–ಜುನಸಾಬ ವಡ್ಡಟ್ಟಿ
ಅಳವಂಡಿ: ಸಮೀಪದ ಘಟ್ಟಿರಡ್ಡಿಹಾಳ - ಕವಲೂರು ಸಂಪರ್ಕಿಸುವ ರಸ್ತೆ ಸಂಪೂರ್ಣ ಗುಂಡಿಗಳಿಂದ ಕೂಡಿ ಹಾಳಾಗಿದ್ದು, ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ನಿತ್ಯ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಮೇಲೆ ಹಿಡಿಶಾಪ ಹಾಕುತ್ತಿದ್ದಾರೆ.
ಕೊಪ್ಪಳ ಜಿಲ್ಲೆಯ ಗಡಿಭಾಗದ ರಸ್ತೆ ಇದಾಗಿದ್ದು, ನಿತ್ಯ ಮಾರ್ಗದಲ್ಲಿ ನೂರಾರು ವಾಹನಗಳು ಸಂಚರಿಸುತ್ತಿದ್ದು,ಯಾವುದೇ ಸಂದರ್ಭದಲ್ಲಿ ದ್ವಿಚಕ್ರವಾಹನಗಳು ಅಪಘಾತಕ್ಕೀಡಾಗುವ ಸಾಧ್ಯತೆಗಳು ಹೆಚ್ಚಿವೆ.ಇದರಿಂದ ವಾಹನ ಸವಾರರು, ಪ್ರಯಾಣಿಕರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.
ಘಟ್ಟಿರಡ್ಡಿಹಾಳ - ಕವಲೂರು ರಸ್ತೆ ದುರಸ್ತಿ ಮಾಡಲಾಗುವುದು ಎಂದು ಲೋಕೋಪಯೋಗಿ ಇಲಾಖೆಯವರು ಕಳೆದ ವರ್ಷ 2 ಕಿ.ಮೀ.ರಸ್ತೆ ಆಗೆದು ಡಾಂಬರ್ ಕಿತ್ತು ಹಾಕಲಾಗಿದೆ ಆದರೆ ಈ ರಸ್ತೆ ದುರಸ್ತಿ ಕಾರ್ಯ ರಸ್ತೆ ಅಗೆದು ಮರೆತು ಕುಳಿತ್ತಿದ್ದಾರೆ.
ರಸ್ತೆ ಸಂಪೂರ್ಣ ತೆಗ್ಗು
ದಿಣ್ಣೆಗಳಿಂದ ಕೂಡಿದ್ದು, ಮಳೆ ಬಂದರೇ ಸಾಕು ಗುಂಡಿಗಳು ನೀರಿನಿಂದ ಜಲಾವೃತವಾಗುತ್ತದೆ. ಇದರಿಂದ ವಾಹನ ಸವಾರರಿಗೆ ರಸ್ತೆ ಯಾವುದೋ, ಗುಂಡಿ ಯಾವುದೋ ಎಂಬುದು ತಿಳಿಯದಂತೆ ಆಗಿದೆ. ಈ ರಸ್ತೆಯ ಮುಖಾಂತರ ಕುಕನೂರು, ಯಲಬುರ್ಗಾ, ಮುಂಡರಗಿಗೆ ತೆರಳಬಹುದಾಗಿದೆ.
ವಾಹನ ಸವಾರರು ಪರದಾಟ
ಇದೇ ರಸ್ತೆಯ ಮಧ್ಯೆಯೇ ಹಿರೇಹಳ್ಳ ಇದೆ. ಈ ಹಳ್ಳಕ್ಕೆ ಈ ಮೊದಲು ಪೈಪುಗಳನ್ನು ಹಾಕಿ ಸೇತುವೆ ನಿರ್ಮಾಣ ಮಾಡಲಾಗಿತ್ತು. ಆದರೆ ನಂತರ ಅಧಿಕಾರಿಗಳು ಅದನ್ನು ಕಿತ್ತು ನೆಲ ಮಟ್ಟದ ಸೇತುವೆ ನಿರ್ಮಿಸಿದ್ದಾರೆ. ಆದರೆ ಈ ಸೇತುವೆ ಮೇಲೆ ಸದಾ ನೀರು ಹರಿಯುವುದರಿಂದ ಸಂಪೂರ್ಣ ಪಾಚಿಗಟ್ಟಿದೆ.
ಇದರಿಂದ ವಾಹನ ಸವಾರರು ಹಾಗೂ ಹಿಂಬದಿ ಸವಾರರು ಬಿದ್ದು ಪೆಟ್ಟು ಮಾಡಿಕೊಳ್ಳುತ್ತಿದ್ದಾರೆ.ಒಂದಿಷ್ಟು ಜನ ಬಿದ್ದು ಮೂಲೆ ಗುಂಪಾಗಿದ್ದಾರೆ. ಚಿಕಿತ್ಸೆಗೆ ಸಾವಿರಾರು ರೂಪಾಯಿ ಖರ್ಚು ಮಾಡುತ್ತಿದ್ದಾರೆ.
ವಾಹನ ಸವಾರರ ರಕ್ಷಣೆ ಮಾಡಿದ ಗ್ರಾಮಸ್ಥರು: ಮಳೆ ಬಂದರೇ ಸಾಕು ಹಿರೇಹಳ್ಳ ಮೈದುಂಬಿ ಹರಿಯುತ್ತದೆ. ಕಳೆದ ವರ್ಷ ವಾಹನ ಸವಾರರು ಹಿರೇಹಳ್ಳಕ್ಕೆ ಕೊಚ್ಚಿ ಹೋಗುತ್ತಿದ್ದ ಘಟನೆಗಳು ನಡೆದಿವೆ. ನಂತರ ಗ್ರಾಮಸ್ಥರು ವಾಹನ ಸವಾರರನ್ನು ಹಗ್ಗದ ಮೂಲಕ ರಕ್ಷಣೆ ಮಾಡಿದ್ದಾರೆ.
ಈ ರಸ್ತೆ ನಿರ್ಮಾಣ ಮಾಡಲು ಲೋಕೋಪಯೋಗಿ ಇಲಾಖೆಯವರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಹಿರೇಹಳ್ಳಕ್ಕೆ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಸಾಕಷ್ಟು ಸಲ ಗ್ರಾಮಸ್ಥರು ಸಂಸದರಿಗೆ ಹಾಗೂ ಶಾಸಕರಿಗೆ, ಅಧಿಕಾರಿಗಳಿಗೆ ಮನವಿ ಮಾಡಿದರು ಗ್ರಾಮಸ್ಥರ ಮನವಿಗೆ ಸ್ಪಂದನೆ ದೊರಕುತ್ತಿಲ್ಲ.
ರಸ್ತೆ ಮುಖಾಂತರ ನೂರಾರು ವಾಹನಗಳು ಸಂಚರಿಸುತ್ತವೆ. ಆದರೆ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಹೀಗಾಗಿ ನಿತ್ಯ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಹಿರೇಹಳ್ಳಕ್ಕೆ ಕೆಳ ಸೇತುವೆ ಮಾಡಿದ್ದಾರೆ. ಇದರ ಮೇಲೆ ಸದಾ ನೀರು ಹರಿಯುವುದರಿಂದ ಪಾಚಿಕಟ್ಟಿ ಜಾರಿ ಬಿಳುತ್ತಿದ್ದಾರೆ. ವಾಹನ ಸವಾರರು ಕೈ ಕಾಲು ಮುರಿದುಕೊಂಡಿದ್ದಾರೆ ಎಂದು ಘಟ್ಟಿರಡ್ಡಿಹಾಳ ಗ್ರಾಮಸ್ಥರು ಹೇಳುತ್ತಾರೆ.
ಘಟ್ಟಿರಡ್ಡಿಹಾಳ - ಕವಲೂರು ನಡುವಿನ 2 ಕಿ.ಮೀ ರಸ್ತೆ ಡಾಂಬರ್ ಕಿತ್ತುಹೋಗಿದೆ. ಅನುದಾನ ಕೊರತೆಯಿಂದ ದುರಸ್ತಿ ತಡವಾಗಿದೆ. ಹಿರೇಹಳ್ಳಕ್ಕೆ ಸೇತುವೆ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಕೆಳ ಸೇತುವೆ ಮೇಲೆ ಪಾಚಿಗಟ್ಟಿದ್ದು ಗಮನಕ್ಕೆ ಇದ್ದು ಕೂಡಲೇ ತಾತ್ಕಾಲಿಕ ದುರಸ್ತಿಗೆ ಕ್ರಮಕೈಗೊಳ್ಳಲಾಗುವುದು.
–ಶಾಮಣ್ಣ ಪಾರಿವಾಳ ಎಇಇ ಲೋಕೋಪಯೋಗಿ ಇಲಾಖೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.