೋಗ್ಯ ಇಲಾಖೆಯ ಆರ್‌ಸಿಎಚ್‌ (ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ) ಪೋರ್ಟಲ್‌ನಲ್ಲಿ ದಾಖಲಾಗಿದೆ. ಗರ್ಭಿಣಿಯರು ತಾಯಿ ಕಾರ್ಡ್ ಪಡೆಯಲು ಬಂದಾಗ ಅವರ ವಯಸ್ಸು ತಿಳಿಯುತ್ತದೆ. ಆಗ ಇಂಥ ಪ್ರಕರಣಗಳು ಬಯಲಿಗೆ ಬರುತ್ತಿವೆ.

18 ವರ್ಷದೊಳಗಿನ ಗರ್ಭಿಣಿಯರ ಪ್ರಕರಣ ನೋಂದಾಯಿಸಿಕೊಳ್ಳುತ್ತಿರುವ ಆರೋಗ್ಯ ಇಲಾಖೆ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪೊಲೀಸರಿಗೆ ಮಾಹಿತಿ ಕೊಡುತ್ತಿದ್ದಾರೆ. ಪೋಕ್ಸೊ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗುತ್ತಿವೆ. ಹಲವು ಬಾರಿ ಜಿಲ್ಲೆಯ ವಿವಿಧೆಡೆ ಬಾಲ್ಯವಿವಾಹ ಆಯೋಜನೆ ಮಾಡಿದ ಕುರಿತು ಮಾಹಿತಿ ಬಂದ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಮದುವೆ ನಿಲ್ಲಿಸಿ ಅಲ್ಲಿಗೆ ಪ್ರಕರಣ ಕೈ ಬಿಡುತ್ತಾರೆ. ಬಳಿಕ ಬಾಲಕಿಯ ಕಡೆಗೆ ಗಮನಹರಿಸದೆ ಇರುವುದು ಇಂಥ ಘಟನೆ ನಡೆಯಲು ಕಾರಣವಾಗುತ್ತಿದೆ ಎನ್ನುವ ಆರೋಪವೂ ಇದೆ.

ಹಿಂದಿನ ಐದು ವರ್ಷಗಳ ಅವಧಿಯಲ್ಲಿ 2019–20ರಲ್ಲಿ ಗಂಗಾವತಿ ತಾಲ್ಲೂಕಿನಲ್ಲಿ ಆರು, ಮುಂದಿನ ಮೂರು ವರ್ಷಗಳಲ್ಲಿ ಕ್ರಮವಾಗಿ 2, 10 ಹಾಗೂ ಒಂಬತ್ತು ಪ್ರಕರಣಗಳು ವರದಿಯಾಗಿದ್ದವು. ಇದೇ ಮೊದಲ ಬಾರಿಗೆ ಗರಿಷ್ಠ 28 ಪ್ರಕರಣಗಳು ದಾಖಲಾಗಿವೆ. ಇದನ್ನು ಹೊರತುಪಡಿಸಿದರೆ ಯಲಬುರ್ಗಾದಲ್ಲಿ 18 ಪ್ರಕರಣಗಳು ವರದಿಯಾಗಿವೆ.

ಕೊಪ್ಪಳ ತಾಲ್ಲೂಕು ವ್ಯಾಪ್ತಿಯಲ್ಲಿ ಹಿಂದಿನ ಐದು ವರ್ಷಗಳ ಅವಧಿಯಲ್ಲಿ ಒಂದಂಕಿಯ ಸಂಖ್ಯೆಯಲ್ಲಿದ್ದ ಪ್ರಕರಣಗಳು ಇದೇ ಮೊದಲ ಬಾರಿಗೆ ಎರಡಂಕಿಗೆ ತಲುಪಿವೆ. ವಿಶೇಷವೆಂದರೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕುಷ್ಟಗಿ ತಾಲ್ಲೂಕು ವ್ಯಾಪ್ತಿಯಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ಇಳಿಕೆಯಾಗಿದೆ.

ಮಕ್ಕಳ ರಕ್ಷಣೆ ಮತ್ತು ಬಾಲ್ಯ ವಿವಾಹಗಳನ್ನು ತಡೆಗಟ್ಟುವ ಸಲುವಾಗಿಯೇ ಇರುವ ಸರ್ಕಾರದ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಈ ನಿಟ್ಟಿನಲ್ಲಿ ಜನರಲ್ಲಿ ಹೆಚ್ಚು ಜಾಗೃತಿ ಮೂಡಿಸುವ, ಬಾಲ ಗರ್ಭಿಣಿಯರಿಗೆ ಭವಿಷ್ಯದಲ್ಲಿ ಆಗಬಹುದಾದ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ.

ಆಧಾರ್‌ ಕಾರ್ಡ್‌ನಲ್ಲಿರುವಂತೆ ವಯಸ್ಸಿಗೆ ಅನುಗುಣವಾಗಿ ಮಾಹಿತಿ ಕಲೆ ಸಂಗ್ರಹಿಸಲಾಗುತ್ತದೆ. ನಮ್ಮ ಇಲಾಖೆ ಕಾರ್ಯಕ್ರಮಗಳ ವೇಳೆಯೂ ಬಾಲ ಗರ್ಭಿಣಿ ಅಪಾಯದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
ಡಾ. ಪ್ರಕಾಶ್‌ ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT