ಬುಧವಾರ, ಆಗಸ್ಟ್ 4, 2021
20 °C
ಅವಧಿ ಪೂರ್ವದಲ್ಲಿಯೇ ಮುಂಗಾರು ಪ್ರವೇಶ, ಉತ್ತಮ ಮಳೆ ನಿರೀಕ್ಷೆಯಲ್ಲಿ ರೈತರು

ಕೊಪ್ಪಳ ಜಿಲ್ಲೆಯಲ್ಲಿ ಗರಿಗೆದರಿದ ಕೃಷಿ ಚಟುವಟಿಕೆ

ಭರತ್‌ ಕಂದಕೂರ Updated:

ಅಕ್ಷರ ಗಾತ್ರ : | |

Prajavani

ಕೊಪ್ಪಳ: ಅವಧಿ ಪೂರ್ವದಲ್ಲಿಯೇ ಜಿಲ್ಲೆಗೆ ಮುಂಗಾರಿನ ಪ್ರವೇಶವಾಗಿದೆ. ಕಳೆದ ವಾರದಿಂದ ಜಿಲ್ಲೆಯಾದ್ಯಂತ ಮಳೆಯಾಗುತ್ತಿದೆ. ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. 

ಹೈದರಾಬಾದ್‌ ಕರ್ನಾಟಕ ಭಾಗದ ರಣ ಬಿಸಿಲು ಮಳೆಯಿಂದಾಗಿ ಕಡಿಮೆಯಾಗಿದೆ. ಮೋಡ ಕವಿದ ವಾತಾವರಣದಿಂದಾಗಿ ಸೂರ್ಯ ತನ್ನ ಪ್ರಖರತೆ ಕಳೆದುಕೊಂಡಿದ್ದಾನೆ. ಕೋವಿಡ್‌-19, ಲಾಕ್‌ಡೌನ್‌ನಿಂದಾಗಿ ಮನೆಯಲ್ಲೇ ಇದ್ದ ರೈತರು ಮೆಲ್ಲನೆ ಕೃಷಿ ಚಟುವಟಿಕೆಯತ್ತ ತೆರಳುತ್ತಿದ್ದಾರೆ. 

ಬೆಳಿಗ್ಗೆಯೇ ಕೃಷಿ ಪರಿಕರಗಳೊಂದಿಗೆ ಎತ್ತಿನ ಗಾಡಿಯಲ್ಲಿ ಕುಟುಂಬ ಸದಸ್ಯರು ಹೊಲದತ್ತ ತೆರಳುವ ದೃಶ್ಯ ಗ್ರಾಮೀಣ ಭಾಗದಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿದೆ. ಬಹುತೇಕ ಹೊಲಗಳಲ್ಲಿ ಭೂಮಿ ಹಸನುಗೊಳಿಸುವ ಕಾರ್ಯ ಭರದಿಂದ ನಡೆಯುತ್ತಿದೆ. ಕೆಲ ಪ್ರದೇಶಗಳಲ್ಲಿ ಬಿತ್ತನೆ ಸಹ ಆರಂಭವಾಗಿದೆ. ಹೊಲವನ್ನು ಸಜ್ಜುಗೊಳಿಸಿರುವ ಬಹುತೇಕ ರೈತರು ಒಂದು ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಬಹುತೇಕ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರ ಸಾಲು ಕಂಡು ಬರುತ್ತಿದೆ. ಇತ್ತ ನಗರದ ಕೆಲ ಖಾಸಗಿ ಅಂಗಡಿಗಳಲ್ಲಿಯೂ ರೈತರು ಬೀಜ, ಗೊಬ್ಬರ ಖರೀದಿಯಲ್ಲಿ ತೊಡಗಿರುವುದು ಕಂಡು ಬರುತ್ತಿದೆ.  

ಕೆಲವೆಡೆ ಭೂಮಿ ಹಸನುಗೊಳಿಸುವ ಪ್ರಕ್ರಿಯೆ ಸ್ವಲ್ಪ ತಡವಾಗಿದೆ. ಜೂನ್‌ 5 ರಂದು ರಾಜ್ಯಕ್ಕೆ ಮುಂಗಾರು ಮಾರುತ ಪ್ರವೇಶವಾಗಬಹುದು ಎಂದು ಹವಾಮಾನ ಇಲಾಖೆ ಅಂದಾಜಿಸಿತ್ತು. ಈ ಬಾರಿಯೂ ಹವಾಮಾನ ಇಲಾಖೆ ಮಳೆಯ ಪ್ರವೇಶದ ಸಮಯ ಅಮದಾಜಿಸುವಲ್ಲಿ ಎಡವಿರುವುದು ವಿಪರ್ಯಾಸ. 

‘ಆಗಿರುವ ಸಣ್ಣ ಮಳೆಯಿಂದಾಗಿ ಭೂಮಿ ಹಸನುಗೊಳಿಸುತ್ತಿದ್ದೇವೆ. ಉತ್ತಮ ಮಳೆಯಾದಲ್ಲಿ ಬಿತ್ತನೆ ಕಾರ್ಯ ಚುರುಕುಗೊಳಿಸಲಾಗುವುದು. ಈ ಬಾರಿ ನಮ್ಮ ಭಾಗದಲ್ಲಿ ಮುಸುಕಿನ ಜೋಳ, ಸಜ್ಜೆ ಬೆಳೆಗಳನ್ನು ಎಲ್ಲ ರೈತರು ಆಯ್ದುಕೊಂಡಿದ್ದಾರೆ. ಮುಂಗಾರಿಗೆ ಅದೇ ಸೂಕ್ತ ಆಗಿರುವುದರಿಂದ ನಾನೂ ಸಹ ಅದನ್ನೇ ಹಾಕಬೇಕೆಂದಿದ್ದೇನೆ‘ ಎಂದು ಟಣಕನಕಲ್ ಗ್ರಾಮದ ರೈತ ಯಂಕಪ್ಪ ಹೇಳಿದರು.

ಈ ಬಾರಿ ವಾಡಿಕೆಗಿಂತ ಹೆಚ್ಚೇ ಮಳೆ ಸುರಿದಿದೆ. ಈಗಾಲೇ ಜಿಲ್ಲೆಯ ಕೆಲ ಭಾಗಗಳಲ್ಲಿ ಹೆಸರು ಬೆಳೆಯನ್ನು ಬೆಳೆಯಲಾಗಿದೆ. ಫಸಲು ಸಹ ಉತ್ತಮವಾಗಿರುವುದು ಕ್ಷೇತ್ರ ಅಧ್ಯಯನದಿಂದ ತಿಳಿದುಬಂದಿದೆ. ಜೂ.10 ರವರೆಗೆ ಸಮಯವಿದೆ. ರೈತರಲ್ಲೂ ಸಹ ಉತ್ಸಾಹ ಹೆಚ್ಚಿದ್ದು, ಕೊನೆಯ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಬಿತ್ತನೆ ನಡೆಯುತ್ತದೆ ಎಂದು ಅಂದಾಜಿಸಲಾಗಿದೆ. ಮುಸುಕಿನ ಜೋಳ, ಮತ್ತು ಸಜ್ಜೆ ಈ ಭಾಗದಲ್ಲಿ ಮುಂಗಾರಿಗೆ ಸೂಕ್ತವಾದ ಬೆಳೆಯಾಗಿದ್ದು, ಕೆಲವೆಡೆ ಸೂರ್ಯಕಾಂತಿಯನ್ನು ಸಹ ರೈತರು ಬೆಳೆಯುತ್ತಿದ್ದಾರೆ. 

‘ಮುಂಗಾರಿಗೂ ಮುನ್ನ ಮೇ ತಿಂಗಳಲ್ಲಿ ರೈತರಿಗೆ ಕೆಲಸ ನೀಡುವ ನಿಟ್ಟಿನಲ್ಲಿ ಸರ್ಕಾರದ ವಿವಿಧ ಯೋಜನೆಗಳ ಅಡಿ 98 ಸಾವಿರ ಮಾನವ ದಿನಗಳನ್ನು ಸೃಜಿಸಲಾಗಿದೆ.  ಪ್ರತಿದಿನ ₹ 275 ಕೂಲಿ ನೀಡಲಾಗಿದೆ. ಅಲ್ಲದೆ ಸಲಕರಣೆಗಳ ಸಾಣೆ ಹಿಡಿಯುವಿಕೆಗೆ ಹೆಚ್ಚುವರಿಯಾಗಿ ₹ 10 ನೀಡಲಾಗುತ್ತಿದೆ‘ ಎಂದು ಜಂಟಿ ಕೃಷಿ ನಿರ್ದೇಶಕ ಶಬಾನಾ ಎಂ.ಶೇಖ್‌ ಮಾಹಿತಿ ನೀಡಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು