ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಟಾಪುರ ಮೊರಾರ್ಜಿ ವಸತಿ ಶಾಲೆಯ ಸಾಧನೆ

ಅಂತರರಾಷ್ಟ್ರೀಯ ಕ್ರೀಡೆ, ಕಲಿಕಾ ಗುಣಮಟ್ಟದಲ್ಲಿ ಹೆಸರು ಮಾಡಿರುವ ಶಾಲೆ
Published 22 ಮೇ 2024, 6:29 IST
Last Updated 22 ಮೇ 2024, 6:29 IST
ಅಕ್ಷರ ಗಾತ್ರ

ಹನುಮಸಾಗರ: ಸಮೀಪದ ಕಾಟಾಪುರ ಗ್ರಾಮದಲ್ಲಿ 17 ವರ್ಷಗಳ ಹಿಂದೆ ಆರಂಭವಾದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧೀನದ ಮೊರಾರ್ಜಿ ದೇಸಾಯಿ ವಸತಿ ಶಾಲೆಯು ಪ್ರತಿ ವರ್ಷವೂ ಉತ್ತಮ ಫಲಿತಾಂಶವನ್ನು ಪಡೆಯುವುದರ ಜತೆಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಯಲ್ಲಿ ಉತ್ತಮ ಸಾಧನೆ ತೋರಿ ಜಿಲ್ಲೆಯ ಗಮನ ಸೆಳೆದಿದೆ.

2006-07ರಲ್ಲಿ ಬಾಡಿಗೆ ಕಟ್ಟಡದಲ್ಲಿ ಆರಂಭವಾದ ಈ ಶಾಲೆಯು 2011-12ರಲ್ಲಿ ಸ್ವಂತ ಕಟ್ಟಡವನ್ನು ಹೊಂದಿ ಸುಸಜ್ಜಿತ ಕಲಿಕಾ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದೆ.

2010-11ರಿಂದ 2023-24 ರವರೆಗೆ ಶಾಲೆಯ ಒಟ್ಟು 14 ಬ್ಯಾಚ್‌ಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ಪಡೆದುಕೊಂಡಿವೆ. 2023-24ನೇ ಸಾಲಿನಲ್ಲಿ ಕರ್ನಾಟಕದ 798 ವಸತಿ ಶಾಲೆಗಳ ಉತ್ತಮ ಫಲಿತಾಂಶದ ಪಟ್ಟಿಯಲ್ಲಿ ಕಾಟಾಪುರ ಮೊರಾರ್ಜಿ ವಸತಿ ಶಾಲೆಯು 18ನೇ ಸ್ಥಾನ ಪಡೆದುಕೊಂಡಿದೆ.

‘ಪ್ರಸಕ್ತ ವರ್ಷದ ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶದೊಂದಿಗೆ 45 ವಿದ್ಯಾರ್ಥಿಗಳಲ್ಲಿ 31 ಮಂದಿ ಅತ್ಯುನ್ನತ ಶ್ರೇಣಿ, 13 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ ಒಬ್ಬ ವಿದ್ಯಾರ್ಥಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣ ಆಗುವುದರೊಂದಿಗೆ ಉತ್ತಮ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯ’ ಎಂದು ಹೇಳುತ್ತಾರೆ ಶಾಲೆಯ ಪ್ರಾಂಶುಪಾಲ  ಶಿವಕುಮಾರ ಚೋಳಚಗುಡ್ಡ.

‘2021–22ನೇ ಸಾಲಿನಲ್ಲಿ ಈ ವಸತಿ ಶಾಲೆಯ ಅಭಿಷೇಕ ಗ್ವಾತಗಿ ಎಂಬ ವಿದ್ಯಾರ್ಥಿ 625ಕ್ಕೆ 624 ಅಂಕ ಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ಗಮನ ಸೆಳೆದಿದ್ದರು. ಆ ಮೂಲಕ ಸರ್ಕಾರದ ₹1 ಲಕ್ಷ ಬಹುಮಾನವನ್ನು ಕೊಪ್ಪಳ ಜಿಲ್ಲಾಧಿಕಾರಿ ಅವರಿಂದ ಪಡೆದುಕೊಂಡಿದ್ದರು’ ಎಂದು ಪ್ರಾಂಶುಪಾಲರು ತಿಳಿಸಿದರು. 

ಶಾಲೆಯು ಸುಸಜ್ಜಿತ ಕೊಠಡಿಗಳು, ಪ್ರಯೋಗಾಲಯ, ಕ್ರೀಡಾಂಗಣ, ಶುದ್ಧ ಕುಡಿಯುವ ನೀರಿನ ಘಟಕ ಹೊಂದಿದೆ. ಒಟ್ಟು 9 ಜನ ಕಾಯಂ ಬೋಧಕ ಸಿಬ್ಬಂದಿ, ಇಬ್ಬರು ಅತಿಥಿ ಶಿಕ್ಷಕರು ಹಾಗೂ ಮೂವರು ಬೋಧಕೇತರ ಸಿಬ್ಬಂದಿ ಮಕ್ಕಳ ಜ್ಞಾನಾಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಮಕ್ಕಳ ಆರೋಗ್ಯ ಕಾಳಜಿಗೆ ನರ್ಸಿಂಗ್ ಸಿಬ್ಬಂದಿಯೂ ಇದ್ದಾರೆ.

ಮೊರಾರ್ಜಿ ದೇಸಾಯಿ ವಸತಿ  ದೈನಂದಿನ ಕಾರ್ಯ ಚಟುವಟಿಕೆಗಳು ಬೆಳಗಿನ ಜಾವ 5.30ರಿಂದ ಆರಂಭವಾಗಿ ರಾತ್ರಿ 10.30ರವರೆಗೆ ನಿರಂತರವಾಗಿರುತ್ತವೆ. ಮಕ್ಕಳ ಕಲಿಕಾಮಟ್ಟ ಸುಧಾರಣೆಗಾಗಿ ವಿಶೇಷ ತರಗತಿ ನಡೆಸಲಾಗುತ್ತಿದೆ. ಪ್ರಾರ್ಥನಾ ಸಮಯದಲ್ಲೂ ಮಕ್ಕಳಿಂದ ಕಲಿಕಾಂಶಗಳನ್ನು ಹೇಳಿಸುವುದು, ಕಲಿಕೆಯಲ್ಲಿ ಪ್ರಾಯೋಗಿಕ ಪಾಠ ತಂತ್ರಜ್ಞಾನ ಅಳವಡಿಕೆ ಹಾಗೂ ಲ್ಯಾಬ್‌ಗಳನ್ನು ನಿರ್ಮಿಸಿ ವಿದ್ಯಾರ್ಥಿಗಳನ್ನು ಉತ್ತಮ ಕಲಿಕೆಗೆ ಅಣಿಗೊಳಿಸಲಾಗುತ್ತಿದೆ.

ಕ್ರೀಡೆಯಲ್ಲಿ ಗಮನಸೆಳೆದ ಶಾಲೆ
2009–10ನೇ ಸಾಲಿನಲ್ಲಿ ಶಾಲೆಯ ರಘು ಎಂಬ ವಿದ್ಯಾರ್ಥಿ ಛತ್ತಿಸ್‌ಗಢದಲ್ಲಿ ನಡೆದ 55ನೇ ರಾಷ್ಟ್ರೀಯ ಕಬಡ್ಡಿ ಸ್ಪರ್ಧೆಯಲ್ಲಿ ತೃತೀಯ ಸ್ಥಾನ, 2010–11ರಲ್ಲಿ ಕಾವ್ಯ ಪಾಟೀಲ, ಅಮೃತ ಎಂಬ ವಿದ್ಯಾರ್ಥಿನಿಯರು ಅಂತರರಾಷ್ಟ್ರೀಯ ಜಂಪ್‌ರೂಪ್‌ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಅಮೃತ ಹಾಗೂ ಕಾವ್ಯ ಪಾಟೀಲ ಅವರು 2011–12ರಲ್ಲಿ ನೇಪಾಳದಲ್ಲಿ ನಡೆದ ಅಂತರರಾಷ್ಟ್ರೀಯ ಸೌತ್‌ ಏಷಿಯನ್‌ ಜಂಪ್‌ರೂಪ್‌ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಅಲ್ಲದೇ ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತಮಿಳುನಾಡು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ. ‘ಕೊಪ್ಪಳದಲ್ಲಿ ಆರ್‌ಬಿಐ ನಡೆಸಿದ ಜಿಲ್ಲಾಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದಿದ್ದಾರೆ. ಧಾರವಾಡದ ಜೆಎಸ್‌ಎಸ್ ಕಾಲೇಜಿನಲ್ಲಿ ನಡೆದ ರಾಜ್ಯ ಮಟ್ಟದ ಕವ್ವಾಲಿ ಸ್ಪರ್ಧೆ, ರಾಜ್ಯಮಟ್ಟದ ಆಶುಭಾಷಣ ಸ್ಪರ್ಧೆ, ಬೆಂಗಳೂರಿನ ಜವಾಹರ್ ಲಾಲ್ ನೆಹರೂ ತಾರಾಲಯದಲ್ಲಿ ಅಂತಿಮ ಸುತ್ತಿನ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು’ ಎಂದು ಪ್ರಾಂಶುಪಾಲರು ತಿಳಿಸಿದರು.
ನಮ್ಮ ಶಾಲೆಯ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿ, ಊರಿನ ಶಿಕ್ಷಣ ಪ್ರೇಮಿಗಳ, ಪಾಲಕರ ಸಹಕಾರದಿಂದ ಗುಣಮಟ್ಟದ ಬೋಧನೆ ಮಾಡಿದ ಪರಿಣಾಮ ಈ ಬಾರಿ ಉತ್ತಮ ಫಲಿತಾಂಶ ಬಂದಿದೆ.
–ಶಿವಕುಮಾರ ಚೋಳಚಗುಡ್ಡ, ಪ್ರಾಂಶುಪಾಲ, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕಾಟಾಪುರ
ಜಿಲ್ಲೆಯಲ್ಲಿಯೇ ಉತ್ತಮ ವಸತಿ ಶಾಲೆ ಎನ್ನುವುದು ಹೆಮ್ಮೆಯ ಸಂಗತಿ. ಇಲ್ಲಿನ ಶಿಕ್ಷಕರ ಗುಣಮಟ್ಟದ ಬೋಧನೆ, ಶಿಸ್ತು ಮತ್ತು ಮಕ್ಕಳೊಂದಿಗೆ ಶಿಕ್ಷಕರ ಸದಾ ಒಡನಾಟದಿಂದ ರಾಜ್ಯದ 798 ವಸತಿ ಶಾಲೆಗಳ ಪೈಕಿ 18ನೇ ಸ್ಥಾನ ಪಡೆದಿದೆ.
–ರೇವಣ್ಣ ಗುರಿಕಾರ, ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್‌ (ಸಶಸ್ತ್ರ), ಶಾಲೆ ಹಳೆಯ ವಿದ್ಯಾರ್ಥಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT