ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರಿಯರ್ಸ್‌ಗೆ ‘ಪ್ರಜಾವಾಣಿ ಸಾಧಕ’ ಗೌರವ

ಉದ್ಯಮಿ ಅಶ್ವಿನ್ ಚಾಂಗಡಾ, ಸಮಾಜ ಸೇವಕ ಕಳಕನಗೌಡರಿಗೆ ಪುರಸ್ಕಾರ ಪ್ರದಾನ
Last Updated 14 ಫೆಬ್ರುವರಿ 2021, 3:31 IST
ಅಕ್ಷರ ಗಾತ್ರ

ಕೊಪ್ಪಳ: ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ಜನರ ನೆರವಿಗೆ ಬಂದ ಜಿಲ್ಲೆಯ ಇಬ್ಬರು ಕೊರೊನಾ ವಾರಿಯರ್ಸ್‌ಗಳಿಗೆ ‘ಪ್ರಜಾವಾಣಿ ಸಾಧಕರು’ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಭಾರತೀಯ ಜೈನ್ ಸಂಘಟನಾ ಜಿಲ್ಲಾ ಘಟಕದ ಅಧ್ಯಕ್ಷ ಅಶ್ವಿನ್‌ ಚಾಂಗಡಾ ಹಾಗೂಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ, ಸಮಾಜ ಸೇವಕ ಗಂಗಾವತಿಯ ಕಳಕನಗೌಡ ಪಾಟೀಲ ಅವರಿಗೆ ಪುರಸ್ಕಾರ ನೀಡಲಾಯಿತು.

ಕೊರೊನಾ ಸಂಕಷ್ಟದ ಸಮಯದಲ್ಲಿ ಅಶ್ವಿನ್‌ ಚಾಂಗಡಾ ಜೈನ ಸಮಾಜದ ಸಹಕಾರದೊಂದಿಗೆ ಪ್ರತಿನಿತ್ಯ 300 ಜನ ರೋಗಿಗಳಿಗೆ ಆಹಾರ ವಿತರಿಸಿದ್ದಾರೆ. ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರಿಗೆ ಬಿಸಿ, ಶುಚಿಯಾದ ಆಹಾರ ತಲುಪಿಸಿದ್ದಾರೆ. ಲಾಕ್‌ಡೌನ್‌ನಿಂದ ತೊಂದರೆಗೆ ಒಳಗಾಗಿದ್ದ 100ಕ್ಕೂ ಹೆಚ್ಚು ವಲಸೆ ಕಾರ್ಮಿಕರಿಗೆ ಆಶ್ರಯ ನೀಡಿ ಮಾನವೀಯತೆ ಮೆರೆದಿದ್ದರು.

ಅಶ್ವಿನ್ ಚಾಂಗಡಾ ವೃತ್ತಿಯಲ್ಲಿ ಉದ್ಯಮಿಯಾಗಿದ್ದು, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

‘90 ಜನರ ತುಂಬು ಕುಟುಂಬ ನಮ್ಮದು. ಸೇವೆಗೆ ನಾವು ಸದಾ ಸಿದ್ಧ. ಮನೆಯವರು ಸಹಕಾರ ನೀಡಿದ್ದರಿಂದ ಜನರ ಸಂಕಷ್ಟಕ್ಕೆ ಸ್ಪಂದಿಸಲು ಸಹಕಾರವಾಯಿತು. ನಮ್ಮ ಅಲ್ಪ ಸೇವೆ ಗುರುತಿಸಿ ರಾಜ್ಯದ ಪ್ರತಿಷ್ಠಿತ ಮತ್ತು ವಿಶ್ವಾಸರ್ಹ ಪತ್ರಿಕೆ ಪ್ರಜಾವಾಣಿ ಸಾಧಕ ಪ್ರಶಸ್ತಿ ನೀಡಿದ್ದು, ಜವಾಬ್ದಾರಿ ಹೆಚ್ಚಿಸಿದೆ’ ಎಂದು ಅಶ್ವಿನ್ ಚಾಂಗಡಾ ಹೇಳಿದರು.

ಕಳಕನಗೌಡ ಪಾಟೀಲ: ಮೂಲತಃ ಯಲಬುರ್ಗಾ ತಾಲ್ಲೂಕಿನವರಾದ ಕಳಕನಗೌಡಾ ಪಾಟೀಲ ಉದ್ಯಮ, ವ್ಯಾಪಾರ, ವಹಿವಾಟಿನ ಕಾರಣಕ್ಕೆ ಗಂಗಾವತಿಯಲ್ಲಿ ನೆಲೆಸಿದ್ದಾರೆ. ವೀರಶೈವ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತದ ಸಹಯೋಗದೊಂದಿಗೆ ಜನರಿಗೆ ನೆರವಾಗಿದ್ದಾರೆ. ಆಹಾರದ ಪೊಟ್ಟಣ, ಮಾಸ್ಕ್‌ ವಿತರಣೆ ಮಾಡಿದ್ದಲ್ಲದೆ, ತಮ್ಮ ಸ್ವಂತ ವಾಹನಗಳನ್ನು ಕೊರೊನಾ ಸ್ವಯಂಸೇವಕರಿಗೆ ನೀಡಿದ್ದರು.

ಗಂಗಾವತಿ ಭಾಗದ ರೈಸ್‌ ಮಿಲ್‌ ಕಾರ್ಮಿಕರಿಗೆ ಸಹಾಯ ಕೂಡಾ ಮಾಡಿದ್ದು, ವಿವಿಧ ಜನಪರ ಕಾರ್ಯಗಳನ್ನು ಮಾಡಿ ಮಾದರಿಯಾಗಿದ್ದಾರೆ. ಇವರ ಸೇವೆಯನ್ನು ಗುರುತಿಸಿ ‘ಪ್ರಜಾವಾಣಿ ಸಾಧಕರು’ ಪುರಸ್ಕಾರ ನೀಡಲಾಗಿದೆ.

ಪುರಸ್ಕಾರ ಸ್ವೀಕರಿಸಿ ಮಾತನಾಡಿದ ಅವರು, ‘ನಮ್ಮನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಖುಷಿ ತಂದಿದೆ. ಇದು ನಮ್ಮ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಕೊರೊನಾ ಆರಂಭದಲ್ಲಿ ಸೃಷ್ಟಿಸಿದ ಆತಂಕವನ್ನು ಇಂದಿಗೂ ಮರೆಯುವಂತಿಲ್ಲ. ದೇವರ ಕೃಪೆಯಿಂದ ಈಗ ಕೊರೊನಾ ಹತೋಟಿಗೆ ಬಂದಿದ್ದು, ಎಲ್ಲ ಸಂಕಷ್ಟಗಳು ಆದಷ್ಟು ಬೇಗ ನಿವಾರಣೆಯಾಗಲಿ ಮತ್ತೆ ಜನಜೀವನ ಮೊದಲಿನಂತಾಗಲಿ’ ಎಂದು ಆಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT