ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಪ್ಪಳ | ಸ್ನೇಹಿತನಿಂದಲೇ ಆರೋಪಿಗಳಿಗೆ ಮಾಹಿತಿ ಸೋರಿಕೆ!

Published 27 ಫೆಬ್ರುವರಿ 2024, 15:35 IST
Last Updated 27 ಫೆಬ್ರುವರಿ 2024, 15:35 IST
ಅಕ್ಷರ ಗಾತ್ರ

ಕೊಪ್ಪಳ: ಜಿಲ್ಲೆಯ ಕಾರಟಗಿಯಲ್ಲಿ ಫೆ. 25ರಂದು ಮಧ್ಯಾಹ್ನ ಅಮರಾಪುರ ಗ್ರಾಮದ ಸುರೇಶ ರೆಡ್ಡಿ ಎಂಬುವರ ₹20 ಲಕ್ಷ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದವರಿಗೆ ಶೋಧ ಕಾರ್ಯ ಮುಂದುವರಿದಿದೆ.

ಅಚ್ಚರಿಯೆಂದರೆ ಸುರೇಶ ರೆಡ್ಡಿ ಅವರ ಪರಿಚಿತರಾಗಿ ನಂಬಿಕೆ ಗಳಿಸಿದ್ದ ಗಂಗಾವತಿ ತಾಲ್ಲೂಕಿನ ಢಾಣಾಪುರದ ಹನುಮೇಶ ಅಂಗಜಾಲ ಎಂಬುವರೇ ಆರೋಪಿಗಳಿಗೆ ಮಾಹಿತಿದಾರರಾಗಿದ್ದ ಎನ್ನುವ ವಿಷಯ ಪೊಲೀಸರ ತನಿಖೆ ವೇಳೆ ಬಹಿರಂಗವಾಗಿದೆ. ಫೋನ್‌ ಕರೆಗಳ ದಾಖಲೆ ಸೇರಿದಂತೆ ವಿವಿಧ ಮೂಲಗಳಿಂದ ಮಾಹಿತಿ ಕಲೆಹಾಕಿದ ಪೊಲೀಸರಿಗೆ ಈ ವಿಷಯದಿಂದಲೇ ಘಟನೆ ನಡೆದ ಎರಡು ದಿನಗಳ ಒಳಗೆ ಆರೋಪಿಗಳನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗಿದೆ.

‘ನಿವೇಶನ ಖರೀದಿಗಾಗಿ ಸುರೇಶ ರೆಡ್ಡಿ ಹಣ ಹೊಂದಿಸಿಕೊಂಡಿದ್ದು ತೆಗೆದುಕೊಂಡು ಹೋಗುವಾಗ ದೋಚಲಾಗಿತ್ತು. ಘಟನೆ ನಡೆದ ನಾಲ್ಕು ತಾಸಿನಲ್ಲಿಯೇ ನಮಗೆ ಆರೋಪಿಗಳ ಮಾಹಿತಿ ಲಭ್ಯವಾಗಿತ್ತು. ವಿವಿಧ ಮೂಲಗಳಿಂದ ಮಾಹಿತಿ ಕಲೆಹಾಕಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಯಶೋಧಾ ಎಸ್‌. ವಂಟಗೋಡಿ ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 

ಆರೋಪಿಗಳನ್ನು ಎರಡು ಹಂತಗಳಲ್ಲಿ ಬಂಧಿಸಲಾಗಿದ್ದು ಫೆ.26ರಂದು ಗಂಗಾವತಿಯ ರಾಣಾ ಪ್ರತಾಪ ಸಿಂಗ್‌ ಸರ್ಕಲ್‌ ಬಳಿ ಬಿಳಿಕಾರಿನಲ್ಲಿ ಹೊರಟಿದ್ದ ಹಿರೇಜಂತಕಲ್‌ನ ಹುಸೇನಬಾಷಾ ಸುಳೇಕಲ್‌, ಗಂಗಾವತಿಯ ಎಚ್‌.ಆರ್‌.ಎಸ್‌. ಕಾಲೊನಿಯ ಶಿವಮೂರ್ತಿ ಮತ್ತು ಹೊಸಪೇಟೆ ತಾಲ್ಲೂಕಿನ ಕಟರಾಂಪುರದ ಉದಯ ಸಿಂಗ್‌ ಎಂಬುವರನ್ನು ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳ ಪತ್ತೆಯಾಗಿದೆ. 27ರಂದು ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಗಿಣಿಗೇರಾ ಹೆದ್ದಾರಿಯ ಬೈಪಾಸ್‌ ಬಳಿ ಹನುಮೇಶ, ಹಿರೇಜಂತಕಲ್‌ನ ಕರೀಂಸಾಬ್‌  ಮತ್ತು ಗಂಗಾವತಿಯ ವಿರೂಪಾಪುರದ ಪೃಥ್ವಿರಾಜ ಹಿರೇಮಠ ಅವರನ್ನು ಬಂಧಿಸಲಾಗಿದೆ.

ಡಿವೈಎಸ್‌ಪಿಗಳಾದ ಮುತ್ತಣ್ಣ ಸವರಗೋಳ, ಸಿದ್ದಲಿಂಗಪ್ಪಗೌಡ ಪಾಟೀಲ, ಕೊಪ್ಪಳ ಗ್ರಾಮೀಣ ಠಾಣೆಯ ಸಿಪಿಐ ಸುರೇಶ್ ಪಾಲ್ಗೊಂಡಿದ್ದರು.

₹17.32 ಲಕ್ಷ ವಶ

ಕೊಪ್ಪಳ: ಆರೋಪಿಗಳು ದೋಚಿದ್ದ ಒಟ್ಟು ₹20 ಲಕ್ಷದಲ್ಲಿ ಪೊಲೀಸರು ₹17.32 ಲಕ್ಷ ವಶಕ್ಕೆ ಪಡೆದುಕೊಂಡಿದ್ದು ಇನ್ನಷ್ಟು ಆರೋಪಿಗಳು ಶೋಧವಾದ ಬಳಿಕ ಉಳಿದ ಹಣ ಸಿಗುತ್ತದೆ. ಆಗಿರುವ ಆರು ಜನ ಮತ್ತು ಇನ್ನಷ್ಟು ಜನ ಆರೋಪಿಗಳು ಹಣವನ್ನು ಹಂಚಿಕೊಂಡಿದ್ದಾರೆ ಎಂದು ಎಸ್‌.ಪಿ. ಯಶೋಧಾ ತಿಳಿಸಿದರು. ಕೃತ್ಯಕ್ಕೆ ಬಳಸಿದ ಕಾರು ಹಾಗೂ ಆಯುಧ ಪೊಲೀಸರು ಜಪ್ತಿ ಮಾಡಿದ್ದಾರೆ. ‘ಘಟನೆ ನಡೆದು ಎರಡು ದಿನಗಳ ಒಳಗೆಯೇ ನಮ್ಮ ಪೊಲೀಸರು ಶ್ರಮಪಟ್ಟು ಆರೋಪಿಗಳನ್ನು ಪತ್ತೆ ಹಚ್ಚಿದ್ದು ಅವರಿಗೆ ವಿಶೇಷ ಬಹುಮಾನ ಘೋಷಿಸಲಾಗಿದೆ. ಕೊಪ್ಪಳ ನಗರದಲ್ಲಿ ಸಂಚಾರ ದಟ್ಟಣೆ ನಿರ್ವಹಣೆ ಬಗ್ಗೆ ಕ್ರಮ ವಹಿಸಲಾಸಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT