ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಆಡಳಿತ ಬಲವರ್ಧನೆಗೆ ತಂತ್ರಜ್ಞಾನದ ಕಣ್ಗಾವಲು

ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಸಿಸಿಟಿವಿ ಕ್ಯಾಮೆರಾ, ಪೂರ್ಣ ಅನುಷ್ಠಾನಕ್ಕೆ ಬೇಕು ಎಂಟು ತಿಂಗಳು
Published 18 ಅಕ್ಟೋಬರ್ 2023, 7:28 IST
Last Updated 18 ಅಕ್ಟೋಬರ್ 2023, 7:28 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯ 153 ಗ್ರಾಮ ಪಂಚಾಯಿತಿಗಳಲ್ಲಿರುವ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಮತ್ತು ಇತರ ಸಿಬ್ಬಂದಿಯ ಆಡಳಿತ ವೈಖರಿ ಮೇಲೆ ಕಣ್ಗಾವಲು ಇರಿಸಲು ಕೊಪ್ಪಳ ಜಿಲ್ಲಾ ಪಂಚಾಯಿತಿ ತಂತ್ರಜ್ಞಾನದ ಮೊರೆ ಹೋಗಿದೆ.

ಜಿಲ್ಲೆಯ ಎಲ್ಲ ಗ್ರಾ.ಪಂ.ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಪ್ರಕ್ರಿಯೆ ಆರಂಭವಾಗಿದ್ದು ಆಯಾ ಪಂಚಾಯಿತಿಗಳಲ್ಲಿ ನಡೆಯುವ ಕಾರ್ಯಚಟುವಟಿಕೆಗಳು, ಇರುವ ಸಿಬ್ಬಂದಿ, ಅವರು ಮಾಡುವ ಕೆಲಸ ಆ ಕ್ಯಾಮೆರಾಗಳಲ್ಲಿ ದಾಖಲಾಗಿದೆ. ಇದರ ನೇರ ಸಂಪರ್ಕ ಜಿಲ್ಲಾ ಪಂಚಾಯಿತಿಯಲ್ಲಿ ಇರುತ್ತದೆ. ಸಿಇಒ ತಮ್ಮ ಚೇಂಬರ್‌ನಲ್ಲಿದ್ದುಕೊಂಡೇ ಪಂಚಾಯಿತಿಗಳ ಕಾರ್ಯವೈಖರಿ ಮೇಲೆ ಕಣ್ಗಾವಲು ಇರಿಸಲು ಈ ವ್ಯವಸ್ಥೆ ನೆರವಾಗಲಿದೆ.   

ಗ್ರಾಮ ಪಂಚಾಯಿತಿಗಳು ಮತ್ತು ಆ ವ್ಯಾಪ್ತಿಯ ಹಳ್ಳಿಗಳ ಜನ ಪಿಡಿಒ ನಮ್ಮ ಕೈಗೆ ಸಿಗುವುದೇ ಇಲ್ಲ, ಕಚೇರಿಗೆ ಬರುವುದಿಲ್ಲ. ಒಂದು ಸಣ್ಣ ಕೆಲಸಕ್ಕಾಗಿ ತಿಂಗಳಾನುಗಟ್ಟಲೆ ಅಲೆದಾಡಬೇಕಾದ ಪರಿಸ್ಥಿತಿಯಿದೆ ಎಂದು ದೂರುವುದು ಜನರಿಂದ ಸಾಮಾನ್ಯವಾಗಿದೆ. ಹಲವು ಪಿಡಿಒಗಳು ’ಸಭೆ ಇದೆ’ ಎನ್ನುವ ನೆಪ ಹೇಳಿ ಕಚೇರಿಗೆ ಹೋಗುತ್ತಿಲ್ಲ. ತಿಂಗಳಾದರೂ ಜನರ ಕೈಗೆ ಸಿಗುವುದಿಲ್ಲ ಎನ್ನುವ ದೂರುಗಳು ಕೂಡ ವ್ಯಾಪಕವಾಗಿದ್ದವು. ಆದ್ದರಿಂದ ಈಗ ಜಿಲ್ಲಾ ಪಂಚಾಯಿತಿಯೇ ಪಿಡಿಒಗಳಿಗೆ ಸಿಮ್‌ಗಳನ್ನು ನೀಡಿದೆ.

ಕೆಲವು ಪಿಡಿಒಗಳು ತಿಂಗಳಿನ ಅಂತರದಲ್ಲಿಯೇ ವರ್ಗಾವಣೆಯಾಗುತ್ತಿದ್ದಾರೆ. ವರ್ಗಾವಣೆಯಾದ ಜಾಗಕ್ಕೆ ಹೊಸ ಪಿಡಿಒ ಬಂದಾಗ ಅವರ ಮೊಬೈಲ್‌ ನಂಬರ್ ಪಡೆಯಲು ಜನ ಪರದಾಡುವ ಸ್ಥಿತಿಯಿದೆ. ಇನ್ನೂ ಕೆಲವರು ತಿಂಗಳಾನುಗಟ್ಟಲೆ ರಜೆಯ ಮೇಲೆ ಹೋದರೆ ಜನರ ದೈನಂದಿನ ಕಚೇರಿಯ ಚಟುವಟಿಕೆಗೆ ಅಡ್ಡಿಯಾಗುತ್ತದೆ. ಆದ್ದರಿಂದ ಸರ್ಕಾರದ ವತಿಯಿಂದಲೇ ಈಗ ಸಿಮ್‌ ನೀಡಲಾಗಿದೆ. 153 ಗ್ರಾ.ಪಂ.ಗಳ ಪೈಕಿ ಈಗಾಗಲೇ 12ಕ್ಕೆ ಜಿ.ಪಂ. ಮತ್ತು ಗ್ರಾ.ಪಂ. ನಡುವಿನ ತಂತ್ರಜ್ಞಾನದ ಸಂಪರ್ಕ ಕಲ್ಪಿಸಲಾಗಿದೆ. ಇನ್ನೊಂದು ವಾರದಲ್ಲಿ ಒಟ್ಟು 22 ಗ್ರಾ.ಪಂ.ಗಳಿಗೆ ಇದು ವಿಸ್ತರಣೆಯಾಗಲಿದೆ. ಎಲ್ಲ ಗ್ರಾ.ಪಂ.ಗಳಿಗೆ ಇದರ ಸೌಲಭ್ಯ ಅಳವಡಿಸಬೇಕಾದರೆ ಕನಿಷ್ಢ ಎಂಟು ತಿಂಗಳಾದರೂ ಬೇಕಾಗುತ್ತದೆ.

ಹಲವು ಗ್ರಾಮ ಪಂಚಾಯಿತಿಗಳಲ್ಲಿ ಅನೇಕರು ಗ್ರಾಮ ಸಭೆಗಳನ್ನು ನಡೆಸದೇ ಮನೆಯಲ್ಲಿಯೇ ವರದಿ ತಯಾರಿಸಿಕೊಂಡು ಬಂದ ದೂರುಗಳಿದ್ದವು. ಆದ್ದರಿಂದ ಆಡಳಿತದ ಮೇಲೆ ಕಣ್ಗಾವಲು ಇರಿಸಲು ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ.
–ರಾಹುಲ್‌ ರತ್ನಂ ಪಾಂಡೆಯ ಜಿಲ್ಲಾ ಪಂಚಾಯಿತಿ ಸಿಇಒ ಕೊಪ್ಪಳ

ಜಿಲ್ಲೆಯ ಹಲವು ಗ್ರಾ.ಪಂ.ಗಳಿಗೆ ಈಗಲೂ ಉತ್ತಮ ವೇಗದ ಮತ್ತು ನಿಯಮಿತವಾಗಿ ಸಂಪರ್ಕ ಇರುವ ಅಂತರ್ಜಾಲದ ಸೌಲಭ್ಯವಿಲ್ಲ. ಈ ಸೌಲಭ್ಯದ ಕೊರತೆ ಇರುವ ಕಡೆ ಮೊಬೈಲ್‌ ಡಾಟಾ ಅಥವಾ ಡೊಂಗಲ್‌ ಬಳಸಿ ನಿತ್ಯದ ಕಾರ್ಯಚಟುವಟಿಕೆ ನಡೆಸಲಾಗುತ್ತಿದೆ. ಸಿಸಿಟಿವಿ ಕ್ಯಾಮೆರಾಗಳ ಸಂಪರ್ಕ ಕಲ್ಪಿಸಲು ಉತ್ತಮ ಗುಣಮಟ್ಟದ ಅಂತರ್ಜಾಲ ಬೇಕು. ಬಿಎಸ್‌ಎನ್‌ಎಲ್‌ ಎಲ್ಲ ಗ್ರಾ.ಪಂ.ಗಳಲ್ಲಿ ಲ್ಯಾನ್‌ ಸಂಪರ್ಕ ನೀಡಬೇಕಾಗಿದ್ದು, ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಟೆಂಡರ್‌ ಆಗಬೇಕಾಗಿದೆ.

‘ಪಿಡಿಒಗಳು ನಿತ್ಯ ಬೆಳಿಗ್ಗೆ 11 ಗಂಟೆಗಿಂತಲೂ ಮೊದಲೇ ಕಚೇರಿಗೆ ಬರುವುದಿಲ್ಲ. ಜನರ ಕೈಗೆ ಸಿಗುವುದಿಲ್ಲ ಎನ್ನುವ ದೂರುಗಳು ಸಾಕಷ್ಟು ಕೇಳಿ ಬಂದಿದ್ದವು. ಎಲ್ಲರೂ ವೈಯಕ್ತಿಕ ಮೊಬೈಲ್‌ ಸಂಖ್ಯೆ ಹೊಂದಿದ್ದರಿಂದ ಕೆಲವು ಬಾರಿ ಹಿರಿಯ ಅಧಿಕಾರಿಗಳ ಸಂಪರ್ಕಕ್ಕೂ ಲಭ್ಯವಾಗುತ್ತಿರಲಿಲ್ಲ. ಇದರಿಂದ ಬೇಸತ್ತು ಜನ ಅನೇಕ ಬಾರಿ ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಯ ಹಿರಿಯ ಅಧಿಕಾರಿಗಳಿಗೆ ದೂರು ಹೇಳಿದ್ದಾರೆ. ಆದ್ದರಿಂದ ಈಗ ಸರ್ಕಾರದಿಂದಲೇ ಸಿಮ್‌ ನೀಡಲಾಗಿದೆ. ಗ್ರಾ,ಪ‍ಂ.ಗಳಲ್ಲಿ ಸಿಸಿಟಿವಿ ಅಳವಡಿಕೆಯಿಂದ ಆಡಳಿತ ಬಲವರ್ಧನೆ ಸಾಧ್ಯವಾಗುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT