ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ to ಬೆಂಗಳೂರು: ಮಗುವಿನ ‘ಹೃದಯ’ಕ್ಕೆ ಮಿಡಿದ ಆಂಬುಲೆನ್ಸ್‌ ತಂಡ

Published 3 ಜುಲೈ 2024, 19:51 IST
Last Updated 3 ಜುಲೈ 2024, 19:51 IST
ಅಕ್ಷರ ಗಾತ್ರ

ಕೊಪ್ಪಳ: ಅನಾರೋಗ್ಯದಿಂದ ಬಳಲುತ್ತಿದ್ದ ಹೆಣ್ಣು ಶಿಶುವಿನ ಪ್ರಾಣ ಉಳಿಸಲು ಇಲ್ಲಿನ ಜಿಲ್ಲಾ ಆಸ್ಪತ್ರೆಯಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಚಿಕಿತ್ಸೆಗಾಗಿ ರಾಜ್ಯದ ವಿವಿಧ ಜಿಲ್ಲೆಗಳ ಆಂಬುಲೆನ್ಸ್‌ ಚಾಲಕರು ಒಟ್ಟಾಗಿ ಕೆಲಸ ಮಾಡಿ ಮಗುವಿನ ‘ಹೃದಯ’ ವೇದನೆಗೆ ಮಿಡಿದಿದ್ದಾರೆ.

ಹೊಸಪೇಟೆ ತಾಲ್ಲೂಕಿನ ಗಾದಿಗನೂರಿನ ಗ್ರಾಮದ ಫಕೀರಸ್ವಾಮಿ, ಹುಲಿಗೆಮ್ಮ ದಂಪತಿಗೆ 22 ದಿನಗಳ ಹಿಂದೆಯಷ್ಟೇ ಜನಿಸಿದ ಮಗುವಿನ ಹೃದಯದಲ್ಲಿ ರಂಧ್ರ ಹಾಗೂ ಉಸಿರಾಟದ ಸಮಸ್ಯೆಯಿದ್ದ ಕಾರಣ ಚಿಕಿತ್ಸೆಗಾಗಿ ಕರೆದುಕೊಂಡು ಹೋಗುವಂತೆ ಇಲ್ಲಿನ ವೈದ್ಯರು ಶಿಫಾರಸು ಮಾಡಿದ್ದರು. ತುರ್ತಾಗಿ ಬೆಂಗಳೂರು ತಲುಪಬೇಕಾಗಿದ್ದರಿಂದ ಇಲ್ಲಿನ ಗವಿಸಿದ್ಧೇಶ್ವರ ಆಂಬುಲೆನ್ಸ್‌ ಸಂಘದ ಉಪಾಧ್ಯಕ್ಷ ಅಬ್ದುಲ್‌ ನಬೀದ್ ಹಾಗೂ ಅವರ ಸಹೋದರ ಸದ್ದಾಂ ರಾಜ್ಯದ ವಿವಿಧೆಡೆಯಿರುವ ಆಂಬುಲೆನ್ಸ್‌ ಸಿಬ್ಬಂದಿಯ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಮಾಹಿತಿ ಹಂಚಿಕೊಂಡು ಸಹಕರಿಸುವಂತೆ ಕೋರಿದ್ದಾರೆ.

ಇದಕ್ಕೆ ಕೊಪ್ಪಳ, ಹೊಸಪೇಟೆ, ಚಿತ್ರದುರ್ಗ, ತುಮಕೂರು ಜಿಲ್ಲೆಗಳ ಹಾಗೂ ಬೆಂಗಳೂರು ನಗರದ ಆಂಬುಲೆನ್ಸ್‌ ಸಿಬ್ಬಂದಿ ಸಹಕಾರ ನೀಡಿ ಮಗು ಇದ್ದ ವಾಹನಕ್ಕೆ ಬೆಂಗಾವಲಾಗಿ ತೆರಳಿದ್ದಾರೆ. ಮಗುವನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಯಾ ಜಿಲ್ಲೆಯಿಂದ ಹೊರಟ ಆಂಬುಲೆನ್ಸ್‌ ಸಿಬ್ಬಂದಿ ಜಿಲ್ಲೆ ವ್ಯಾಪ್ತಿ ಮುಗಿಯುವ ತನಕ ಬೆಂಗಾವಲಾಗಿ ಕೆಲಸ ಮಾಡಿದ್ದಾರೆ. 

‘ಮಗುವಿನ ಪರಿಸ್ಥಿತಿ ನೋಡಿ ಕರುಳು ಕಿವುಚಿ ಬಂದಂತಾಯಿತು. ಕ್ಷಣಮಾತ್ರವೂ ವ್ಯರ್ಥ ಮಾಡದೆ ಆಂಬುಲೆನ್ಸ್‌ ಸಿಬ್ಬಂದಿಗೆ ಮಾಹಿತಿ ನೀಡಿದೆ. ಎಲ್ಲರೂ ಕೈ ಜೋಡಿಸಿದ್ದರಿಂದ ವೇಗವಾಗಿ ಬೆಂಗಳೂರು ತಲುಪಲು ಸಾಧ್ಯವಾಯಿತು. ಮಧ್ಯಾಹ್ನ 1 ಗಂಟೆಗೆ ಕೊಪ್ಪಳದಿಂದ ಹೊರಟು ಸಂಜೆ 5 ಗಂಟೆಗೆ ಬೆಂಗಳೂರು ತಲುಪಿದೆ. ಇದು ನನ್ನ ಬದುಕಿನ ಸಾರ್ಥಕ ಕ್ಷಣ’ ಎಂದು ನಬೀದ್‌ ‘ಪ್ರಜಾವಾಣಿ’ ಜೊತೆ ಸಂತೋಷ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT