ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಜನಾದ್ರಿ; ಸರ್ಕಾರದ ಸ್ಪಷ್ಟ ನಿರ್ಧಾರ ಅಗತ್ಯ

Last Updated 15 ಫೆಬ್ರುವರಿ 2022, 5:06 IST
ಅಕ್ಷರ ಗಾತ್ರ

ಕೊಪ್ಪಳ: ಪುರಾಣ ಕಾಲದಿಂದಲೂ ಹಂಪಿ ಬಳಿ ಇರುವ ಕಿಷ್ಕಿಂಧಾ ಪರ್ವತವೇ ಆಂಜನೇಯನ ಜನ್ಮಸ್ಥಳ ಎಂದು ನಂಬಿಕೆ, ಐತಿಹಾಸಿಕ ದಾಖಲೆಗಳ ಮೂಲಕ ಪಾಲಿಸಿಕೊಂಡು ಬರಲಾಗಿದೆ. ಈಗ ಮತ್ತೆ ತಿರುಮಲ ತಿರುಪತಿ ದೇವಸ್ಥಾನವು (ಟಿಟಿಡಿ) ತಿರುಮಲದ ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ ಎಂದು ಸಾಧಿಸಿ ಅಭಿವೃದ್ಧಿಗೆ ಮುಂದಾಗಿರುವುದು ಹನುಮನ ಭಕ್ತರಲ್ಲಿ ಆಕ್ರೋಶ ಮೂಡಿಸಿದೆ.

ಈ ಹಿಂದೆ ವಿವಾದ ಎದ್ದಾಗ ಇಲ್ಲಿನ ಸಂಶೋಧಕರು, ಸಾಹಿತಿಗಳು, ಇತಿಹಾಸ ತಜ್ಞರು ಬಲವಾದ ಸಾಕ್ಷ್ಯಾಧಾರಗಳನ್ನು ಮಂಡಿಸಿ ರಾಜ್ಯಪಾಲರ ಮೂಲಕ ದಾಖಲೆಗಳನ್ನು ಬಿಡುಗಡೆ ಮಾಡಿಸಿದ್ದರು. ರಾಜ್ಯದ ವಾದವನ್ನು ಕೇಂದ್ರ ಗೃಹಮಂತ್ರಿ ಅಮಿತ್ ಶಾ ಪರೋಕ್ಷವಾಗಿ ಒಪ್ಪಿಕೊಂಡು ಆಂಧ್ರಪ್ರದೇಶದ ಸಂಸದರು ಟಿಟಿಡಿ ಕುಮ್ಮಕ್ಕಿನಿಂದ ಲೋಕಸಭೆಯಲ್ಲಿ ವಿಷಯ ಪ್ರಸ್ತಾವನೆಗೆ ಮುಂದಾಗಿದ್ದಾಗ ಅದನ್ನು ತಿರಸ್ಕರಿಸಲಾಗಿತ್ತು. ಆದರೆ ಸರ್ಕಾರ ಮಾತ್ರ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಲಿಲ್ಲ.

ಇದರಲ್ಲಿ ಧರ್ಮಸೂಕ್ಷ್ಮ ಮತ್ತು ಎರಡು ರಾಜ್ಯಗಳ ಧಾರ್ಮಿಕ ಭಾವನೆಗಳು ಇರುವುದರಿಂದ ಅವಸರದ ನಿರ್ಧಾರ ತೆಗೆದುಕೊಳ್ಳಲು ಬರುವುದಿಲ್ಲ ಎಂದು ವಾದಿಸಲಾಗುತ್ತಿದೆ. ‘ಟಿಟಿಡಿ’ಯು ತನ್ನ ಇತ್ತೀಚಿನ ಸಂಶೋಧಕರ ಕೃತಿಗಳ ದಾಖಲೆ ಇಟ್ಟುಕೊಂಡು ವರ್ಚುವಲ್ ಸಭೆಯ ಮೂಲಕ ತೆಲುಗು ವಿದ್ವಾಂಸರಿಂದ ಚರ್ಚೆ ನಡೆಸಿ ತಿರುಮಲದ ಅಂಜನಾದ್ರಿ ಪರ್ವತವೇ ಆಂಜನೇಯನ ಜನ್ಮಸ್ಥಳ ಎಂದು ನಿರ್ಧರಿಸಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಕು ಸ್ಥಾಪನೆ ನಡೆಸಲು ನಿರ್ಧರಿಸಿದೆ.

ತಿರುಪತಿ ತಿರುಮಲದ ಧೋರಣೆಯಿಂದ ಕರ್ನಾಟಕದ ಅಂಜನಾದ್ರಿಯ ನಂಬಿಕೆಗೆ ಹಿನ್ನಡೆಯಾಗಲಿದೆಯೇ ಎಂಬ ಆತಂಕ ಕಾಡುತ್ತಿದೆ. ಇಲ್ಲಿನ ಸಂಶೋಧಕರು, ಇತಿಹಾಸ ತಜ್ಞರು ಬಲವಾಗಿ ವಾದ ಮಂಡಿಸಿದರೂ ರಾಜ್ಯ ಸರ್ಕಾರ ಆಸಕ್ತಿ ತೋರಿಸದೇ ಇರುವುದು ಬೇಸರ ಮೂಡಿಸುತ್ತದೆ ಎಂಬುದು ಇಲ್ಲಿನ ಇತಿಹಾಸ ಉಪನ್ಯಾಸಕರ ಅಭಿಪ್ರಾಯವಾಗಿದೆ.

ಆಂಜನೇಯನ ಹೆಸರು ಪ್ರಸ್ತಾಪವಾಗುವುದೇ ವಾಲ್ಮೀಕಿ ರಚಿತ ರಾಮಾಯಣದಿಂದ.18 ಅಧ್ಯಾಯಗಳಲ್ಲಿ ಕಿಷ್ಕಿಂಧಾ ಕಾಂಡ, ಸುಂದರಕಾಂಡದಲ್ಲಿ ಕಿಷ್ಕಿಂಧಾ ಪ್ರದೇಶದ ವರ್ಣನೆ ಇದೆ. ಕಿಷ್ಕಿಂಧಾ ಎಂಬ ಪ್ರದೇಶದಲ್ಲಿಯೇ ಅಂಜನಾದ್ರಿ ಪರ್ವತವಿದೆ. ಇದು ಆಂಜನೇಯನ ತಾಯಿ ಅಂಜನಾದೇವಿಯ ತವರು ಮನೆ. ವಾನರ ವೀರರಾದ ವಾಲಿ-ಸುಗ್ರೀವರ ನಾಡು ಎಂದೂ ಇದು ಪ್ರಸಿದ್ಧಿಯಾಗಿದೆ. ಶಬರಿ ಮಂದಿರ ಕೂಡಾ ಇದೆ. ಅನೇಕ ಸಾಹಿತ್ಯ ಕೃತಿಗಳೂ ಈ ಪ್ರದೇಶದ ವರ್ಣನೆಯನ್ನು ಹಾಡಿ ಹೊಗಳಿವೆ.

ಪ್ರಾಗೈತಿಹಾಸಿಕ ಕಾಲದ ಪಳೆಯುಳಿಕೆಗಳು, ಮಡಿಕೆ, ಗುಹಾ ಚಿತ್ರಗಳು, ನಿಗೂಢ ಲಿಪಿಗಳಿಂದ ಈ ಪ್ರದೇಶ ಅತ್ಯಂತ ಪುರಾತನ ಎಂಬುದು ನಿರೂಪಿತವಾಗಿದೆ. ನಂತರದ ಶಾಸನಗಳಲ್ಲಿ ಕಿಷ್ಕಿಂಧೆಯ ವಿವರಣೆ ದೊರಕುತ್ತದೆ. ಪಕ್ಕದಲ್ಲಿಯೇ ಹನುಮನಹಳ್ಳಿ ಇದೆ. ಇಷ್ಟೆಲ್ಲ ದಾಖಲೆ ಸಲ್ಲಿಸಿದರೂ ಟಿಟಿಡಿ ಮತ್ತೆ ತನ್ನ ವಿತಂಡ ವಾದವನ್ನುಮುಂದುವರಿಸಿರುವುದು ಬೇಸರ ತಂದಿದೆ ಎನ್ನುತ್ತಾರೆ ಇಲ್ಲಿನ ಸಂಶೋಧಕರು.

‘ದೇಶದಲ್ಲಿ 14 ಅಂಜನಾದ್ರಿ ಪರ್ವತಗಳು ಇವೆ. ಅವು ರಾಮಾಯಣಗಳೊಂದಿಗೆ ಸಂಬಂಧ ಹೊಂದಿರುವುದು ನಿಜ. ಆದರೆ ಅವುಗಳೆಲ್ಲ ಆಂಜನೇಯನ ಜನ್ಮಸ್ಥಳಗಳು ಅಲ್ಲ’ ಎನ್ನುತ್ತಾರೆ ಅಂಜನಾದ್ರಿ ದೇವಸ್ಥಾನದ ಮುಖ್ಯ ಅರ್ಚಕ ವಿದ್ಯಾದಾಸ ಬಾಬಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT