ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಗಳೇ ಪ‌್ರಜಾಪ್ರಭುತ್ವ ಅಲ್ಲ: ಅಸ್ಸಾದಿ

ಕರ್ನಾಟಕ ವಿಧಾನಸಭಾ ಚುನಾವಣೆ: ಒಳಗೆ ಹೊರಗೆ ಸಂವಾದ ಕಾರ್ಯಕ್ರಮ
Last Updated 24 ಜೂನ್ 2018, 16:12 IST
ಅಕ್ಷರ ಗಾತ್ರ

ಕೊಪ್ಪಳ: ‘ಭಾರತದ ಚುನಾವಣೆಗಳು ಉತ್ಸವಗಳ ರೀತಿಯಲ್ಲಿ ನಡೆಯುತ್ತವೆ. ಅದಕ್ಕಾಗಿ ಚುನಾಣೆಗಳೇ ಪ್ರಜಾಪ್ರಭುತ್ವ ಅಲ್ಲ’ ಎಂದು ರಾಯಚೂರು ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಪ್ರೊ.ಮುಜಾಫರ್‌ ಅಸ್ಸಾದಿ ಹೇಳಿದರು.

ನಗರದ ಸಾಹಿತ್ಯ ಭವನದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಆಶ್ರಯದಲ್ಲಿ ‘ಕರ್ನಾಟಕ ವಿಧಾನಸಭಾ ಚುನಾವಣೆ: ಒಳಗೆ ಹೊರಗೆ’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ ಭಾರತದಲ್ಲಿ ಚುನಾವಣೆಗಳು ಉತ್ಸವಗಳಂತೆ ನಡೆಯುತ್ತವೆ. ದೇಶದಲ್ಲಿ ಎಲ್ಲದರೊಂದು ಕಡೆ ಚುನಾವಣೆ ನಡೆಯುತ್ತಲೇ ಇರುತ್ತವೆ. ಇದರಿಂದ ಚುನಾವಣೆಗಳೇ ಪ್ರಜಾಪ್ರಭುತ್ವ ಅಲ್ಲ. ಚುನಾವಣೆಗಳು ಪ್ರಜಾಪ್ರಭುತ್ವದ ಒಂದು ಭಾಗವಷ್ಟೆ. ಚುನಾವಣೆಗಳು ಇಲ್ಲದಿದ್ದರೂ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿರುತ್ತದೆ. ಹೊಸ ಹೊಸ ಮುಖಗಳನ್ನು ಪರಿಚಯಿಸಲು ಮಾತ್ರ ಚುನಾವಣೆಗಳನ್ನು ನಡೆಸಲಾಗುತ್ತದೆ’ ಎಂದು ಹೇಳಿದರು.

‘ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಡವ–ಶ್ರೀಮಂತ, ಮೇಲು–ಕೀಳು ಎನ್ನದೇ ಯಾವುದೇ ವ್ಯಕ್ತಿ ಬೇಕಾದರೂ ಮುಖ್ಯಮಂತ್ರಿ, ಪ್ರಧಾನಿ ಸೇರಿದಂತೆ ಯಾವುದೇ ಹುದ್ದೆ ಬೇಕಾದರೂ ಅಲಂಕರಿಸಬಹುದು. ಆದರೆ ಕುಟುಂಬ ರಾಜಕಾರಣ ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆತಂಕಕಾರಿ ಬೆಳವಣಿಗೆ. ಇದಕ್ಕೆ ಅಮೆರಿಕ ಹೊರತಾಗಿಲ್ಲ. ಅಮೆರಿಕದಲ್ಲಿ ಸುಮಾರು 3,500 ಕುಟುಂಬಗಳು ಅಲ್ಲಿನ ರಾಜಕಾರಣ ಮಾಡುತ್ತಿವೆ. ಇದು ಭಾರತದ ಗಾಂಧಿ ಕುಟುಂಬಕ್ಕೆ ಮಾತ್ರ ಸೀಮಿತವಾಗಿಲ್ಲ’ ಎಂದು ವಿವರಿಸಿದರು.

‘ಜಾತಿಗಳು, ಸಮುದಾಯಗಳು ಮಹತ್ವ ಪಡೆದಿವೆ. ಚುನಾವಣೆಗಳ ಮಾನದಂಡ ಪಕ್ಷಗಳು ಎನ್ನುವುದಾದರೆ ಒಳ್ಳೆಯದು. ಆದರೆ ದೇಶದಲ್ಲಿ ಸಾವಿರಾರು ಪಕ್ಷಗಳು ಇರಬೇಕು. ಏಕೆಂದರೆ ನೂರಾರು ಜಾತಿಗಳು, ಸಮುದಾಯಗಳು ರಾಜಕೀಯದಲ್ಲಿ ಭಾಗವಹಿಸುತ್ತಿಲ್ಲ. ಇದರಲ್ಲಿ ಸೋಲು–ಗೆಲುವು ಮುಖ್ಯವಲ್ಲ. ಇರುವಿಕೆಯನ್ನೂ ಅದು ಸೂಚಿಸುತ್ತದೆ. ದಲಿತರು ಮೀಸಲು ಕ್ಷೇತ್ರಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸಾಮಾನ್ಯ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತಿಲ್ಲ. ಅಲ್ಲದೆ ಜಾತಿ ವ್ಯವಸ್ಥೆಯ ಕಾರಣಕ್ಕೆ ಮೀಸಲು ಕ್ಷೇತ್ರದಲ್ಲಿ ಹೆಚ್ಚು ನೋಟಾ ಮತಗಳು ಚಲಾವಣೆಗೊಳ್ಳುತ್ತವೆ. ಆದ್ದರಿಂದ ರಾಜಕೀಯ ಪ್ರಜ್ಞೆಗಿಂತ ಜಾತಿ ಪ್ರಜ್ಞೆ ಹೆಚ್ಚಾಗಿದೆ’ ಎಂದರು.

‘ನೆಹರು, ಮಹಾತ್ಮ ಗಾಂಧಿ, ಅಂಬೇಡ್ಕರ್‌ ಅವರ ಕಾಲಘಟ್ಟದಲ್ಲಿ ಮೂರು ಹಂತದಲ್ಲಿ ಪ್ರಜಾಪ್ರಭುತ್ವ ಗಟ್ಟಿಗೊಂಡಿತು. ಅಲ್ಲದೇ ನೆಹರು, ಇಂದಿರಾಗಾಂಧಿ, ರಾಜೀವ ಗಾಂಧಿ ಸೇರಿದಂತೆ ಇವರು ಕೂಡಾ ಪ್ರಜಾಪ್ರಭುತ್ವದ ಉಳಿವಿಗೆ ಕಾರಣರಾದರು. ಇಂದಿರಾಗಾಂಧಿ ಅವರು ತುರ್ತು ಪರಿಸ್ಥಿತಿ ಏರಿ ಸ್ವಾತಂತ್ರ್ಯಹರಣದಿಂದ ದ್ವಂಧ್ವತೆಯನ್ನು ಸೃಷ್ಟಿಸಿದ್ದರು. ರಾಜೀವ್‌ಗಾಂಧಿ ಗ್ರಾಮಸಭೆ, ಪಂಚಾಯತ್‌ ರಾಜ್‌ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಪ್ರಜಾಪ್ರಭುತ್ವವನ್ನು ಮತ್ತಷ್ಟು ಗಟ್ಟಿಗೊಳಿಸಿದರು’ ಎಂದು ಅಭಿಪ್ರಾಯಪಟ್ಟರು.

ರಾಜ್ಯ ಮಹಿಳಾ ಆಯೋಗದ ಸದಸ್ಯೆ ಮಾಲತಿ ನಾಯಕ್‌, ರಾಜ್ಯ ವಕೀಲರ ಪರಿಷತ್‌ ಸದಸ್ಯ ಸಂದ್ಯಾ ಮಾದಿನೂರು, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಡಾ.ಎಚ್‌.ಎಸ್‌.ಅನುಪಮಾ ಮಹಾದೇವಿ ಕಂಬಳಿ ಇದ್ದರು.

ವಾಣಿ ಪೆರಿಯೋಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಲಕ್ಷ್ಮಿ ಕೊಟಗಿ ನಿರೂಪಿಸಿದರು.

ಮಾಯಾವತಿ ಜಾತಿ ರಾಜಕಾರಣದ ಬಲಿಪಶು

‘ಜಾತಿ ರಾಜಕಾರಣ ಪ್ರಜಾಪ್ರಭುತ್ವದಲ್ಲಿ ನಡೆಯುವುದಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧ ಭಾಗ್ಯಗಳಿಂದ ರಾಜ್ಯವನ್ನು ಹಸಿವು ಮುಕ್ತ ಮಾಡಿ ಕೇವಲ ಜಾತಿ, ಸಮುದಾಯದಲ್ಲಿ ಗುರುತಿಸಿಕೊಂಡರು. ಅಹಿಂದ, ಅಲ್ಪಸಂಖ್ಯಾತ, ದಲಿತ ಎಂದು ಜಾತಿಗಳ ಸಮೀಕರಣ ರಾಜ್ಯದಲ್ಲಿ ನಡೆಯಿತು. ಅಹಿಂದ, ಅಲ್ಪಸಂಖ್ಯಾತ, ದಲಿತರಲ್ಲಿ ಎಡ, ಬಲ ಪಂಗಡಗಳು ಕಾಂಗ್ರೆಸ್‌ ಮತ್ತು ಬಿಜೆಪಿಗೆ ಒಂದೊಂದು ಪಂಗಡ ಮತ ಹಾಕುತ್ತದೆ ಎಂದು ಸಮೀಕರಿಸಲಾಗಿತ್ತು. ಜೆಡಿಎಸ್‌ ಒಕ್ಕಲಿಗ ಸಮುದಾಯದ ಮೇಲೆ ಅವಲಂಬಿತವಾಗಿದೆ. ಹೀಗಾಗಿ ಅನೇಕರು ಸೋಲನ್ನು ಕಂಡರು. ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಅವರು ಜಾತಿ ರಾಜಕಾರಣದ ಬಲಿಪಶು’ ಎಂದು ಹೇಳಿದರು.

ಕೇಂದ್ರ ಮತ್ತು ವಿಧಾನಸಭಾ ಚುನಾವಣೆಗಳು ಏಕಕಾಲಕ್ಕೆ ನಡಯಬೇಕು. ನೀತಿ ಸಂಹಿತಿ ಜಾರಿಯಾದಾಗಿನಿಂದ ಜಾತಿ, ಸಮುದಾಯ, ಧರ್ಮದ ವಿಚಾರವಾಗಿ ಚರ್ಚೆ ಮಾಡದಂತೆ ಕ್ರಮ ಕೈಗೊಳ್ಳಬೇಕು.
- ಮುಜಾಫರ್‌ ಅಸ್ಸಾದಿ, ವಿಶೇಷಾಧಿಕಾರಿ, ರಾಯಚೂರು ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT