ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಜನಾದ್ರಿ: ಕೋವಿಡ್‌ ಆತಂಕದ ನಡುವೆಯೂ ಭಕ್ತರಿಂದ ಹನುಮನ ದರ್ಶನ

ಭಕ್ತರಿಂದ ₹10.23 ಲಕ್ಷ ಸಂಗ್ರಹ
Last Updated 24 ಸೆಪ್ಟೆಂಬರ್ 2020, 15:53 IST
ಅಕ್ಷರ ಗಾತ್ರ

ಗಂಗಾವತಿ: ಕೋವಿಡ್‌ ಆತಂಕದ ನಡುವೆಯೂ ತಾಲ್ಲೂಕಿನ ಚಿಕ್ಕರಾಂಪೂರ ಬಳಿ ಇರುವ ಐತಿಹಾಸಿಕ ಅಂಜನಾದ್ರಿಯ ಬೆಟ್ಟದ ಆಂಜನೇಯ ಸ್ವಾಮಿ ದೇಗುಲದ ಆದಾಯಕ್ಕೆ ಯಾವುದೇ ಧಕ್ಕೆಯಾಗಿಲ್ಲ.

ಗುರುವಾರ (ಸೆ.24) ದೇವಸ್ಥಾನದ ಆಡಳಿತ ಮಂಡಳಿಯು ತಹಶೀಲ್ದಾರ್‌ ಆರ್.ಕವಿತಾ ಅವರ ನೇತೃತ್ವದಲ್ಲಿ ಹುಂಡಿಯಲ್ಲಿ ಸಂಗ್ರಹವಾಗಿದ್ದ ಹಣ ಎಣಿಕೆ ಮಾಡಲಾಯಿತು. ಕೇವಲ ಒಂದು ತಿಂಗಳು 20 ದಿನಗಳ ಅವಧಿಯಲ್ಲಿ ಹುಂಡಿಯಲ್ಲಿ ₹10.23 ಲಕ್ಷ ಸಂಗ್ರಹವಾಗಿದೆ.

ಮಾರ್ಚ್‌ನಿಂದ ಅಗಸ್ಟ್‌ 4 ರವರೆಗೆ ಆರು ತಿಂಗಳುಗಳ ಕಾಲ ಕೊರೊನಾ ವೈರಸ್‌ ನಿಂದಾಗಿ ದೇವಸ್ಥಾನವನ್ನು ಜಿಲ್ಲಾಡಳಿತದ ಆದೇಶದ ಮೇರೆಗೆ ಬಂದ್‌ ಮಾಡಲಾಗಿತ್ತು. ಆದರೆ, ಸರ್ಕಾರದ ಸೂಚನೆ ಮೇರೆಗೆ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಅಗಸ್ಟ್‌ 5 ರಿಂದ ದೇವಸ್ಥಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.

ಆರಂಭದಲ್ಲಿ ಕೋವಿಡ್‌ ಆತಂಕದ ಹಿನ್ನೆಲೆಯಲ್ಲಿ ಅಂಜನಾದ್ರಿಗೆ ಆಗಮಿಸುವ ಭಕ್ತರ ಸಂಖ್ಯೆ ಕಡಿಮೆ ಇತ್ತು. ಕ್ರಮೇಣ ಭಕ್ತರ ಸಂಖ್ಯೆಯಲ್ಲಿ ದುಪ್ಪಟ್ಟಾಗಿದ್ದು, ಪ್ರತಿ ಶನಿವಾರ ಆರು ಸಾವಿರಕ್ಕೂ ಹೆಚ್ಚು ಭಕ್ತರು ಅಂಜನಾದ್ರಿಗೆ ಆಗಮಿಸಿ ಹನುಮನ ದರ್ಶನ ಪಡೆಯುತ್ತಿದ್ದಾರೆ.

ಕಳೆದ ಶ್ರಾವಣ ಶನಿವಾರ 20 ಸಾವಿರಕ್ಕೂ ಅಧಿಕ ಭಕ್ತರು ಅಂಜನಾದ್ರಿಗೆ ಭೇಟಿ ನೀಡಿದ್ದರು. ಅಲ್ಲದೆ, ಬೇರೆ ರಾಜ್ಯಗಳ ಭಕ್ತರೂ ದೇವಸ್ಥಾನಕ್ಕೆ ಭೇಟಿ ಕೊಡುತ್ತಿದ್ದಾರೆ. ಇದರಿಂದ ದೇಗುಲಕ್ಕೆ ಆಗಮಿಸುವ ಭಕ್ತರ ಸಂಖ್ಯೆಯ ಜತೆಗೆ ಆದಾಯವೂ ಏರಿಕೆಯಾಗಿದೆ.

ಜನವರಿಯಲ್ಲಿ ಹುಂಡಿ ಹಣವನ್ನು ಎಣಿಕೆ ಮಾಡಿದಾಗ ₹10.53 ಲಕ್ಷ ಹಾಗೂ 16 ದೇಶದ ನಾಣ್ಯಗಳು ಸಿಕ್ಕಿದ್ದವು. ಫೆಬ್ರುವರಿಯಲ್ಲಿ ₹6.05 ಲಕ್ಷ ಮತ್ತು ಏಳು ದೇಶದ ಕರೆನ್ಸಿ ಸಂಗ್ರಹವಾಗಿತ್ತು. ಅದಾದ ಬಳಿಕ ಮಾರ್ಚ್‌ 23 ರವರೆಗೆ ಮಾತ್ರ ದೇಗುಲವನ್ನು ತೆರೆಯಲಾಗಿತ್ತು. ಈ ಅವಧಿಯಲ್ಲಿ ₹3.08 ಲಕ್ಷ ಹಣ ಹುಂಡಿಯಲ್ಲಿ ಸಂಗ್ರಹವಾಗಿತ್ತು. ನಂತರ ಕೋವಿಡ್‌ ಹಿನ್ನೆಲೆಯಲ್ಲಿ ಸುಮಾರು ನಾಲ್ಕು ತಿಂಗಳು ದೇಗುಲವನ್ನು ಬಂದ್‌ ಮಾಡಲಾಗಿತ್ತು.

ಹುಂಡಿಯಲಿಲ್ಲ ವಿದೇಶಿ ಕರೆನ್ಸಿ: ಪ್ರತಿ ಸಲ ದೇಗುಲದ ಹುಂಡಿ ಹಣವನ್ನು ಎಣಿಕೆ ಮಾಡುವಾಗ ವಿದೇಶಿ ಕರೆನ್ಸಿಯ ನೋಟು, ನಾಣ್ಯಗಳು ಹೆಚ್ಚು ಸಿಗುತ್ತಿದ್ದವು. ಆದರೆ, ಈ ಬಾರಿ ಕೋವಿಡ್‌ ಹಿನ್ನೆಲೆಯಲ್ಲಿ ವಿದೇಶಿ ಭಕ್ತರ ದರ್ಶನಕ್ಕೆ ಅವಕಾಶ ಇಲ್ಲದೆ ಇರುವುದರಿಂದ ಹುಂಡಿಯಲ್ಲಿ ಯಾವುದೇ ವಿದೇಶಿ ಕರೆನ್ಸಿಗಳು ಸಂಗ್ರಹವಾಗಿಲ್ಲ.

ಭಕ್ತರ ತಪಾಸಣೆ: ಅಂಜನಾದ್ರಿಯಲ್ಲಿ ತಾಲ್ಲೂಕು ಅಡಳಿತ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದು, ದೇಗುಲಕ್ಕೆ ಬರುವ ಭಕ್ತರ ಮೇಲೆ ನಿಗಾವಹಿಸಿದೆ.

ಪ್ರತಿಯೊಬ್ಬರಿಗೂ ಥರ್ಮಲ್‌ ಸ್ಕ್ರೀನಿಂಗ್‌ ಮಾಡಿ, ಅವರ ವಿಳಾಸವನ್ನು ದಾಖಲಿಸಿಕೊಳ್ಳಲಾಗುತ್ತಿದೆ. ಕಡ್ಡಾಯವಾಗಿ ಮಾಸ್ಕ್‌ ಧರಿಸಿ, ಅಂತರ ಕಾಯ್ದುಕೊಂಡು ಬೆಟ್ಟ ಹತ್ತುವಂತೆ ಸೂಚಿಸಲಾಗುತ್ತಿದೆ.‌

ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಭಕ್ತರಿಗೆ ಅಂಜನಾದ್ರಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಹುಂಡಿಯಲ್ಲಿ ಇಷ್ಟೊಂದು ಹಣ ಸಂಗ್ರಹವಾಗುತ್ದೆ ಎಂದು ಅಂದಾಜಿಸಿರಲಿಲ್ಲ.
ಮಂಜುನಾಥ ಹಿರೇಮಠ, ಕಂದಾಯ ನಿರೀಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT