ಶನಿವಾರ, ಫೆಬ್ರವರಿ 4, 2023
21 °C

ಹನುಮಸಾಗರ: ಮುಸಲ್ಮಾನರಿಂದ ಆಂಜನೇಯನಿಗೆ ಅಭಿಷೇಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹನುಮಸಾಗರ: ಸಮೀಪದ ಹಿರೇಗೊಣ್ಣಾಗರ ಗ್ರಾಮದಲ್ಲಿ ಮುಸಲ್ಮಾನ ಕುಟುಂಬದವರು ತಮ್ಮ ಜಮೀನಿನಲ್ಲಿ ಉದ್ಭವವಾಗಿದೆ ಎನ್ನಲಾಗಿರುವ ಹಳೆಯ ಕಾಲದ ಆಂಜನೇಯ ಮೂರ್ತಿಗೆ ಅಮಿನಸಾಬ್ ನಧಾಪ್ ದಂಪತಿ ಸಮಾಜದ ಹಿರಿಯರೊಂದಿಗೆ ಗುರುವಾರ ಅಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಅಮೀನಸಾಬ, ‘ನಮ್ಮ ಜಮೀನಿನಲ್ಲಿ ಹಿಂದಿನಿಂದಲೂ ಆಂಜನೇಯನ ಮೂರ್ತಿ ಇದೆ. ನಮ್ಮ ಮುತ್ತಾತನ ಕಾಲದಿಂದಲೂ ಅವರು ಇಲ್ಲಿ ಸಣ್ಣ ಕಟ್ಟೆ ಕಟ್ಟಿ ಪ್ರತಿವರ್ಷ ಸರಳವಾಗಿ ಪೂಜೆ ಸಲ್ಲಿಸುತ್ತಾ ಬಂದಿದ್ದರು. ಮಧ್ಯೆದಲ್ಲಿ ನಾವು ಸರಳ ಪೂಜೆಯನ್ನೂ ನಿಲ್ಲಿಸಿದ್ದೆವು. ಕ್ರಮೇಣ ನಮಗೆ ಸಾಕಷ್ಟು ತೊಂದರೆ ಎದುರಾಗುತ್ತಾ ಬಂದಿತು. ನಮ್ಮ ಹಿರಿಯರ ಮಾರ್ಗದರ್ಶನದಂತೆ ಮತ್ತೆ ಪೂಜೆ ಆರಂಭ ಮಾಡಿದೆವು. ಕ್ರಮೇಣ ನಮಗೆ ಎದುರಾಗಿದ್ದ ತೊಂದರೆಗಳು ಮರೆಯಾದವು’ ಎಂದರು.

ಆಂಜನೇಯನಲ್ಲೂ ಅಲ್ಲಾನ ಭಕ್ತಿ ಕಾಣುವ ಇವರು ಸುಮಾರು 30 ವರ್ಷಗಳಿಂದ ದೊಡ್ಡ ಪ್ರಮಾಣದಲ್ಲಿ ಪೂಜೆ ಮಾಡಿಕೊಂಡು ಬಂದಿದ್ದಾರೆ. ಅಭಿಷೇಕದ ದಿನದಂದು ಹಿಂದೂ ಹಾಗೂ ಮುಸಲ್ಮಾನ ಬಂಧುಗಳನ್ನು ಕರೆಯಿಸುತ್ತಾರೆ. ಅಲ್ಲದೆ ಆಂಜನೇಯನ ಪಕ್ಕದಲ್ಲಿ ನಾಗರಾಜ ಮೂರ್ತಿಯನ್ನು ಸ್ಥಾಪಿಸಿ ಅದಕ್ಕೂ ಪೂಜೆ ನೆರವೇರಿಸುತ್ತಾರೆ.

ಹಿರಿಯರಾದ ನೂರಸಾಬ ಯಮನೂರಸಾಬ ನದಾಫ್ ಮಾಹಿತಿ ನೀಡಿ, ‘ಕಾರ್ತಿಕ ದಿನದಂದು ಊರಲ್ಲಿರುವ ಆಂಜನೇಯನಿಗೆ ದೀಪ, ನೈವೇದ್ಯ ನೀಡುತ್ತೇವೆ. ಅಮಾವಾಸ್ಯೆ ದಿನ ಜಮೀನಿನಲ್ಲಿರುವ ಆಂಜನೇಯನಿಗೆ ಅದ್ದೂರಿಯಾಗಿ ಅಭಿಷೇಕ ಮಾಡುತ್ತಿದ್ದೇವೆ. ಸುತ್ತಲಿನ ಹಳ್ಳಿಗಳ ಜನ ಇಲ್ಲಿಗೆ ಬರುತ್ತಾರೆ. ಈ ಕಾರ್ಯಕ್ರಮದಲ್ಲಿ ಸುಮಾರು 250 ಜನರಿಗೆ ಅನ್ನಸಂತರ್ಪಣೆ ನಡೆದಿದೆ. ಮುಂದೆ ಆಂಜನೇಯನ ಕಟ್ಟೆಯ ಮೇಲೆ ತಗಡಿನ ಶೆಡ್ ನಿರ್ಮಾಣ ಮಾಡುವ ಉದ್ದೇಶವಿದೆ’ ಎಂದು ತಿಳಿಸಿದರು.

ಈ ಗ್ರಾಮದಲ್ಲಿ ಎಲ್ಲರೂ ಸೇರಿ ಹಿಂದೂ ಹಬ್ಬಗಳನ್ನು ಆಚರಿಸಿದಂತೆ ಮೋಹರಂ ಹಬ್ಬ ಆಚರಿಸುತ್ತಾರೆ. ಯಾರಲ್ಲೂ ಯಾವುದೇ ಭೇದಭಾವವಿಲ್ಲ.

ನರಸಿಂಹಾಚಾರ ಪೂಜಾ ಕಾರ್ಯ ನೆರವೇರಿಸಿದರು. ಪ್ರಮುಖರಾದ ಯಮನೂರಸಾಬ ನದಾಫ್, ಅಲ್ಲಾಸಾಬ ನಡುಲಮನಿ, ಅಮೀನಸಾಬ ನದಾಫ್, ಅಲಿಸಾಬ ಐಹೊಳೆ, ಹುಸೇನಸಾಬ ಐಹೊಳೆ, ಶಂಕ್ರಪ್ಪ ಗೊಣ್ಣಾಗರ, ಹನುಮಂತ, ಬಸಯ್ಯ ಹಿರೇಮಠ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು