ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ | ನಿಗಮ ಮಂಡಳಿ ಸ್ಥಾನಮಾನ: ರಾಯರಡ್ಡಿ ನಿರಾಕರಣೆ, ಹಿಟ್ನಾಳಗೆ ಬಂಪರ್‌?

Published 24 ನವೆಂಬರ್ 2023, 5:46 IST
Last Updated 24 ನವೆಂಬರ್ 2023, 5:46 IST
ಅಕ್ಷರ ಗಾತ್ರ

ಕೊಪ್ಪಳ: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರ ಚುಕ್ಕಾಣಿ ಹಿಡಿದು ಆರು ತಿಂಗಳಾದರೂ ನಿಗಮ ಮಂಡಳಿಗಳ ನೇಮಕಕ್ಕೆ ಇಷ್ಟು ದಿನಗಳ ಕಾಲ ಪ್ರಕ್ರಿಯೆ ನಡೆದಿರಲಿಲ್ಲ. ಕೆಲ ದಿನಗಳ ಹಿಂದೆ ಆ ಕಾರ್ಯ ಅಂತಿಮ ಹಂತ ತಲುಪಿದ್ದು ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಗೆದ್ದಿರುವ ರಾಘವೇಂದ್ರ ಹಿಟ್ನಾಳ ಅವರಿಗೆ ‘ಬಂಪರ್‌’ ಅವಕಾಶ ಒಲಿಯುವ ಸಾಧ್ಯತೆ ದಟ್ಟವಾಗಿದೆ.

ಐದು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಕೊಪ್ಪಳ ಜಿಲ್ಲೆಯಲ್ಲಿ ಮೂರು ಜನ ಕಾಂಗ್ರೆಸ್‌ ಶಾಸಕರು ಇದ್ದಾರೆ. ಅದರಲ್ಲಿ ಕನಕಗಿರಿ ಕ್ಷೇತ್ರದ ಶಿವರಾಜ ತಂಗಡಗಿ ಎರಡು ಖಾತೆಗಳನ್ನು ಹೊಂದಿದ್ದಾರೆ. ಜೊತೆಗೆ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿದ್ದಾರೆ.

ಯಲಬುರ್ಗಾ ಕ್ಷೇತ್ರದಿಂದ ಬಸವರಾಜ ರಾಯರಡ್ಡಿ 1985ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಈಗ ಅವರು ಶಾಸಕರಾಗಿರುವುದು ಆರನೇ ಬಾರಿ. ಹೀಗಾಗಿ ಜಿಲ್ಲೆಯ ಅತ್ಯಂತ ಹಿರಿಯ ಶಾಸಕರು ಅವರು. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಪಕ್ಷದ ಪ್ರಮುಖರು ಪಾಲ್ಗೊಂಡಿದ್ದರು. ಆಗ ನಿಗಮ ಮಂಡಳಿಗಳ ನೇಮಕದ ಬಗ್ಗೆ ಚರ್ಚೆಯಾದಾಗ ವರಿಷ್ಠರು ಕೊಪ್ಪಳ ಜಿಲ್ಲೆಯ ಮೊದಲ ಆದ್ಯತೆಯಾಗಿ ಬಸವರಾಜ ರಾಯರಡ್ಡಿ ಅವರಿಗೆ ನಿಗಮ ಮಂಡಳಿಗೆ ಆಯ್ಕೆ ಮಾಡುವುದಾಗಿ ತಿಳಿಸಿದ್ದಕ್ಕೆ ಅವರು ನಯವಾಗಿ ತಿರಸ್ಕರಿಸಿದ್ದಾರೆ. ರಾಘವೇಂದ್ರ ಹಿಟ್ನಾಳ ಅವರನ್ನೇ ಮಾಡಿ ಎಂದೂ ಹೇಳಿದ್ದಾರೆ.

ಹೀಗಾಗಿ ಹಿಟ್ನಾಳ ನೇಮಕವಾಗುವ ಸಾಧ್ಯತೆಯೂ ಹೆಚ್ಚಿದೆ.  ಹಿಟ್ನಾಳ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ‘ಗುರು‘ವಿನ ಲಕ್‌ ಕೂಡ ಅವರಿಗೆ ಒಲಿಯುವ ಸಾಧ್ಯತೆಯಿದೆ.

ಒಂದೇ ಹಕ್ಕಿಗೆ ಎರಡು ಕಲ್ಲು: ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷದಿಂದ ಬಿ ಫಾರ್ಮ್‌ ಗಿಟ್ಟಿಸಲು ಈಗಾಗಲೇ ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ನಲ್ಲಿ ತುರುಸಿನ ಪೈಪೋಟಿ ನಡೆಯುತ್ತಿದೆ.

ಹಿಂದಿನ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಶಾಸಕರ ಸಹೋದರ ರಾಜಶೇಖರ ಹಿಟ್ನಾಳ, ಕುಷ್ಟಗಿ ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಮತ್ತು ಬಸನಗೌಡ ಬಾದರ್ಲಿ ಕೂಡ ಈ ಸಲ ಆಕಾಂಕ್ಷಿಗಳಾಗಿದ್ದಾರೆ. ರಾಘವೇಂದ್ರ ಹಿಟ್ನಾಳ ಅವರಿಗೆ ನಿಗಮ ಮಂಡಳಿ ಸ್ಥಾನ ನೀಡಿ ಲೋಕಸಭಾ ಟಿಕೆಟ್‌ ಇನ್ನೊಬ್ಬರಿಗೆ ಕೊಡುವ ಲೆಕ್ಕಾಚಾರವೂ ಇದರಲ್ಲಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ಈ ಮೂಲಕ ತಮ್ಮ ಆಪ್ತನನ್ನು ಸಮಾಧಾನ ಪಡಿಸಲು ಸಾಧ್ಯವಾಗುತ್ತದೆ ಎನ್ನಲಾಗುತ್ತಿದೆ.

ತಮ್ಮ ನಾಯಕರ ಗೆಲುವಿಗಾಗಿ ಚುನಾವಣಾ ಸಮಯದಲ್ಲಿ ಹಗಲಿರುಳು ಕೆಲಸ ಮಾಡಿದವರಿಗೆ ನಿಗಮ ಮಂಡಳಿ ಸ್ಥಾನಮಾನ ಕೊಡಬೇಕು ಎನ್ನುವ ಬೇಡಿಕೆಯನ್ನು ಪಕ್ಷದ ಕಾರ್ಯಕರ್ತರು ಮುಂದಿಡುತ್ತಿದ್ದಾರೆ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗೂಳಪ್ಪ ಹಲಗೇರಿ ಮತ್ತು ಹನುಮಂತಪ್ಪ ಅರಿಸಿನಕೇರಿ ‘ನಮಗೂ ನಿಗಮ ಮಂಡಳಿಯಲ್ಲಿ ಸ್ಥಾನ ಕೊಡಿ’ ಎನ್ನುತ್ತಿದ್ದಾರೆ. ಆದರೆ, ಪಕ್ಷದ ವರಿಷ್ಠರು ಬಹುತೇಕ ಶಾಸಕರಿಗೆ ನಿಗಮ ಮಂಡಳಿ ಸ್ಥಾನಮಾನ ನೀಡಲು ಮುಂದಾಗಿರುವುದರಿಂದ ಆಕಾಂಕ್ಷಿ ಮುಖಂಡರು ಇನ್ನಷ್ಟು ಅವಧಿ ಕಾಯಬೇಕಾಗಬಹುದು.

ರಾಘವೇಂದ್ರ ಹಿಟ್ನಾಳ
ರಾಘವೇಂದ್ರ ಹಿಟ್ನಾಳ
ನಿಗಮ ಮಂಡಳಿ ಇಷ್ಟವಿಲ್ಲ: ರಾಯರಡ್ಡಿ
ಕೊಪ್ಪಳ: ‘ನನಗೆ ನಿಗಮ ಮಂಡಳಿ ಇಷ್ಟವಿಲ್ಲ. ಈ ಸ್ಥಾನಮಾನ ಸಚಿವಗಿರಿಗಿಂತ ಕಡಿಮೆ ಎನ್ನುವ ಮನೋಭಾವನೆಯೂ ಇಲ್ಲ. ಸಚಿವ ಸ್ಥಾನ ಕೊಡಬೇಕು ಎನ್ನುವುದೂ ಇಲ್ಲ’ ಎಂದು ಶಾಸಕ ಬಸವರಾಜ ರಾಯರಡ್ಡಿ ಹೇಳಿದರು. ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ನಿಗಮ ಮಂಡಳಿಗೆ ನೇಮಕವಾದರೆ ಜನರ ಸೇವೆ ಮಾಡಲು ಆಗುವುದಿಲ್ಲ. ಇದರಿಂದ ಕ್ಷೇತ್ರಕ್ಕೆ ಏನು ಅನುಕೂಲವಾಗುತ್ತದೆ? ಸಚಿವ ಸ್ಥಾನವಾದರೆ ರಾಜ್ಯದ ಜನರಿಗೆ ಸೇವೆ ಮಾಡಬಹುದು ಕ್ಷೇತ್ರದ ಜನರಿಗೂ ಅನುಕೂಲವಾಗುತ್ತದೆ. ಸಚಿವ ಸ್ಥಾನ ಕೊಡದಿದ್ದರೂ ನನಗೆ ಖುಷಿಯಿದೆ. ಸಚಿವ ಸ್ಥಾನ ಕೊಡಿ ಎಂದು ನಾನು ಕೇಳುವುದಿಲ್ಲ. ನಿಗಮ ಮಂಡಳಿ ನಮ್ಮ ಜಿಲ್ಲೆಗೆ ಕೊಡುವುದಾದರೆ ರಾಘವೇಂದ್ರ ಹಿಟ್ನಾಳಗೆ ಕೊಡಿ ಎಂದು ನಾನೇ ಹೇಳಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT