ಗುರುವಾರ , ಮಾರ್ಚ್ 23, 2023
23 °C

ಅಂಜನಾದ್ರಿ ಅಭಿವೃದ್ಧಿ ಕಾಮಗಾರಿಗೆ ಫೆ.15ರಂದು ಶಂಕುಸ್ಥಾಪನೆ: ಸಿಂಗ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ‘ಗಂಗಾವತಿ ತಾಲ್ಲೂಕಿನ ಆಂಜನಾದ್ರಿ ಕ್ಷೇತ್ರದ ಅಭಿವೃದ್ಧಿಗೆ ಈಗಾಗಲೇ ರೂಪಿಸಿರುವ ಯೋಜನೆಗಳ ಶಂಕುಸ್ಥಾಪನೆ ಫೆ. 15ರಂದು ನಡೆಯಲಿದ್ದು, ಕೇಂದ್ರ ಗೃಹಸಚಿವ ಅಮಿತ್‌ ಶಾ ಬರುವ ನಿರೀಕ್ಷೆಯಿದೆ’ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ತಿಳಿಸಿದರು.

ಇಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿ ‘ಅಂಜನಾದ್ರಿ ಬೆಟ್ಟಕ್ಕೆ ರೋಪ್‌-ವೇ, 600 ಕೊಠಡಿಗಳು, ಪ್ರವಾಸಿ ಮಂದಿರ, ಊಟದ ಕೊಠಡಿ, ಅಡುಗೆ ಮನೆ, ಪ್ರದಕ್ಷಣಾ ಪಥ ಸೇರಿದಂತೆ ಹಲವು ಯೋಜನೆಗಳಿಗೆ ಭೂಮಿಪೂಜೆ ಮಾಡಲಾಗುವುದು. ಒಂದು ವೇಳೆ ಅಮಿತ್‌ ಶಾ ಬರದಿದ್ದರೆ ಮುಖ್ಯಮಂತ್ರಿಯವರೇ ಕಾಮಗಾರಿಗಳಿಗೆ ಚಾಲನೆ ನೀಡುವರು’ ಎಂದು ತಿಳಿಸಿದರು.

‘ಗಂಗಾವತಿ ರೈಲು ನಿಲ್ದಾಣದಿಂದ ಅಂಜನಾದ್ರಿ ತನಕ ಕೇಬಲ್‌ ಕಾರ್‌ ನಿರ್ಮಿಸುವ ಕುರಿತು ನಿತಿನ್‌ ಗಡ್ಕರಿ ಅವರಿಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದರು.

‘ಹಂಪಿಯ ಕೋರ್‌ ವಲಯದಲ್ಲಿರುವ ಜನತಾ ಪ್ಲಾಟ್‌ ಭಾಗದಿಂದ ವಿರೂಪಾಕ್ಷೇಶ್ವರ ದೇವಸ್ಥಾನದ ಗೋಪುರ ಅದ್ಭುತವಾಗಿ ಕಾಣುತ್ತದೆ. ಆಗ ಹಂಪಿಯ ಸೌಂದರ್ಯ ಮತ್ತಷ್ಟು ಹೆಚ್ಚಾಗುತ್ತದೆ. ಆದ್ದರಿಂದ ಭವಿಷ್ಯದಲ್ಲಿ ಜನತಾ ಪ್ಲಾಟ್‌ನಲ್ಲಿ ವಾಸವಿರುವ ಕುಟುಂಬಗಳಿಗೆ ಬೇರೆ ಕಡೆ ಪುನರ್ವಸತಿ ಕಲ್ಪಿಸಿ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡುವ ಉದ್ದೇಶವಿದೆ’ ಎಂದರು.

‘ವಿಜಯನಗರ ಸಾಮ್ರಾಜ್ಯದ ಭಾಗವೇ ಆದ ಆನೆಗೊಂದಿ ಉತ್ಸವ ಆಚರಣೆಗೆ ಇಲಾಖೆಯಿಂದ ₹1 ಕೋಟಿ ನೀಡಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದಲೂ ಅನುದಾನ ಬರಲಿದೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು